ADVERTISEMENT

ಬಗರ್‌ ಹುಕ್ಕುಂ ಅಕ್ರಮ–ಸಕ್ರಮ ಸಮಿತಿ ರಚನೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 12:45 IST
Last Updated 27 ಸೆಪ್ಟೆಂಬರ್ 2019, 12:45 IST
ಕೆ.ಜಿ.ಸಂತೋಷ್
ಕೆ.ಜಿ.ಸಂತೋಷ್   

ಚಿಕ್ಕಮಗಳೂರು: ಬಗರ್‌ ಹುಕ್ಕುಂ ಅಕ್ರಮ–ಸಕ್ರಮ ಸಮಿತಿ ಪುನರ್ ರಚಿಸಬೇಕು. ಅರ್ಜಿ ವಿಲೇವಾರಿ ಶೀಘ್ರವಾಗಿ ನಡೆಸಬೇಕು ಎಂದು ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಜಿಲ್ಲಾಸಂಚಾಲಕ ಕೆ.ಜಿ.ಸಂತೋಷ್ ಇಲ್ಲಿ ಶುಕ್ರವಾರ ಒತ್ತಾಯಿಸಿದರು.

ರಾಜ್ಯದಲ್ಲಿ 4.5 ಲಕ್ಷ ಬಗರ್ ಅರ್ಜಿಗಳ ವಿಲೇವಾರಿ ಬಾಕಿ ಇದೆ. ಈ ಮಧ್ಯೆ ನಮೂನೆ 57ರಲ್ಲಿ ಮತ್ತಷ್ಟು ಮಂದಿ ಸಾಗುವಳಿ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ 55,102 ಬಗರ್ ಹುಕ್ಕುಂ ಅರ್ಜಿ ವಿಲೇವಾರಿ ಬಾಕಿ ಉಳಿದಿವೆ. ಸಮಿತಿ ರಚನೆಯಾಗದೆ, ಅರ್ಜಿ ವಿಲೇವಾರಿಯಾಗುತ್ತಿಲ್ಲ. ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದು ಸುದ್ಧಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.

1992–93, 1998–99, 2018–19ನೇ ಸಾಲಿನಲ್ಲಿ ತಿರಸ್ಕೃತವಾಗಿರುವ ಬಗರ್‌ಹುಕ್ಕುಂ ಅರ್ಜಿಗಳನ್ನು ಮರುಪರಿಶೀಲಿಸಬೇಕು. ನಮೂನೆ 57ರಲ್ಲಿ ಅರ್ಜಿ ಅಲ್ಲಿಸಲು ಮತ್ತೊಮ್ಮೆ ಅವಕಾಶ ನೀಡಬೇಕು. ಅರಣ್ಯ ಹಕ್ಕು ಕಾಯ್ದೆ 2006ರಡಿ ಸಲ್ಲಿಕೆಯಾಗಿರುವ ಅರ್ಜಿ ವಿಲೇವಾರಿ ಮಾಡಬೇಕು. ಜಿಲ್ಲೆಯಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆಯಿಂದ ನಡೆಸಿರುವ ಜಂಟಿ ಸರ್ವೆಯ ಮಾಹಿತಿಯನ್ನು ತಾಲ್ಲೂಕು ಕಚೇರಿ, ನಾಡಕಚೇರಿ ನಾಮಫಲಕದಲ್ಲಿ ಪ್ರಕಟಿಸಬೇಕು.

ADVERTISEMENT

ಬಗರ್‌ಹುಕ್ಕುಂ ಅಕ್ರಮ–ಸಕ್ರಮ ಸಮಿತಿಯಿಂದ ಜಮೀನು ಪಡೆದುಕೊಂಡವರಿಗೆ ಜಮೀನು ಅಭಿವರದ್ಧಿಗೊಳಿಸಲು ವಿಶೇಷ ಯೋಜನೆ ಜಾರಿಗೊಳಿಸಬೇಕು. ಜಮೀನು ಒತ್ತುವರಿ ನಿಷೇಧ ಕಾಯ್ದೆಯಡಿ ರೈತರ ಮೇಲೆ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು. ಗ್ರಾಮಪಂಚಾಯಿತಿ ವ್ಯಾಪ್ತಿಯ ಕೆರೆ, ಕಟ್ಟೆ, ಹಳ್ಳ, ಬಾವಿಗಳ ಒತ್ತುವರಿ ತೆರವುಗಳಿಸಬೇಕು. ಜಲಮೂಲ ಸಂರಕ್ಷಿಸಬೇಕು. ಇಲ್ಲವಾದಲ್ಲಿ ವಿವಿಧ ಸಂಘಟನೆಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವೇದಿಕೆ ಜಿಲ್ಲಾಧ್ಯಕ್ಷ ಹೆಗ್ಗಪ್ಪ, ಸದಸ್ಯ ಕೆಂಚಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.