ADVERTISEMENT

ಜನಸಾಗರದ ನಡುವೆ ದುರ್ಗಾದೇವಿ ಜಲಸ್ತಂಭನ

 ಸಂಭ್ರಮಕ್ಕೆ ಸಾಕ್ಷಿಯಾದ ಜನಸ್ತೋಮ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 5:23 IST
Last Updated 3 ಅಕ್ಟೋಬರ್ 2025, 5:23 IST
ಬಾಳೆಹೊನ್ನೂರಿನ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಆಯೋಜಿಸಿದ್ದ ದುರ್ಗಾದೇವಿ ಮಹೋತ್ಸವದ ಮೆರವಣಿಗೆಯಲ್ಲಿ ಕಂಡು ಬಂದ ಅಘೋರಿಗಳ ನೃತ್ಯ
ಬಾಳೆಹೊನ್ನೂರಿನ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಆಯೋಜಿಸಿದ್ದ ದುರ್ಗಾದೇವಿ ಮಹೋತ್ಸವದ ಮೆರವಣಿಗೆಯಲ್ಲಿ ಕಂಡು ಬಂದ ಅಘೋರಿಗಳ ನೃತ್ಯ   

ಬಾಳೆಹೊನ್ನೂರು: ಇಲ್ಲಿನ ಮಾರ್ಕಂಡೇಶ್ವರ ದೇವಸ್ಥಾನದ ಆವರಣದಲ್ಲಿ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಪ್ರತಿಷ್ಠಾಪಿಸಿದ್ದ 16ನೇ ವರ್ಷದ ದುರ್ಗಾದೇವಿ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ ಅಪಾರ ಜನರ ನಡುವೆ ಸಂಪನ್ನಗೊಂಡಿತು.

ಸೆ.22ರಂದು ಪ್ರತಿಷ್ಠಾಪಿಸಿದ್ದ ದುರ್ಗಾದೇವಿ ಮೂರ್ತಿಗೆ ನಿತ್ಯ ವಿವಿಧ ಪೂಜೆಗಳನ್ನು ಸಲ್ಲಿಸಲಾಗುತ್ತಿತ್ತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು. ಸಮಾರೋಪದಲ್ಲಿ ಕಾಸರಗೋಡಿನ ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರಿಂದ ಆಶೀರ್ವಚನ, ನಿಟ್ಟೆ ಡೀಮ್ಡ್ ವಿವಿಯ ಡಾ.ಸುಧೀರ್ ರಾಜ್ ಅವರಿಂದ ಧಾರ್ಮಿಕ ಪ್ರವಚನ ನಡೆಯಿತು.

ಗುರುವಾರ ದುರ್ಗಾದೇವಿ ವಿಸರ್ಜನೆಯ ಅಂಗವಾಗಿ ಬೆಳಿಗ್ಗೆ ಬೀದರ್‌ನ ಶಿವಾನಂದ ಸ್ವಾಮಿ ನೇತೃತ್ವದ ಎಸ್.ಎಸ್.ಮೆಲೋಡಿ ಮ್ಯೂಸಿಕಲ್ಸ್ ಅವರಿಂದ ‘ಸುಗಮ ಸಂಗೀತ ರಸಮಂಜರಿ ಕಾರ್ಯಕ್ರಮ’, ಲಾಟರಿ ಡ್ರಾ ಹಾಗೂ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು.

ADVERTISEMENT

ಮದ್ಯಾಹ್ನ ವಿಸರ್ಜನಾ ಪೂಜೆಯ ನಂತರ ಮಾರ್ಕಂಡೇಶ್ವರ ದೇವಸ್ಥಾನದಿಂದ ಸಾಗಿದ ಮೆರವಣಿಗೆ ಬಸ್ ನಿಲ್ದಾಣದ ಮೂಲಕ ಜೆಸಿ ವೃತ್ತ ತಲುಪಿತು. ದುರ್ಗಾದೇವಿ ಸೇವಾ ಸಮಿತಿ ಅಧ್ಯಕ್ಷ ಎಚ್.ಡಿ.ನಾಗೇಶ್ ಹೆಗಡೆ, ವೆನಿಲ್ಲಾ ಭಾಸ್ಕರ್ , ಬಿ.ಚೆನ್ನಕೇಶವಗೌಡ ಬರಗಲ್ ಹಾಗೂ ಸದಸ್ಯರು ಮೆರವಣಿಗೆಯ ಮುಂಚೂಣಿಯಲ್ಲಿದ್ದರು.

ಮೆರೆವಣಿಗೆ ಬಾಲಸುಬ್ರಹ್ಮಣ್ಯ ದೇವಸ್ಥಾನದ ಮೂಲಕ ಭದ್ರಾನದಿ ದಂಡೆಗೆ ಸಾಗಿ ವಿವಿಧ ಧಾರ್ಮಿಕ ವಿಧಿ–ವಿಧಾನಗಳೊಂದಿಗೆ ದುರ್ಗಾದೇವಿಯನ್ನು ಭದ್ರಾ ನದಿಯಲ್ಲಿ ಜಲಸ್ತಂಭನಗೊಳಿಸಲಾಯಿತು.

ಡಿವೈಎಸ್ಪಿ ಬಾಲಾಜಿ ಸಿಂಗ್ ನೇತೃತ್ವದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಜಲಸ್ತಂಭನಾ ಶೋಭಾ ಯಾತ್ರೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.

ಮೃತ್ಯಂಬಿಕಾ ಅಮ್ಮನವರ ವಿಜಯ ದಶಮಿ ಉತ್ಸವ

ಬಾಳೆಹೊನ್ನೂರು: ಪಟ್ಟಣದ ಮೃತ್ಯಂಬಿಕಾ ಹಾಗೂ ಮಾರಿಕಾಂಬಾ ದೇವಸ್ಥಾನದ ವಿಜಯದಶಮಿ ಉತ್ಸವವು ಗುರುವಾರ ವಿಜೃಂಭಣೆಯಿಂದ ನಡೆಯಿತು.

ಬೆಳಗ್ಗಿನಿಂದಲೇ ದೇವಾಲಯದಲ್ಲಿ ಹೂವಿನಪೂಜೆ, ಅಭಿಷೇಕ, ನೈವೇದ್ಯ, ಮಂಗಳಾರತಿ ‌ನೆರವೇರಿಸಲಾಯಿತು. ಬಳಿಕ ದೇವಾಲಯದಿಂದ ದೇವಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಮೂಲಕ ಪಟ್ಟಣದ ಮುಖ್ಯಬೀದಿಯಲ್ಲಿ ಕೊಂಡೊಯ್ದು ಭದ್ರಾನದಿಯಲ್ಲಿ ಗಂಗಾಪೂಜೆ, ಗಂಗಾಸ್ನಾನ ನೆರವೇರಿಸಲಾಯಿತು.

ಅಲ್ಲಿಂದ ಹೊರಟ ಉತ್ಸವ ದೇವಾಲಯದ ಆವರಣದಲ್ಲಿ ಸಮಾಪ್ತಿಗೊಂಡು ಅಂಬು ಹೊಡೆಯುವ ಸಾಂಪ್ರದಾಯಿಕ ಕಾರ್ಯಕ್ರಮ ನಡೆಯಿತು. ಬಳಿಕ ದೇವಾಲಯದ ಸುತ್ತಲೂ ದೇವರ ಉತ್ಸವ ಮೂರ್ತಿಗಳನ್ನು ವಿವಿಧ ವಾದ್ಯಗೋಷ್ಠಿಗಳೊಂದಿಗೆ ಪ್ರದಕ್ಷಿಣೆ ಹಾಕಿ ದೇವಸ್ಥಾನದ ಒಳ ಪ್ರವೇಶಿಸಿ ಪೂಜೆ ನೆರವೇರಿಸಲಾಯಿತು.

ಪ್ರಧಾನ ಅರ್ಚಕ ಕೆ.ಎಸ್.ಪ್ರಕಾಶ್ ಭಟ್ ಸಂಗಡಿಗರು ಧಾರ್ಮಿಕ ವಿಧಿಗಳ ನೇತೃತ್ವ ವಹಿಸಿದ್ದರು. ದೇವಸ್ಥಾನ ಸಮಿತಿಯ ಎಚ್.ಡಿ.ನಾಗೇಶ್ ಹೆಗ್ಡೆ, ಅಕ್ಷಯ್ ಹೆಗ್ಡೆ, ಬಿ.ಕೆ.ಮಧುಸೂಧನ್, ಟಿ.ಎಂ.ನಾಗೇಶ್, ಟಿ.ಎಂ.ಉಮೇಶ್ ಕಲ್ಮಕ್ಕಿ, ಹಿರಿಯಣ್ಣ, ಮನುಕುಮಾರ್, ಚಂದ್ರಶೇಖರ್ ಬಾಬುಲಿ, ಅನಿಶ್‍ಕುಮಾರ್ ಸೇರಿದಂತೆ ದೊಡ್ಡಮನೆ ಕುಟುಂಬದವರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.

ಬಾಳೆಹೊನ್ನೂರಿನ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಆಯೋಜಿಸಿದ್ದ ದುರ್ಗಾದೇವಿ ಮಹೋತ್ಸವದ ಜಲಸ್ತಂಭನಾ ಮೆರವಣಿಗೆ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.