ಚಿಕ್ಕಮಗಳೂರು: ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ಮಾಡುವ ಧೋರಣೆ ವಿರೋಧಿಸಿ ಮತ್ತು ಕಾರ್ಮಿಕರಿಗೆ ಕನಿಷ್ಠ ವೇತನ ಕಾಯ್ದೆ ಜಾರಿ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ಬ್ಯಾಂಕ್ ನೌಕರರ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಗುರುನಾಥ ಟಾಕೀಸ್ ಸಮೀಪದ ಕೆನರಾ ಬ್ಯಾಂಕ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ನೌಕರರು, ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆರ್.ಬಸವರಾಜ್ ಮಾತನಾಡಿ, ‘ಕೇಂದ್ರ ಸರ್ಕಾರದ ಜನ ವಿರೋಧಿ, ಕಾರ್ಮಿಕ ವಿರೋಧಿ, ರೈತ ವಿರೋಧಿ ಧೋರಣೆ, ಕಾರ್ಮಿಕರ ಕಾನೂನುಗಳಿಗೆ ತಿದ್ದುಪಡಿ ತರುವುದನ್ನು ಖಂಡಿಸಿ ರಾಷ್ಟ್ರವ್ಯಾಪಿ ನೌಕರರು ಸಾರ್ವತಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.
ಸಾರ್ವಜನಿಕ ಬ್ಯಾಂಕ್‌ಗಳನ್ನು ಬಲಪಡಿಸಬೇಕು. ಬ್ಯಾಂಕ್ ಮತ್ತು ವಿಮಾ ಕಂಪನಿಗಳ ಖಾಸಗೀಕರಣ ನಿಲ್ಲಿಸಬೇಕು. ಬಂಡವಾಳ ಹಿಂತೆಗೆತ, ರಾಷ್ಟ್ರೀಕೃತ ಬ್ಯಾಂಕ್ ಮತ್ತು ವಿಮಾ ಕಂಪನಿಗಳ ವಿಲೀನ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ನೌಕರರ ಗುತ್ತಿಗೆ ಆಧಾರ ಹಾಗೂ ಹೊರ ಗುತ್ತಿಗೆ ನಿಲ್ಲಿಸಬೇಕು. ಎನ್‌ಪಿಸಿ ವ್ಯವಸ್ಥೆಯನ್ನು ವಜಾಗೊಳಿಸಿ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು. ಗ್ರಾಹಕರ ಸುಲಿಗೆಗೆ ಕಾರಣವಾಗಿರುವ ಸರ್ವೀಸ್ ಚಾರ್ಚ್ ವ್ಯವಸ್ಥೆ ನಿಲ್ಲಿಸಬೇಕು. ಎಲ್‌ಐಸಿ ಕಂತುಗಳ ಮೇಲೆ ವಿಧಿಸುತ್ತಿರುವ ಜಿಎಸ್‌ಟಿ ಶುಲ್ಕವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ನೌಕರರಿಗೆ ಬ್ಯಾಂಕ್‌ಗಳಲ್ಲಿ ಸಾಕಷ್ಟು ನೇಮಕಾತಿ ಮಾಡಲು, ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಕೆ.ನಾಗರಾಜ್, ಸಂಘಟನಾ ಕಾರ್ಯದರ್ಶಿ ಉಜ್ವಲ್ ಪಡುಬಿದ್ರಿ, ನೌಕರರಾದ ದಾನೇಂದ್ರ, ಪ್ರದೀಪ್‌ಕುಮಾರ್, ನಿವೃತ್ತ ನೌಕರ ಎಚ್.ಟಿ.ಹಾಲಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.