ADVERTISEMENT

ಕಡೂರಿನ ಜನತೆಗೆ ‌ದೀಪಾವಳಿ ಕೊಡುಗೆ

ಭದ್ರಾ ಉಪ ಕಣಿವೆ ಯೋಜನೆಗೆ ಸರ್ಕಾರ ಅನುಮೋದನೆ– ಶಾಸಕ ಬೆಳ್ಳಿಪ್ರಕಾಶ್ ಸಂತಸ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 4:08 IST
Last Updated 14 ನವೆಂಬರ್ 2020, 4:08 IST
ಕಡೂರಿನಲ್ಲಿ ಶಾಸಕ ಬೆಳ್ಳಿಪ್ರಕಾಶ್ ಪತ್ರಿಕಾಗೋಷ್ಠಿಯಲ್ಲಿ ಭದ್ರಾ ಉಪಕಣಿವೆ ಯೋಜನೆಯ ನಕ್ಷೆ ಪ್ರದರ್ಶಿಸಿದರು
ಕಡೂರಿನಲ್ಲಿ ಶಾಸಕ ಬೆಳ್ಳಿಪ್ರಕಾಶ್ ಪತ್ರಿಕಾಗೋಷ್ಠಿಯಲ್ಲಿ ಭದ್ರಾ ಉಪಕಣಿವೆ ಯೋಜನೆಯ ನಕ್ಷೆ ಪ್ರದರ್ಶಿಸಿದರು   

ಕಡೂರು: ‘ಭದ್ರಾ ಉಪ ಕಣಿವೆಯ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿರುವುದು ತಾಲ್ಲೂಕಿನ ಜನತೆಗೆ ದೀಪಾವಳಿಯ ಕೊಡುಗೆ’ ಎಂದು ಶಾಸಕ ಬೆಳ್ಳಿಪ್ರಕಾಶ್ ಹರ್ಷ ವ್ಯಕ್ತಪಡಿಸಿದರು.

ಕಡೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಾಲ್ಲೂಕಿನ ರೈತರ ಶಾಶ್ವತ ನೀರಾವರಿ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ. ಭದ್ರಾ ಜಲಾಶಯದಿಂದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಕಡೂರು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಒಟ್ಟು 197 ಕೆರೆಗಳಿಗೆ ನೀರು ತುಂಬಿಸುವ ₹ 1,281.80 ಕೋಟಿ ಯೋಜನೆಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಯೋಜನೆ ಒಟ್ಟು ಮೂರು ಹಂತದಲ್ಲಿ ಅನುಷ್ಠಾನಗೊಳ್ಳಲಿದ್ದು, ಮೊದಲ ಹಂತದಲ್ಲಿ ₹ 406.50 ಕೋಟಿ, 2ನೇ ಹಂತದಲ್ಲಿ ₹ 298.60 ಕೋಟಿ, ಮೂರನೇ ಹಂತದಲ್ಲಿ ₹ 476.07 ಕೋಟಿ ಹಣ ಬಿಡುಗಡೆಯಾಗಲಿದೆ. ಈ ಯೋಜನೆಯಲ್ಲಿ ತರೀಕೆರೆಯ 31, ಕಡೂರಿನ 114, ಚಿಕ್ಕಮಗಳೂರಿನ 48 ಮತ್ತು ಅರಸೀಕೆರೆ ತಾಲ್ಲೂಕಿನ 4 ಕೆರೆಗಳಿಗೆ ನೀರು ಹರಿಯಲಿದೆ. ಯೋಜನೆಯ ಸಿಂಹಪಾಲನ್ನು ಕಡೂರು ಪಡೆದಿದೆ. 2025 ಕ್ಕೆ ಯೋಜನೆ ಪೂರ್ಣ ಅನುಷ್ಠಾನಗೊಳ್ಳಲಿದೆ’ ಎಂದರು.

ಬಹುದಿನಗಳ ಕನಸಾದ ಈ ಯೋಜನೆ ಅನುಮೋದನೆಗೊಳ್ಳಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಂಸದೆ ಶೋಭಾ ಕರಂದ್ಲಾಜೆ ಅವರುವಿಶೇಷ ಪ್ರಯತ್ನ ನಡೆಸಿದ್ದಾರೆ. ಯೋಜನೆಗೆ ಅನುಮೋದನೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಮತ್ತು ಈ ಯೋಜನೆಯ ಬಗ್ಗೆ ಮಾರ್ಗದರ್ಶನ ನೀಡಿದ ತರಳಬಾಳು ಸ್ವಾಮೀಜಿ, ಬಿ.ವೈ.ವಿಜಯೇಂದ್ರ ಅವರಿಗೆ ಕೃತಜ್ಞತೆಗಳು. ಅಲ್ಲದೆ, ಕಡೂರಿಗೆ 1.45 ಟಿಎಂಸಿ ಅಡಿ ನೀರು ಸಿಗಲು ಪ್ರಮುಖ ಪಾತ್ರ ವಹಿಸಿದ ಹಿಂದಿನ ಜಲಸಂನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮತ್ತು ತಾಲ್ಲೂಕಿನ ನೀರಾವರಿ ಹೋರಾಟಗಾರರಿಗೆ ಜನತೆಯ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ’ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್.ಮಹೇಶ ಒಡೆಯರ್, ರೈತ ಸಂಘದ ನಿರಂಜನ ಮೂರ್ತಿ, ಬೀರೂರು ಪುರಸಭಾಧ್ಯಕ್ಷ ಸುದರ್ಶನ್, ವಕೀಲರಾದ ಬೊಮ್ಮಣ್ಣ ಮತ್ತು ಜಯಣ್ಣ, ಮುಖಂಡರಾದ ಅರೇಕಲ್ ಪ್ರಕಾಶ್, ದಾನಿ ಉಮೇಶ್, ಮಲ್ಲಿದೇವಿಹಳ್ಳಿ ಸತೀಶ್, ಬಿಜೆಪಿ ಮಂಡಲಾಧ್ಯಕ್ಷ ಬಿ.ಪಿ.ದೇವಾನಂದ್, ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಎಚ್.ಶಂಕರ್, ಜಿಗಣೇಹಳ್ಳಿ ನೀಲಕಂಠಪ್ಪ, ವಕ್ತಾರ ಶಾಮಿಯಾನ ಚಂದ್ರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.