ADVERTISEMENT

ಆತಂಕದಲ್ಲಿಯೇ ದಿನ ಕಳೆಯುವ ಅಡಿಕೆ ಕೃಷಿಕರು

ರೈತ–ಚೇಣಿದಾರ-ವ್ಯಾಪಾರಿ ನಡುವಿನ ಹಾವು ಏಣಿ ಆಟ: ಮುಗಿಯದ ಆತಂಕ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2019, 15:39 IST
Last Updated 6 ಅಕ್ಟೋಬರ್ 2019, 15:39 IST
ಅಡಿಕೆ ತೋಟದಲ್ಲಿ ಕೊಯಿಲು ಮಾಡಿ ತುಡಿಕೆಮನೆಯಲ್ಲಿ ಸುಲಿಯಲು ರಾಶಿ ಮಾಡಿರುವ ಹಸಿ ಅಡಿಕೆ.
ಅಡಿಕೆ ತೋಟದಲ್ಲಿ ಕೊಯಿಲು ಮಾಡಿ ತುಡಿಕೆಮನೆಯಲ್ಲಿ ಸುಲಿಯಲು ರಾಶಿ ಮಾಡಿರುವ ಹಸಿ ಅಡಿಕೆ.   

ಬೀರೂರು: ಪ್ರಮುಖವಾಗಿ ಅಡಿಕೆ ಬೆಳೆಯುವ ಮತ್ತು ಅದನ್ನೇ ಅವಲಂಬಿಸಿ ಬದುಕು ಕಟ್ಟಿಕೊಳ್ಳುವ ಸಾವಿರಾರು ಕುಟುಂಬಗಳಿವೆ ಇಲ್ಲಿವೆ. ಒಂದು ಎಕರೆಯಿಂದ 50 ಎಕರೆವರೆಗೆ ತೋಟ ಹೊಂದಿದ ರೈತರು, ಅಡಿಕೆಯನ್ನೇ ಅವಲಂಬಿಸಿ ಬದುಕುವ ಕುಟುಂಬಗಳು ಇದೀಗ ಆತಂಕದ ಸ್ಥಿತಿ ಎದುರಿಸುತ್ತಿವೆ.

ಈ ಬಾರಿ ಸಕಾಲದಲ್ಲಿ ಮಳೆ ಬಾರದ್ದರಿಂದ ಫಸಲು ಕಡಿಮೆಯಾಗಿ, ಅಡಿಕೆ ಕೃಷಿಯನ್ನೇ ನಂಬಿ ಬದುಕುವ ಸಣ್ಣ ರೈತರ ಬದುಕಿಗೆ ಆತಂಕದ ಬಿಸಿ ತಾಗುತ್ತಿದ್ದರೆ, ಏರುತ್ತಿರುವ ಕೂಲಿ, ನಿರೀಕ್ಷೆ ತಲುಪದ ದರ, ಕೊಯಿಲಿನ ಸಂದರ್ಭದಲ್ಲಿ ಸುರಿದು ಅಡಚಣೆ ಉಂಟು ಮಾಡುತ್ತಿರುವ ಮಳೆ, ಹಬ್ಬದ ಸಾಲಿನಲ್ಲಿ ರೈತರು ಮತ್ತು ಕಾರ್ಮಿಕರಿಗೆ ಹಣ ಒದಗಿಸಿಕೊಡಬೇಕಾದ ಅನಿವಾರ್ಯತೆ ಚೇಣಿದಾರನನ್ನು ಹಣ್ಣಾಗಿಸುತ್ತಿದೆ. ಸಾಲದ್ದಕ್ಕೆ ಈ ವಾರದ ಆರಂಭದಲ್ಲಿ ರಾಜಸ್ಥಾನ ಸರ್ಕಾರ ಗುಟ್ಕಾ ನಿಷೇಧದ ಹೇಳಿಕೆ ಹೊರಡಿಸಿರುವುದು ದರ ಕುಸಿತಕ್ಕೆ ಕಾರಣವಾಗಬಹುದೇನೋ ಎನ್ನುವ ಆತಂಕ ಬೇರೆ.

ಪ್ರಮುಖ ವಾಣಿಜ್ಯ ಬೆಳೆಯಾಗಿ ರಾಜ್ಯದಲ್ಲಿ ಗುರುತಿಸಲಾಗಿರುವ ಅಡಿಕೆ ರಾಜ್ಯದ ಮಲೆನಾಡಾದ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಬಯಲುಸೀಮೆಯ ದಾವಣಗೆರೆ, ತುಮಕೂರು, ಕರಾವಳಿಯ ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಲೆಕ್ಕ ಹಾಕಿದರೆ, ಲಕ್ಷಾಂತರ ಕುಟುಂಬಗಳ ಅವಲಂಬನೆಯ ಉದ್ಯೋಗವಾಗಿ ಬೆಳೆದು ಬಂದಿದೆ. ತನ್ನನ್ನು ನಂಬಿ ಬದುಕುವ ಲಕ್ಷಾಂತರ ಕುಟುಂಬಗಳ ಕಣ್ಣುಗಳಲ್ಲಿ ದೀಪಾವಳಿ ಕಾಣಿಸುವ ಅಡಿಕೆ, ಮನೆಯಲ್ಲಿ ಮದುವೆ ಮಾಡುವ, ಮನೆಕಟ್ಟುವ, ವಾಹನ ಕೊಳ್ಳುವ, ಮಕ್ಕಳ ಓದಿಗೆ ಸುಲಭವಾಗಿ ಸಾಲ ಗಿಟ್ಟಿಸಿಕೊಳ್ಳುವ, ಆಭರಣ ಧರಿಸುವ ಕನಸಿಗೆ ನೀರೆರೆವ ಬೆಳೆಯೂ ಹೌದು.

ADVERTISEMENT

ಒಂದೆಡೆ ಅಡಿಕೆ ಧಾರಣೆ ಕುಸಿತ ಭೀತಿಯಲ್ಲಿ ವರ್ತಕರು, ಚೇಣಿ ಪಡೆದವನು ಕಡೆಗೆ ದುಡ್ಡು ಕೊಡ್ತಾನೋ, ಇಲ್ಲವೋ ಎನ್ನುವ ಆತಂಕದಲ್ಲಿ ರೈತ ಮತ್ತು ಅಡಿಕೆ ಸುಲಿಯುವವರು, ಚೇಣಿ ಕೊಟ್ಟವರಿಗೆ ದುಡ್ಡು ಕೊಡೋದು ಹೇಗೆ ಎನ್ನುವ ಚಿಂತೆಯಲ್ಲಿ ಚೇಣಿದಾರ, ಈ ಎಲ್ಲದರ ನಡುವೆ ಈಗಾಗಲೇ ಹೆಚ್ಚು ಹಣ ತೆತ್ತು ಸಂಗ್ರಹಿಸಿರುವ ಅಡಿಕೆ ಮಾರುವುದು ಹೇಗೆ ಮತ್ತು ಯಾರಿಗೆ? ಎನ್ನುವ ಸಮಸ್ಯೆಯಲ್ಲಿ ಮಂಡಿ ದಲ್ಲಾಳಿ, ಹೀಗೆ ಒಂದಿಡೀ ಸಂಕುಲವನ್ನೇ ತವಕ-ತಲ್ಲಣಗಳ ಸುಳಿಗೆ ಸಿಲುಕಿಸಿರುವ ಅಡಿಕೆ, ಎಲ್ಲರ ಕೈ ಹಿಡಿದೀತೇ ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ.

‘ಈ ಬಾರಿ ಮಳೆಯ ಕೊರತೆ ಅಥವಾ ಅತಿವೃಷ್ಟಿ ಕೂಡಾ ಬೆಳೆಯ ಮೇಲೆ ಪರಿಣಾಮ ಬೀರಿದೆ. ಹಲವು ಭಾಗಗಳಲ್ಲಿ ಅಡಿಕೆ ಕೃಷಿಗೆ ಪೆಟ್ಟು ಬಿದ್ದಿದ್ದು, ದರ ಹೆಚ್ಚಬಹುದೇನೋ ಎನ್ನುವ ರೈತರ ಆಸೆಗೆ, ವರ್ತಕರು ಕಲಬೆರಕೆಗೆ ನೀಡುವ ಸಹಕಾರದಿಂದ ದರ ನಿಂತ ನೀರಾಗುವ ಸಂಭವವೂ ಇದೆ’ ಎನ್ನುವುದು ಚೇಣಿದಾರ ರವಿ ಅವರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.