ADVERTISEMENT

ಭದ್ರಾ ಉಪಕಣಿವೆ ಯೋಜನೆ: ಭದ್ರೆಯ ಕನವರಿಕೆಯಲ್ಲಿ ಕಡೂರು

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 6:11 IST
Last Updated 28 ಜೂನ್ 2025, 6:11 IST
ಬೀರೂರು ಹೋಬಳಿಯ ದೇವನಕೆರೆಯಲ್ಲಿ ನೀರನ್ನು ಸಂಗ್ರಹಿಸಿ ಎತ್ತುವಳಿ ಮಾಡಲು ನಿರ್ಮಾಣವಾಗುತ್ತಿರುವ ಪಂಪ್‌ಹೌಸ್‌
ಬೀರೂರು ಹೋಬಳಿಯ ದೇವನಕೆರೆಯಲ್ಲಿ ನೀರನ್ನು ಸಂಗ್ರಹಿಸಿ ಎತ್ತುವಳಿ ಮಾಡಲು ನಿರ್ಮಾಣವಾಗುತ್ತಿರುವ ಪಂಪ್‌ಹೌಸ್‌   

ಕಡೂರು: ಡಾ.ಡಿ.ಎಂ.ನಂಜುಂಡಪ್ಪ ವರದಿಯಂತೆ ಅತ್ಯಂತ ಹಿಂದುಳಿದ ಹಾಗೂ ಅತಿ ಹೆಚ್ಚು ಅಂತರ್ಜಲ ಬಳಕೆಯ ತಾಲ್ಲೂಕು ಎನ್ನುವ ಹಣೆಪಟ್ಟಿ ಕಳಚಿಕೊಳ್ಳಲು ಕಡೂರು ತಾಲ್ಲೂಕು ಭದ್ರಾ ನದಿ ನೀರಿನ ನಿರೀಕ್ಷೆಯಲ್ಲಿದೆ. ಭದ್ರಾ ಉಪಕಣಿವೆ ಯೋಜನೆ ಶೀಘ್ರವಾಗಿ ಅನುಷ್ಠಾನಗೊಂಡರೆ ತಾಲ್ಲೂಕಿನ ಬರಪೀಡಿತ ಪ್ರದೇಶದ ಚಿತ್ರಣ ಬದಲಾಗಬಹುದು ಎಂಬುದನ್ನು ಇಲ್ಲಿನ ಜನ ಎದುರು ನೋಡುತ್ತಿದ್ದಾರೆ.

ಕೃಷ್ಣಾ ನದಿ ಕೊಳ್ಳದ ಮೂಲಕ ಹೆಚ್ಚುವರಿ ಹಂಚಿಕೆಯಾದ 1.45 ಟಿಎಂಸಿ ಅಡಿ ನೀರನ್ನು ಸದುಪಯೋಗಪಡಿಸಿಕೊಳ್ಳಲು ಆರಂಭಗೊಂಡ ಭದ್ರಾ ಉಪಕಣಿವೆ ಯೋಜನೆಯು ಶಾಂತಿಪುರ ಏತ ನೀರಾವರಿ ಯೋಜನೆಯ ಸಮೀಪದಿಂದ ನದಿ ತಿರುಗಿಸಿ ಬೀರೂರು ಹೋಬಳಿಯ ದೇವನಕೆರೆಯಲ್ಲಿ ಸಂಗ್ರಹಿಸಿ ನಂತರ ಅದನ್ನು ಮದಗದಕೆರೆಗೆ ಹಾಯಿಸುವುದು, ನಡುವೆಯೇ ಅದರ 16 ಸರಣಿ ಕೆರೆಗಳನ್ನು ತುಂಬಿಸುವುದು ಸೇರಿದಂತೆ ಕಡೂರು ತಾಲ್ಲೂಕಿನ 87 ಕೆರೆಗಳಿಗೆ ಈ ಯೋಜನೆಯ ಮೂಲಕ ನೀರು ಹರಿಯಲಿದೆ.

ಯೋಜನೆಯು 4 ಹಂತಗಳಲ್ಲಿ ಅನುಷ್ಠಾನಗೊಳ್ಳಲಿದ್ದು, ಮೊದಲ ಹಂತದಲ್ಲಿ ತರೀಕೆರೆ ತಾಲ್ಲೂಕಿನ 51, ಕಡೂರು ತಾಲ್ಲೂಕಿನ 3 ಕೆರೆಗಳಿಗೆ ನೀರು ಹರಿಯುವುದು, ಎರಡನೇ ಹಂತದಲ್ಲಿ ಕಡೂರು ತಾಲ್ಲೂಕಿನ 73, ಚಿಕ್ಕಮಗಳೂರು ಭಾಗದ 3 ಹಾಗೂ ಅರಸೀಕೆರೆ ಭಾಗದ 2 ಕೆರೆಗಳು ಯೋಜನೆಯ ಪ್ರಯೋಜನ ಪಡೆಯಲಿವೆ. ಮೂರನೇ ಹಂತದಲ್ಲಿ ಚಿಕ್ಕಮಗಳೂರು ಭಾಗದ 69 ಹಾಗೂ ಕಡೂರು ತಾಲ್ಲೂಕಿನ 11 ಕೆರೆಗಳಿಗೆ ನೀರು ತುಂಬಿಸುವುದು, ನಾಲ್ಕನೇ ಹಂತದಲ್ಲಿ ಯೋಜನೆಯ ಅಡಿ ಇರುವುದರಲ್ಲಿ ಆಯ್ದ ಕೆರೆಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಸೇರಿದೆ.

ADVERTISEMENT

ಮೊದಲ ಹಂತದ ಯೋಜನೆಯ ಅನುಷ್ಠಾನಕ್ಕೆ ₹ 464 ಕೋಟಿ ಬಿಡುಗಡೆಯಾಗಿ ಶೇ 90ರಷ್ಟು ಕಾಮಗಾರಿ ಮುಗಿದಿದೆ. 2ನೇ ಹಂತದ ಕಾಮಗಾರಿ ಶೇ 40ರಷ್ಟು ಮುಕ್ತಾಯವಾಗಿದ್ದು, ಶೇ 35ರಷ್ಟು ಪೈಪ್‌ಲೈನ್‌ ಅಳವಡಿಕೆ ಮುಕ್ತಾಯಗೊಂಡಿದೆ. ಬೀರೂರು ಹೋಬಳಿಯ ದೇವನಕೆರೆಯಲ್ಲಿ ಪಂಪ್‌ಹೌಸ್‌ ನಿರ್ಮಾಣ ಪ್ರಗತಿಯಲ್ಲಿದೆ. ಮದಗದಕೆರೆ ಕಡೆಯಿಂದ ರೈಸಿಂಗ್‌ ಮೈನ್‌ ಕೆಲಸವೂ ಚುರುಕುಗೊಂಡಿದ್ದು ಪೈಪ್‌ಲೈನ್‌ ಅಳವಡಿಸಲಾಗುತ್ತಿದೆ. ಕಡೂರು ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಳ್ಳಬೇಕಿದ್ದು 11-1 ನೋಟಿಫಿಕೇಷನ್‌ ಸದ್ಯದಲ್ಲಿಯೇ ಜಾರಿಯಾಗಲಿದೆ. ಕಡೂರು ತಾಲ್ಲೂಕಿನ ಖಂಡುಗದಹಳ್ಳಿ, ಸೂರಾಪುರ ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಸಂದರ್ಭದಲ್ಲಿ ಪರಿಹಾರ ವಿತರಣೆಯಲ್ಲಿ ತಾರತಮ್ಯ ಎಸಗಲಾಗಿದೆ ಎನ್ನುವ ದೂರು ರೈತರಿಂದ ಬಂದಿದೆ. ಪರಿಹಾರ ಪಡೆದ ಹಲವು ರೈತರು ಹೆಚ್ಚಿನ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಿರುವುದರಿಂದ ಈ ಭಾಗದಲ್ಲಿ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ.‌

ತರೀಕೆರೆ ತಾಲ್ಲೂಕಿನಲ್ಲಿ ರೈತರಿಗೆ ಇದುವರೆಗೆ ಸುಮಾರು ₹ 16 ಕೋಟಿ ಪರಿಹಾರ ವಿತರಿಸಲಾಗಿದೆ. ಇನ್ನೂ ಸುಮಾರು ₹ 10 ಕೋಟಿ ಆ ಭಾಗಕ್ಕೆ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಕಡೂರು ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ನೋಟಿಫಿಕೇಷನ್‌ ಜಾರಿಯಾಗಬೇಕಿದೆ. 1 ಮೀ. ವ್ಯಾಸದ ಪೈಪ್‌ ಅಳವಡಿಕೆಗೆ ಮಾತ್ರ ಭೂ ಸ್ವಾಧೀನ ಪಡಿಸಿಕೊಳ್ಳಲಾಗುತ್ತದೆ. ಮೊದಲ ಹಂತದಲ್ಲಿ 57 ಕಿ.ಮೀ ಪೈಪ್‌ಲೈನ್‌ ಅಳವಡಿಕೆಯಲ್ಲಿ ಅಂದಾಜು 53 ಕಿ.ಮೀನಷ್ಟು ಅಳವಡಿಸಲಾಗಿದೆ.

ಮದಗದಕೆರೆಯ ಒಂದು ನೋಟ

1 ಮೀಟರ್‌ಗಿಂತ ಕಡಿಮೆ ವ್ಯಾಸದಲ್ಲಿ ಥರ್ಮೋಪಾಲಿಥೀನ್‌ನಿಂದ ತಯಾರಾದ ಪ್ಲಾಸ್ಟಿಕ್‌ ಪೈಪ್‌ಗಳು ಬಳಕೆಯಾಗಿದ್ದು, ಇಲ್ಲಿ ಭೂ ಸ್ವಾಧೀನದ ಅಗತ್ಯವಿಲ್ಲ. ಈ ಪೈಕಿ ಸುಮಾರು 64 ಕಿ.ಮೀ ಪೈಪ್‌ಲೈನ್‌ ಅಳವಡಿಕೆ ಪೈಕಿ ಅಂದಾಜು 57 ಕಿ.ಮೀನಷ್ಟು ಅಳವಡಿಸಲಾಗಿದೆ ಎನ್ನುತ್ತಾರೆ ಯೋಜನೆಯ ಎಂಜಿನಿಯರ್‌.

ಎರಡನೇ ಹಂತದ ಯೋಜನೆಯನ್ನು ನಬಾರ್ಡ್‌ಗೆ ಸೇರಿಸಿದ್ದೇನೆ. ಮೂರನೇ ಹಂತಕ್ಕೆ ₹ 407 ಕೋಟಿ ಹಣ ಬಿಡುಗಡೆ ಮಾಡಿಸಿದ್ದೇನೆ. ಕಡೂರು ಭಾಗವನ್ನು ನೀರಾವರಿಗೆ ಒಳಪಡಿಸಿ ಮಾದರಿ ಕ್ಷೇತ್ರವಾಗಿಸುವುದು ನನ್ನ ಕನಸು. ಅದಕ್ಕಾಗಿ ನಿರಂತರ ಶ್ರಮ ಪಡಲು ಸಿದ್ಧನಿದ್ದೇನೆ. ಮೊದಲ ಮತ್ತು ಎರಡನೇ ಹಂತದ ಕೆಲಸಗಳು ಬಹುತೇಕ ಮುಕ್ತಾಯಗೊಂಡಿದ್ದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯನ್ನು ಕರೆಸಿ ಯೋಜನೆಯ ಹಂತಗಳನ್ನು ಉದ್ಘಾಟಿಸಲಾಗುವುದು ಎಂದು ಶಾಸಕ ಕೆ.ಎಸ್‌.ಆನಂದ್‌ ತಿಳಿಸಿದರು.

ಬೀರೂರು ಹೊರವಲಯದ ಯಗಟಿ ರಸ್ತೆಯಲ್ಲಿ ಪೈಪ್‌ ಅಳವಡಿಸುತ್ತಿರುವುದು
ಮದಗದಕೆರೆ ಸಮೀಪದ ಲಕ್ಕೇನಹಳ್ಳಿ ಬಳಿ ಪೈಪ್‌ಲೈನ್‌ ಕಾಮಗಾರಿ ಮಾಡುತ್ತಿರುವುದು
ಸೆಪ್ಟೆಂಬರ್ ವೇಳೆ ಹರಿಯಲಿರುವ ಜಲ
‘ಯೋಜನೆ ಅನುಷ್ಠಾನಕ್ಕೆ ಕೆಪಿಟಿಸಿಎಲ್‌ನವರ ಸಹಕಾರ ಹೆದ್ದಾರಿ ಪ್ರಾಧಿಕಾರದವರ ಅನುಮೋದನೆ ಮೊದಲ ಹಂತದಲ್ಲಿ ಲಭಿಸುವಾಗ ತಡವಾಗಿತ್ತು. ಈಗ ಎಲ್ಲ ಸಮಸ್ಯೆಗಳೂ ಬಗೆ ಹರಿದು ವಿದ್ಯುತ್‌ ಪೂರೈಕೆಗೆ ಸಂಬಂಧಿಸಿದಂತೆ ಕೆಪಿಟಿಸಿಎಲ್‌ನವರು ತಮ್ಮ ಭಾಗದ ಕೆಲಸವನ್ನು ಅನುಷ್ಠಾನ ಮಾಡಲು ಅಂದಾಜು ಪಟ್ಟಿ ತಯಾರಿಸುತ್ತಿದ್ದಾರೆ. ಕಡೂರು ಭಾಗದಲ್ಲಿ ಭೂಸ್ವಾಧೀನದ ಸಮಸ್ಯೆ ಬಗೆಹರಿಯಲು 11-1 ನೋಟಿಫಿಕೇಷನ್‌ ಜಾರಿಯಾಗಲಿದೆ. ಆಗಸ್ಟ್‌ ಅಥವಾ ಸೆಪ್ಟೆಂಬರ್‌ ವೇಳೆಗೆ ಪ್ರಾಯೋಗಿಕವಾಗಿ ನೀರು ಹರಿಸುವ ಸಾಧ್ಯತೆ ಇದೆʼ ಎನ್ನುತ್ತಾರೆ ಯೋಜನೆಯ ಅನುಷ್ಠಾನದ ಹೊಣೆ ವಹಿಸಿರುವ ಎಂಜಿನಿಯರ್‌ ಹರ್ಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.