ಕಡೂರು: ‘ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ 2023ರ ಬಜೆಟ್‌ನಲ್ಲಿ ಘೋಷಿಸಿದ್ದ ಕೇಂದ್ರ ಸರ್ಕಾರ, ₹5,300 ಕೋಟಿ ಅನುದಾನ ನೀಡುವುದಾಗಿ ಹೇಳಿತ್ತು. ಅದರಂತೆ ಹಣ ಬಿಡುಗಡೆ ಮಾಡಿ ನ್ಯಾಯ ಒದಗಿಸಬೇಕು’ ಎಂದು ಶಾಸಕ ಕೆ.ಎಸ್.ಆನಂದ್ ಒತ್ತಾಯಿಸಿದರು.
ನಾಗಗೊಂಡನಹಳ್ಳಿಯಲ್ಲಿ ಮಂಗಳವಾರ ವಿಶ್ವೇಶ್ವರಯ್ಯ ಜಲನಿಗಮದ ಚಿತ್ರದುರ್ಗ ವಲಯ ಮುಖ್ಯ ಎಂಜಿನಿಯರ್ ಎಫ್.ಎಚ್.ಲಮಾಣಿ ಅವರೊಂದಿಗೆ ಮೇಲ್ದಂಡೆ ಪಂಪ್‌ಹೌಸ್ ಕಾಮಗಾರಿ ವೀಕ್ಷಿಸಿ ಪತ್ರಕರ್ತರೊಂದಿಗೆ ಮಾತನಾಡಿದರು.
‘ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿದ್ದರಿಂದ ಚಾಲನೆಯಲ್ಲಿದ್ದ ಕಾಮಗಾರಿಯು ಅದರ ನಿಯಮಗಳಿಗೆ ಅನುಸಾರವಾಗಿಯೇ ಅನುಷ್ಠಾನಗೊಂಡು, ಯೋಜನೆ ಹಾದುಹೋಗುವಲ್ಲಿ ಎಲ್ಲೆಡೆ ಹನಿ ನೀರಾವರಿಗೆ ಅವಕಾಶ ಜತೆಗೆ ಕೆರೆ-ಕಟ್ಟೆಗಳನ್ನು ತುಂಬಿಸಲು ಒತ್ತು ನೀಡಲಾಗಿದೆ. ಆದರೆ, ರಾಜ್ಯದಲ್ಲಿ 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ವಿಷಯವಾಗಿ ನಕಾರಾತ್ಮಕ ಧೋರಣೆ ಅನುಸರಿಸಿದೆ. ಕೇಂದ್ರ ಸರ್ಕಾರದ ನಿರ್ದೇಶನ ಪಾಲಿಸಿ, ಕಾಮಗಾರಿ ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಶೇ 60ರಷ್ಟು ಹಣ ಹನಿ ನೀರಾವರಿಗೆ ಬಳಕೆಯಾಗಿದೆ. ಕೇಂದ್ರ ಸರ್ಕಾರ ಹಣ ಕೊಟ್ಟಿಲ್ಲ ಎಂದು ರಾಜ್ಯ ಸರ್ಕಾರವೇನೂ ಕೈ ಚೆಲ್ಲಿಲ್ಲ, ಕಾಮಗಾರಿಗೆ ಕೊರತೆಯಾಗದಂತೆ ಹಣ ಬಿಡುಗಡೆ ಮಾಡಿದೆ. ನಾವು ಆಶಾ ಭಾವನೆಯಲ್ಲಿಯೇ ಇದ್ದು, ತಾಲ್ಲೂಕಿನಲ್ಲಿ ಮೂರು ವಿಭಾಗಗಳಾದ ಯಗಟಿ, ಯಳ್ಳಂಬಳಸೆ ಮತ್ತು ಅಂತರಘಟ್ಟೆ ಭಾಗಗಳ ಪೈಕಿ ಯಗಟಿ ಭಾಗದ ಕಾಮಗಾರಿ ಹೊರತು ಪಡಿಸಿ ಶೇ 70ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ’ ಎಂದು ತಿಳಿಸಿದರು.
ಭದ್ರಾ ಮೇಲ್ದಂಡೆ ಯೋಜನೆಯ ₹21,432 ಕೋಟಿ ಪೈಕಿ ಕಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ₹1,155 ಕೋಟಿ ವೆಚ್ಚದಲ್ಲಿ ಕಾಮಗಾರಿ ಚಾಲನೆಯಲ್ಲಿದೆ. ಇದರಲ್ಲಿ ಕಡೂರು ಕ್ಷೇತ್ರಕ್ಕೆ 2.40 ಟಿಎಂಸಿ ನೀರು ಹಂಚಿಕೆಯಾಗಿದ್ದು, ತುಮಕೂರು ಶಾಖಾ ಕಾಲುವೆ ಮತ್ತು ಚಿತ್ರದುರ್ಗ ಕಾಲುವೆಗಳ ಮುಖಾಂತರ 26,842 ಹೆಕ್ಟೇರ್ (66,300 ಎಕರೆ) ಭೂಮಿಗೆ ನೀರು ಹರಿಯಲಿದೆ. ಇದಕ್ಕಾಗಿ 30 ಪಂಪ್‌ಹೌಸ್‌ಗಳು ಕಾರ್ಯ ನಿರ್ವಹಿಸಲಿದೆ. ಯೋಜನೆಯಲ್ಲಿ 124 ಕೆರೆ-ಕಟ್ಟೆಗಳ ಪೈಕಿ 40 ದೊಡ್ಡ ಕೆರೆಗಳಿಗೆ ನೀರು ತುಂಬಿಸಲಾಗುವುದು. ಯಳ್ಳಂಬಳಸೆ ಭಾಗದಲ್ಲಿ ಸೀವಿಯೆಟ್ ನಿರ್ಮಾಣ ಕಂಪನಿಯು ₹383 ಕೋಟಿ ವೆಚ್ಚದಲ್ಲಿ ಕಾಮಗಾರಿ ನಿರ್ವಹಿಸುತ್ತಿದೆ. ಅಂತರಘಟ್ಟೆ ಭಾಗದಲ್ಲಿ ₹249 ಕೋಟಿ ವೆಚ್ಚದಲ್ಲಿ ಮೆಗಾ ಎಂಜಿನಿಯರಿಂಗ್ ಕಂಪನಿ, ಯಗಟಿ ಭಾಗದಲ್ಲಿ ₹523 ಕೋಟಿ ವೆಚ್ಚದಲ್ಲಿ ಓಷನ್ ಎಂಜಿನಿಯರಿಂಗ್ ಕಂಪನಿ ಕಾರ್ಯ ನಿರ್ವಹಿಸುತ್ತಿವೆ ಎಂದು ಅವರು ಮಾಹಿತಿ ನೀಡಿದರು.
ಭದ್ರಾ ಮೇಲ್ದಂಡೆ ಮತ್ತು ಭದ್ರಾ ಉಪಕಣಿವೆ ಯೋಜನೆಗಳು ತಾಲ್ಲೂಕಿನ ಕೃಷಿಕರಿಗೆ ವರದಾನವಾಗಿದ್ದು, ಭರದಿಂದ ಕೆಲಸ ಸಾಗಿದೆ. ಬೇಗನೆ ಕಾಮಗಾರಿ ಮುಕ್ತಾಯಗೊಳಿಸಿ ಬರಪೀಡಿತ ಕ್ಷೇತ್ರದ ರೈತಾಪಿ ವರ್ಗಕ್ಕೆ ಹಸನಾದ ಬದುಕು ಕಟ್ಟಿಕೊಳ್ಳಲು ಯೋಜನೆ ನೆರವಾಗಲಿದೆ ಎನ್ನುವುದು ತಮ್ಮ ಭರವಸೆ ಎಂದರು.
ವಿಶ್ವೇಶ್ವರಯ್ಯ ಜಲನಿಗಮದ ಎಇಇ ಹರ್ಷ, ಎಂಜಿನಿಯರ್‌ಗಳಾದ ಪ್ರವೀಣ್, ಮೋಹನ್‌ದಾಸ್, ಚೇತನ್, ಪುಟ್ಟರಾಜು, ಕರಿಬಸಪ್ಪ, ಪ್ರಾಜೆಕ್ಟ್ ಮ್ಯಾನೇಜರ್ ಹರೀಶ್‌ಕುಮಾರ್, ಪಂಚನಹಳ್ಳಿ ಪ್ರಸನ್ನ, ಬಾವಿಮನೆ ಮಧು, ವಸಂತಕುಮಾರ್, ಶಶಿಕುಮಾರ್, ರಾಜು, ವಿನಯ್ ವಳ್ಳು, ರವಿ, ಸ್ಥಳೀಯ ರೈತರು, ಗ್ರಾಮಸ್ಥರು ಇದ್ದರು.
ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಮುಕ್ತಾಯ | ಕಡೂರು ಕ್ಷೇತ್ರ 124 ಕೆರೆ-ಕಟ್ಟೆಗಳಿಗೆ ನೀರು |ತಾಲ್ಲೂಕಿನಲ್ಲಿ 3 ವಿಭಾಗಗಳಲ್ಲಿ ಜಾರಿ
ಮರು ಭೂಸ್ವಾಧೀನಕ್ಕೆ ಆದೇಶ
ರೈತರು ಪರಿಹಾರ ಧನಕ್ಕೆ ಒಪ್ಪಿಗೆ ಸೂಚಿಸದ ಪರಿಣಾಮ ಭೂಸ್ವಾಧೀನ ಪ್ರಕ್ರಿಯೆ ವಿಳಂಬಗೊಂಡು ಅದು ನ್ಯಾಯಾಲಯದಲ್ಲಿ ವಜಾಗೊಂಡು ಮರು ಭೂಸ್ವಾಧೀನಕ್ಕೆ ಆದೇಶವಾಗಿದೆ. ಯಗಟಿ ವಲಯದಲ್ಲಿ ಇದರಿಂದಾಗಿ ಕಾಮಗಾರಿ ಅನುಷ್ಠಾನ ವಿಳಂಬವಾಗಿದೆ. ಅದರಲ್ಲಿ ಯಳಗೊಂಡನಹಳ್ಳಿ ಮತಿಘಟ್ಟ ಕುರುಬರಹಳ್ಳಿ ಅಣೀಗೆರೆ ವೈ.ಮಲ್ಲಾಪುರ ಗ್ರಾಮಗಳ ಪೈಕಿ ಯಳಗೊಂಡನಹಳ್ಳಿ ಹೊರತುಪಡಿಸಿ ಬಾಕಿ ನಾಲ್ಕು ಗ್ರಾಮಗಳ ರೈತರು ನೇರ ಖರೀದಿಗೆ ಒಪ್ಪಿಗೆ ಸೂಚಿಸಿದ್ದು 210 ಎಕರೆ ಭೂಸ್ವಾಧೀನವಾಗಲಿದೆ ಎಂದರು ಶಾಸಕ ಕೆ.ಎಸ್.ಆನಂದ್ ಹೇಳಿದರು. ಈ ವಿಷಯವು ಬರುವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದ್ದು ಸರ್ಕಾರ ರೈತರ ದರಕ್ಕೆ ಒಪ್ಪಿಗೆ ಸೂಚಿಸಿದರೆ ಪ್ರಕ್ರಿಯೆ ಸುಗಮವಾಗಲಿದೆ. ಈಗಾಗಲೇ ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನದ ಕಾಲಮಿತಿ ಮುಕ್ತಾಯಗೊಂಡಿದ್ದು 2026ರ ಸೆಪ್ಟೆಂಬರ್ ಒಳಗೆ ಯೋಜನೆ ಸಂಪೂರ್ಣಗೊಳ್ಳಬೇಕು ಎಂದು ಸೂಚಿಸಿದ್ದು ಈ ವಿಷಯವಾಗಿ ಸರ್ಕಾರದ ಗಮನವನ್ನೂ ಸೆಳೆಯುತ್ತೇನೆ. ಯಗಟಿ ಭಾಗದಲ್ಲಿ ಕೆಲಸ ಆರಂಭಿಸುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಂಬಂಧಪಟ್ಟ ಎಂಜಿನಿಯರಿಂಗ್ ಕಂಪನಿಗೆ ಸೂಚಿಸಿದ್ದಾರೆ ಎಂದರು.
ನಾಲ್ಕು ಜಿಲ್ಲೆಗಳಿಗೆ 29.9 ಟಿಎಂಸಿ ನೀರು ಹಂಚಿಕೆ
ಭದ್ರಾ ಮೇಲ್ದಂಡೆ ಯೋಜನೆಯು ಚಿತ್ರದುರ್ಗ ಚಿಕ್ಕಮಗಳೂರು ತುಮಕೂರು ಮತ್ತು ದಾವಣಗೆರೆ ಜಿಲ್ಲೆಯ 11 ತಾಲ್ಲೂಕುಗಳ 2.25 ಲಕ್ಷ ಹೆಕ್ಟೇರ್ ಭೂಮಿಗೆ ಸೂಕ್ಷ್ಮ ನೀರಾವರಿ ಕಲ್ಪಿಸುವ 367 ಕೆರೆಗಳನ್ನು ತುಂಬಿಸುವ ಯೋಜನೆಯಾಗಿದೆ. 2018-19ರ ದರಪಟ್ಟಿಯಲ್ಲಿ ₹21432 ಕೋಟಿ ವೆಚ್ಚವಾಗಲಿದ್ದು ಕೃಷ್ಣಾ ಕೊಳ್ಳದ ಅಡಿ ಬರುವ ಯೋಜನೆಗೆ ಈ ನಾಲ್ಕು ಜಿಲ್ಲೆಗಳಿಗೆ 29.9 ಟಿಎಂಸಿ ನೀರು ಹಂಚಿಕೆಯಾಗಿದೆ ಎಂದು ವಿಶ್ವೇಶ್ವರಯ್ಯ ಜಲನಿಗಮದ ಚಿತ್ರದುರ್ಗ ವಲಯದ ಚೀಫ್ ಎಂಜಿನಿಯರ್ ಎಫ್.ಎಚ್.ಲಮಾಣಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.