ADVERTISEMENT

ಭದ್ರಾ ಮೇಲ್ದಂಡೆ ಕಾಲುವೆಗೆ ಪರೀಕ್ಷಾರ್ಥ ನೀರು ಪಂಪ್‌; ಯಶಸ್ವಿ

ತರೀಕೆರೆ ತಾಲ್ಲೂಕಿನ ಶಾಂತಿಪುರ ಬಳಿಯ ಪಂಪ್‌ಹೌಸ್‌

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2019, 18:58 IST
Last Updated 29 ಮಾರ್ಚ್ 2019, 18:58 IST
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ತರೀಕೆರೆ ತಾಲ್ಲೂಕಿನ ಶಾಂತಿಪುರ ಬಳಿಯ ಪಂಪ್‌ಹೌಸ್‌ನಿಂದ ಶುಕ್ರವಾರ ಭದ್ರಾ ಮೇಲ್ದಂಡೆ ಕಾಲುವೆಗೆ ಪರೀಕ್ಷಾರ್ಥವಾಗಿ ನೀರು ಹರಿಸಲಾಯಿತು.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ತರೀಕೆರೆ ತಾಲ್ಲೂಕಿನ ಶಾಂತಿಪುರ ಬಳಿಯ ಪಂಪ್‌ಹೌಸ್‌ನಿಂದ ಶುಕ್ರವಾರ ಭದ್ರಾ ಮೇಲ್ದಂಡೆ ಕಾಲುವೆಗೆ ಪರೀಕ್ಷಾರ್ಥವಾಗಿ ನೀರು ಹರಿಸಲಾಯಿತು.   

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲ್ಲೂಕಿನ ಶಾಂತಿಪುರ ಬಳಿಯ ಪಂಪ್‌ಹೌಸ್‌ನಿಂದ ಶುಕ್ರವಾರ ಭದ್ರಾ ಮೇಲ್ದಂಡೆ ಕಾಲುವೆಗೆ ಪರೀಕ್ಷಾರ್ಥವಾಗಿ ನೀರು ಹರಿಸಿದ್ದು, ಪ್ರಯೋಗ ಯಶಸ್ವಿಯಾಗಿದೆ.

ಈ ಪಂಪ್‌ಹೌಸ್‌ನ ಐದು ಪಂಪುಗಳ ಪೈಕಿ ಒಂದರಿಂದ ನೀರು ಪಂಪ್‌ ಮಾಡಲಾಗಿದೆ. ಉಳಿದವುಗಳಿಂದಲೂ ಶೀಘ್ರದಲ್ಲಿ ನೀರು ಪಂಪ್‌ ಮಾಡಲು ಸಿದ್ಧತೆ ನಡೆದಿದೆ.

ಭದ್ರಾ ಮೇಲ್ದಂಡೆ ಯೋಜನೆಯ ವಲಯ ಮುಖ್ಯ ಎಂಜಿನಿಯರ್‌ ಎಂ.ಜಿ.ಶಿವಕುಮಾರ್‌ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಪರೀಕ್ಷಾರ್ಥವಾಗಿ ನೀರು ಪಂಪ್‌ ಮಾಡಿರುವುದು ಮಹತ್ವದ ಘಟ್ಟ. ಸುಮಾರು 600 ಕ್ಯುಸೆಕ್‌ ನೀರು ಹರಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ವಾರದೊಳಗೆ ಶಾಂತಿಪುರ ಪಂಪ್‌ಹೌಸ್‌ ಪೂರ್ಣವಾಗಿ ಕಾರ್ಯಗತವಾಗಲಿದೆ. ಬೆಟ್ಟತಾವರೆಕೆರೆ ಬಳಿಯ ಎರಡನೇ ಪಂಪ್‌ಹೌಸ್‌ಗೆ ಸಂಬಂಧಿಸಿದಂತೆ ಇನ್ನು ಕೆಲಸ ಬಾಕಿ ಇದೆ’ ಎಂದು ತಿಳಿಸಿದರು.

‘ಅಜ್ಜಂಪುರ ಬಳಿ ಕಾಲುವೆಯ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿ ಬಹುತೇಕ ಮುಗಿದಿದೆ. ಎರಡನೇ ಪಂಪ್‌ಹೌಸ್‌ ಕಾರ್ಯಗತವಾದರೆ ಸುರಂಗ ಮಾರ್ಗದಿಂದ ಮುಂದಕ್ಕೆ ನೀರು ಹರಿಸಲು ಸಾಧ್ಯವಾಗುತ್ತದೆ. ಭದ್ರಾ ಜಲಾಶಯದಿಂದ ಅಜ್ಜಂಪುರ ಬಳಿಯ ಸುರಂಗದವರೆಗೆ ಕಾಲುವೆ 40 ಕಿಲೋ ಮೀಟರ್‌ ಉದ್ದ ಇದೆ. ಮೇ ಅಂತ್ಯದ ಹೊತ್ತಿಗೆ ಅಜ್ಜಂಪುರ ಬಳಿಯ ಸುರಂಗ ಮೂಲಕ ಚಿತ್ರದುರ್ಗ ಶಾಖಾ ಕಾಲುವೆಗೆ ಹರಿಸುವ ಗುರಿ ಇದೆ’ ಎಂದು ಹೇಳಿದರು.

‘ಜಲಾಶಯದ ಗೇಟ್‌ ತೆರೆದಾಗ ನೀರು 10 ಕಿ.ಮೀ ಕಾಲುವೆಯಲ್ಲಿ ಬರುತ್ತದೆ. ನಂತರ ಶಾಂತಿಪುರದ ಬಳಿಯಲ್ಲಿ ಪಂಪ್‌ನಿಂದ ಮೇಲ್ದಂಡೆ ಕಾಲುವೆಗೆ ಹರಿಸಲಾಗುವುದು. ಭದ್ರಾ ಮೇಲ್ದಂಡೆ ಕಾಲುವೆಯು ಬಲದಂಡೆಯದಕ್ಕಿಂತ ಸುಮಾರು ಒಂಬತ್ತು ಮೀಟರ್‌ ಎತ್ತರದಲ್ಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.