ADVERTISEMENT

ಭದ್ರ ನೀರು: ಸಾಮೂಹಿಕ ಹೋರಾಟದ ಫಲ

ಅಜ್ಜಂಪುರ: ಭದ್ರೆಯ ನೀರಿಗೆ ಜಲವೀಳ್ಯ ನೀಡಿದ ಚಿತ್ರದುರ್ಗ ಜನತೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2019, 13:27 IST
Last Updated 20 ಅಕ್ಟೋಬರ್ 2019, 13:27 IST
ಅಜ್ಜಂಪುರ ಸಮೀಪ ಬೆಟ್ಟದಾವರೆಕೆರೆ ಭಾಗದಲ್ಲಿನ ಭದ್ರಾ ಮೇಲ್ದಂಡೆ ಯೋಜನೆಯ ಸ್ಥಳದಲ್ಲಿ ಭಾನುವಾರ ಚಿತ್ರದುರ್ಗ ಜಿಲ್ಲೆಯ ವಿವಿಧ ಮಠದ ಸ್ವಾಮೀಜಿ ಹಾಗೂ ರೈತರು ಭದ್ರೆಗೆ ‘ಜಲ ವೀಳ್ಯ’ ನೀಡಿದರು.
ಅಜ್ಜಂಪುರ ಸಮೀಪ ಬೆಟ್ಟದಾವರೆಕೆರೆ ಭಾಗದಲ್ಲಿನ ಭದ್ರಾ ಮೇಲ್ದಂಡೆ ಯೋಜನೆಯ ಸ್ಥಳದಲ್ಲಿ ಭಾನುವಾರ ಚಿತ್ರದುರ್ಗ ಜಿಲ್ಲೆಯ ವಿವಿಧ ಮಠದ ಸ್ವಾಮೀಜಿ ಹಾಗೂ ರೈತರು ಭದ್ರೆಗೆ ‘ಜಲ ವೀಳ್ಯ’ ನೀಡಿದರು.   

ಅಜ್ಜಂಪುರ: ‘ಜಿಲ್ಲೆಯಲ್ಲಿನ ಪಕ್ಷಾತೀತ, ಜಾತ್ಯತೀತ ಶಕ್ತಿಗಳು ಒಗ್ಗೂಡಿ ನಡೆಸಿದ ಹೋರಾಟದ ಫಲವಾಗಿ ಭದ್ರೆಯ ನೀರು ಚಿತ್ರದುರ್ಗ ಜಿಲ್ಲೆಗೆ ಹರಿಯುತ್ತಿದೆ’ ಎಂದು ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣ ಸಮೀಪ ಬೆಟ್ಟದಾವರೆಕೆರೆಯಲ್ಲಿ ಭಾನುವಾರ ಭದ್ರಾ ಮೇಲ್ದಂಡೆ ಯೋಜನೆಯ ನೀರೆತ್ತುವ ಪಂಪಿಂಗ್ ಮೋಟಾರು ಇರಿಸಿದ ಸ್ಥಳದಲ್ಲಿ ‘ಜಲವೀಳ್ಯ’ ನೀಡಿ ಅವರು ಮಾತನಾಡಿದರು.

‘ಭದ್ರೆಯ ನೀರಿಗಾಗಿ ನಡೆಸಿದ ಹೋರಾಟ ಬಹುಮುಖವಾದುದು. ಇದರಲ್ಲಿ ಜಿಲ್ಲೆಯ ರೈತರ, ಜನಸಾಮಾನ್ಯರ ಹೋರಾಟ, ಸ್ವಾಮೀಜಿಗಳ ನೇತೃತ್ವ, ಹಿರಿಯರ- ಅನುಭವಿಗಳ ಮಾರ್ಗದರ್ಶನ, ಎಲ್ಲಾ ರಾಜಕೀಯ ಮುಖಂಡರ ಸಹಕಾರ ಅಡಗಿತ್ತು. ಇದಕ್ಕೆ ಸರ್ಕಾರ ನಿರಂತರವಾಗಿ ಬೆಂಬಲ ಸೂಚಿಸಿದ್ದರಿಂದ ಯೋಜನೆ ಕಾರ್ಯಗತವಾಗಿ, ಯಶಸ್ವಿ ಹಂತದಲ್ಲಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

ADVERTISEMENT

‘20-25 ವರ್ಷಗಳಿಂದ ಜನರ ಪರವಾಗಿ ಬೇಡಿದ ಜಲಭಿಕ್ಷೆಗೆ ಆಳಿದ ಎಲ್ಲಾ ಸರ್ಕಾರಗಳು ಸಕಾರಾತ್ಮಕವಾಗಿ ಸ್ಪಂದಿಸಿದವು. ಅಗತ್ಯ ಆರ್ಥಿಕ ಅನುದಾನ ಮತ್ತು ವಿವಿಧ ಇಲಾಖೆಗಳ ಸಮನ್ವಯಕ್ಕೆ ಆದ್ಯತೆ ನೀಡಿದವು. ಪರಿಣಾಮ ಪ್ರಾಯೋಗಿಕವಾಗಿ ವಾಣಿವಿಲಾಸ ಸಾಗರಕ್ಕೆ ನೀರು ಹರಿದು ಬಂದಿದೆ. ಇದು ಭವಿಷ್ಯದಲ್ಲಿ ಜಿಲ್ಲೆಯ ಜಲಕ್ಷಾಮ ನಿವಾರಿಸುವ ಆಶಾವಾದ ಮೂಡಿಸಿದೆ’ ಎಂದರು.

ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ತರೀಕೆರೆ ಮತ್ತು ಅಜ್ಜಂಪುರ ಭಾಗದಲ್ಲಿ ಭದ್ರಾ ಯೋಜನೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿ ಹೋರಾಟಗಳು ನಡೆದಿದ್ದವು. ಸಾಣೆಹಳ್ಳಿ ಮಠದಲ್ಲಿ ತರೀಕೆರೆ ತಾಲ್ಲೂಕಿಗೆ ನೀರು ಹಂಚಿಕೆ ಮತ್ತು ಭೂಮಿ ಕಳೆದುಕೊಂಡವರಿಗೆ ನೀಡಲಾಗುವ ಪರಿಹಾರದ ಬಗ್ಗೆ ತಿಳಿಸಿ ಒಪ್ಪಿಸಲಾಯಿತು. ಈಗ ಮುಕ್ತಾಯಗೊಂಡಿರುವುದು ಒಂದು ಹಂತ ಮಾತ್ರ. ಆಗಬೇಕಿರುವುದು ಬಹಳಷ್ಠಿದೆ. ಅದಕ್ಕೆ ಅಗತ್ಯವಿರುವ ಹೋರಾಟ ಸಹಕಾರವಿದೆ. ಜತೆಗೆ ಸರ್ಕಾರದ ಮೇಲೆ ಒತ್ತಡ ಹಾಕುವುದಕ್ಕೆ ನಾವೂ ಸಿದ್ಧವಿದ್ದೇವೆ’ ಎಂದು ಭರವಸೆ ನೀಡಿದರು.

‘ನೀರು ಜೀವಜಲ, ಅದು ಒಬ್ಬರ ಸ್ವತ್ತಲ್ಲ. ಅದರ ಮೇಲೆ ಜಗತ್ತಿನ ಎಲ್ಲಾ ಜೀವಸಂಕುಲಕ್ಕೂ ಹಕ್ಕಿದೆ. ಆ ಹಕ್ಕನ್ನು ಅನುಭವಿಸುವ ಮೊದಲು ನೀರನ್ನು ವ್ಯರ್ಥವಾಗಿ ಬಳಸುವುದನ್ನು ತಡೆಯುವ ಕರ್ತವ್ಯವನ್ನು ಪ್ರತಿಯೊಬ್ಬರೂ ಮಾಡಬೇಕು. ಇದ್ದ ನೀರನ್ನು ಮಿತವಾಗಿ ಬಳಸುವುದನ್ನು ಮೊದಲು ಕಲಿಯಬೇಕು. ಪ್ರತಿ ಊರಿನ ಕೆರೆ ಸ್ವಚ್ಛಚಗೊಳಿಸುವ, ಮಳೆ ನೀರನ್ನು ಕೆರೆ ಪೂರಣಕ್ಕೆ ಜೋಡಿಸಬೇಕು. ಇಂತಹ ಕಾರ್ಯಕ್ಕೆ ಹೊಸದುರ್ಗ ತಾಲ್ಲೂಕಿನಲ್ಲಿ ಸ್ವಾಮೀಜಿಗಳ ನೇತೃತ್ವ ವಹಿಸಿದ್ದಾರೆ’ ಎಂದರು.

ನೀರಾವರಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಬಂಜಗೆರೆ ಜಯಪ್ರಕಾಶ್, ‘ಕೆಲವು ಸ್ಥಳಗಳಲ್ಲಿ ಅಗತ್ಯವಿದ್ದ ಅರಣ್ಯ ಇಲಾಖೆಯ ನಿರಪೇಕ್ಷಣೆ ಪ್ರಮಾಣ ನೀಡಿಕೆಯಲ್ಲಿ ಮತ್ತು ಭೂ-ಸ್ವಾಧೀನದ ವಿಳಂಬದಿಂದ ಯೋಜನೆ ವಿಳಂಬ ಆಯಿತಾದರೂ, ಎಂದಿಗೂ ಸ್ಥಗಿತಗೊಳ್ಳದೇ ನಡೆದಿದೆ ಎಂಬುದೇ ತೃಪ್ತಿ. ಎಲ್ಲಾ ಮುಖ್ಯಮಂತ್ರಿಗಳು ಯೋಜನೆ ಪೂರ್ಣಕ್ಕೆ ತ್ವರಿತಗತಿಯಲ್ಲಿ ಅನುದಾನ ಬಿಡುಗಡೆಗೊಳಿಸಿದ್ದಾರೆ. ಅಧಿಕಾರಿಗಳೂ ಸಮನ್ವಯತೆಯಿಂದ ಕೆಲಸ ನಿರ್ವಹಿಸಿದ್ದಾರೆ. ಅದರಿಂದಲೇ ಮಹತ್ವಾಕಾಂಕ್ಷಿ ಯೋಜನೆ ಸಾಫಲ್ಯತೆಯ ಕಡೆಗೆ ಸಾಗಿತು’ ಎಂದರು.

ವಿಶ್ವೇಶ್ವರಯ್ಯ ಜಲ ನಿಗಮದ ತಾಂತ್ರಿಕ ಸಲಹೆಗಾರ ಚೆಲ್ವರಾಜ್, ‘2003 ನೀರು ಹಂಚಿಕೆ ಮೂಲಕ ಭದ್ರಾ ಮೇಲ್ದಂಡೆ ಯೋಜನೆ ಆರಂಭ ಆಯಿತು. ಆಗ ಮೂಡಿಗೆರೆ ಬಳಿ ಟ್ಯಾಂಕ್ ನಿರ್ಮಿಸಿ, ಚಿತ್ರದುರ್ಗ ಜಿಲ್ಲೆಗೆ ನೀರು ಕೊಂಡೊಯ್ಯುವುದಕ್ಕೆ ತಾಂತ್ರಿಕ ಒಪ್ಪಿಗೆ ದೊರೆಯಲಿಲ್ಲ. ಬಳಿಕ 2006ರ ರಲ್ಲಿ ಕೆ.ಸಿ.ರೆಡ್ಡಿ ತುಂಗಾದಿಂದ ಭದ್ರಾಗೆ, ಭದ್ರಾದಿಂದ ಚಿತ್ರದುರ್ಗ, ತುಮಕೂರು, ಕೋಲಾರಕ್ಕೆ ನೀರು ಹರಿಸಲು ವರಧಿ ನೀಡಿದರು. ಅದು 2008 ರಲ್ಲಿ ಅನುಮೋದನೆಗೊಂಡು ₹ 5,885 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿತ್ತು’ ಎಂದು ವಿವರಿಸಿದರು.

‘ಯೋಜನೆಗೆ ಭದ್ರಾ ಅಭಯಾರಣ್ಯದಲ್ಲಿನ ಭೂಮಿ ಬಳಕೆಗೆ ಮತ್ತು ರೈಲ್ವೆ ಹಳಿ ಕೆಳಗೆ ನೀರು ಕೊಂಡೊಯ್ಯಲು 2010ರಲ್ಲಿನ ನಮ್ಮ ಪ್ರಸ್ತಾಪಕ್ಕೆ 2017 ರಲ್ಲಿ ಅನುಮತಿ ದೊರೆಯಿತು. ಇದು ಯೋಜನೆ ಬಹಳಷ್ಟು ವಿಳಂಬವಾಗಲು ಕಾರಣವಾಯಿತು. ಆದರೂ ಈಗಾಗಲೇ 10,400 ಎಚ್.ಪಿ. ಸಾಮರ್ಥ್ಯದ ಪಂಪುಗಳಲ್ಲಿ ನೀರನ್ನು ಮುಂದಕ್ಕೆ ತಳ್ಳಲಾಗುತ್ತಿದೆ. ಈ ನೀರು ಅಜ್ಜಂಪುರ-ಬೇಗೂರು ಹಳ್ಳ-ಕುಕ್ಕೆ ಸಮುದ್ರ-ವೇದಾವತಿ ನದಿಯ ಮೂಲಕ ವಾಣಿವಿಲಾಸ ಸಾಗರ ತಲುಪುತ್ತಿದೆ’ ಎಂದರು.

ಹೊಸದುರ್ಗ ಕನಕ ಪೀಠದ ಪುರುಷೋತ್ತಮನಾಂದ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಸಂಸ್ಥಾನದ ಶಾಂತವೀರ ಸ್ವಾಮೀಜಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಎಇಇ ರವಿಕುಮಾರ್, ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಜಯಣ್ಣ, ರೈತ ಸಂಘದ ಕಾರ್ಯದರ್ಶಿ ಎಂ.ಶಂಕರಪ್ಪ, ಮುಖಂಡ ಎ.ಸಿ.ಚಂದ್ರಪ್ಪ ಇದ್ದರು. ಸ್ಥಳ ವೀಕ್ಷಿಸಲು ಚಿತ್ರದುರ್ಗ ಜಿಲ್ಲೆಯ ನೂರಾರು ರೈತರು, ರೈತ ಮಹಿಳೆಯರು, ರಾಜಕೀಯ ಮುಖಂಡರು ಬಸ್ ಗಳಲ್ಲಿ ಬಂದಿದ್ದರು.

ರೈತರಿಗೆ ನಿರಾಸೆ: ತಾಂತ್ರಿಕ ಕಾರಣದಿಂದ ಬೆಟ್ಟದಾವರೆಕೆರೆ ಬಳಿಯ ನೀರೆತ್ತುವ ಪಂಪ್‍ಗಳು ಭಾನುವಾರ ಕೆಲಸ ನಿರ್ವಹಿಸಲಿಲ್ಲ. ಇದು ನೀರೆತ್ತುವಿಕೆ ಮತ್ತು ಭದ್ರೆಯ ನೀರು ಹರಿಯುವಿಕೆಯನ್ನು ವೀಕ್ಷಿಸಲೆಂದೇ ಬಂದಿದ್ದ ಚಿತ್ರದುರ್ಗ ಜಿಲ್ಲೆಯ ನೂರಾರು ರೈತರಲ್ಲಿ ನಿರಾಸೆ ಮೂಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.