ADVERTISEMENT

‘ಗೋಶಾಲೆ ನಿರ್ಮಾಣ ಸತ್ಕಾರ್ಯ’

ಮುಸ್ಲಿಂ ಸಹೋದರರಿಂದ ಗೋಶಾಲೆಗೆ 4 ಎಕರೆ ಜಾಗ ದಾನ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 5:23 IST
Last Updated 2 ಅಕ್ಟೋಬರ್ 2022, 5:23 IST
ಕಡೂರು ತಾಲ್ಲೂಕಿನ ಸಖರಾಯಪಟ್ಟಣ ಬಳಿಯ ಹೊಸೂರು ಸಮೀಪ ಏರ್ಪಡಿಸಿದ್ದ ಗೋಶಾಲೆ ನಿರ್ಮಾಣ ಭೂಮಿಪೂಜೆಯಲ್ಲಿ ದಾನಿಗಳಾದ ಮಹಮ್ಮದ್‌ ನಾಸಿರುದ್ದೀನ್‌, ಪತ್ನಿ ನುಝಾತ್‌ ಬಾನು, ನಾಸಿರುದ್ದೀನ್‌ ಸಹೋದರ ಇಕ್ರಮುದ್ದಿನ್‌ ಸಾಬಿರ್‌ ಅವರನ್ನು ಸನ್ಮಾನಿಸಲಾಯಿತು.
ಕಡೂರು ತಾಲ್ಲೂಕಿನ ಸಖರಾಯಪಟ್ಟಣ ಬಳಿಯ ಹೊಸೂರು ಸಮೀಪ ಏರ್ಪಡಿಸಿದ್ದ ಗೋಶಾಲೆ ನಿರ್ಮಾಣ ಭೂಮಿಪೂಜೆಯಲ್ಲಿ ದಾನಿಗಳಾದ ಮಹಮ್ಮದ್‌ ನಾಸಿರುದ್ದೀನ್‌, ಪತ್ನಿ ನುಝಾತ್‌ ಬಾನು, ನಾಸಿರುದ್ದೀನ್‌ ಸಹೋದರ ಇಕ್ರಮುದ್ದಿನ್‌ ಸಾಬಿರ್‌ ಅವರನ್ನು ಸನ್ಮಾನಿಸಲಾಯಿತು.   

ಚಿಕ್ಕಮಗಳೂರು: ‘ತಾಯಿ ಹಾಲಿನ ನಂತರ ನಾವು ಕುಡಿಯುವುದು ಗೋವಿನ ಹಾಲು. ಗೋವುಗಳ ರಕ್ಷಣೆ ನಿಟ್ಟಿನಲ್ಲಿ ಗೋಶಾಲೆ ನಿರ್ಮಾಣಕ್ಕೆ ಮುಂದಾಗಿರುವ ಶ್ರೀಸ್ವಾಮಿ ಸಮರ್ಥ ರಾಮದಾಸ್‌ ಟ್ರಸ್ಟ್‌ಗೆ ಕೈಜೋಡಿಸಲು ನಿರ್ಧರಿಸಿ ನಾ‌ಲ್ಕು ಎಕರೆ ಜಾಗ ದಾನ ಮಾಡಿದ್ದೇವೆ’ ಎಂದು ಸಿತಾರಾ ಕಾಫಿ ಕ್ಯೂರಿಂಗ್‌ನ ಮಾಲೀಕ ಮಹಮ್ಮದ್‌ ನಾಸಿರುದ್ದೀನ್‌ ಹೇಳಿದರು.

ಕಡೂರು ತಾಲ್ಲೂಕಿನ ಸಖರಾಯಪಟ್ಟಣದ ಹೊಸೂರು ಬಳಿ ನಡೆದ ಗೋಶಾಲೆ, ಗುರುಕುಲ, ಪಂಚಮುಖಿ ಆಂಜನೇಯ ಗುಡಿ ನಿರ್ಮಾಣಕ್ಕೆ ಭೂಮಿಪೂಜೆ ಸಮಾರಂಭದಲ್ಲಿ ಅವರು ಮಾತನಾಡಿದರು. ಗೋಶಾಲೆ ನಿರ್ಮಿಸುವುದು ಸತ್ಕಾರ್ಯ. ಟ್ರಸ್ಟ್‌ನವರು ಕೈಗೊಳ್ಳುವ ಸಮಾಜಮುಖಿ ಕಾರ್ಯಗಳಿಗೆ ಸಹಕಾರ ನೀಡಲು ಸದಾ ಸಿದ್ಧವಾಗಿದ್ದೇವೆ’ ಎಂದು ಹೇಳಿದರು.

‘ಟ್ರಸ್ಟ್‌ ಅಧ್ಯಕ್ಷರಾದ ಸಂತೋಷ ಹೆಬ್ಬಾರ್ ಗುರೂಜಿ ಅವರನ್ನು ಬಾಲ್ಯದಿಂದ ಗಮನಿಸಿದ್ದೇನೆ. ಅವರು ಬುದ್ಧಿಮಾಂದ್ಯ ಮಕ್ಕಳ ಬದುಕು ಕಟ್ಟುವ ನಿಟ್ಟಿನಲ್ಲಿ ನಿಸ್ವಾರ್ಥ ಸೇವೆಯಲ್ಲಿ ತೊಡಗಿದ್ದಾರೆ’ ಎಂದು ಹೇಳಿದರು.

ADVERTISEMENT

ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ಮಾತನಾಡಿ, ಗೋಸಂತತಿ ಉಳಿಸುವುದು ಎಲ್ಲ ಕರ್ತವ್ಯ. ಮಹಮದ್ ನಾಸಿರುದ್ದಿನ್‌, ಇಕ್ರಮುದ್ದಿನ್‌ ಅವರ ಕಾರ್ಯ ಶ್ಲಾಘನೀಯ. ನಾಡಿನಲ್ಲಿ ಶಾಂತಿ ಸೌಹಾರ್ದ ಸದಾ ನೆಲೆಸಲಿ ಎಂದು ಆಶಿಸಿದರು.

ಟ್ರಸ್ಟ್‌ ಅಧ್ಯಕ್ಷ ಡಾ.ಸಂತೋಷ್ ಹೆಬ್ಬಾರ್, ಟ್ರಸ್ಟ್ ಕಾರ್ಯದರ್ಶಿ ಸುರೇಶ್ ಶೆಟ್ಟಿ, ಬೆಂಗಳೂರಿನ ಮಾರುತಿ ಮೆಡಿಕಲ್ಸ್‌ನ ಮಹೇಂದ್ರ ಮನೋಥ್‌, ಸಮರ್ಥ ರಾಮದಾಸ ವಿದ್ಯಾಮಂದಿರದ ಉಮಾದೇವಿ ಸರಫ್‌ ನಾಗರಾಜ್‌, ಪೈ ಕಮಾಡಿಟಿಯ ಪ್ರದೀಪ್ ಪೈ, ಶಾಮನೂರು ಸರ್ವಿಸ್‌ ಸ್ಟೇಷನ್‌ನ ಎಸ್‌.ಆರ್‌.ಸತ್ಯನಾರಾಯಣ, ರಾಯಲ್‌ ಓಕ್‌ನ ಪಿ.ಅಮರನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.