ADVERTISEMENT

ಬೀರೂರು | ಸಡಗರದ ಶ್ರೀಅಂತರಘಟ್ಟಮ್ಮ ದೇವಿ ರಥೋತ್ಸವ

ಮೆರುಗು ನೀಡಿದ ಅಸಾದಿಗಳ ಮೇಳ, ಮಂಗಳವಾದ್ಯ, ಜಾನಪದ ವಾದ್ಯಗಳು

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 7:25 IST
Last Updated 28 ಜನವರಿ 2026, 7:25 IST
ಬೀರೂರು ಪಟ್ಟಣದ ಕರಗಲ್‌ ಬೀದಿಯಲ್ಲಿ ನೆಲೆಸಿರುವ ಶ್ರೀ ಅಂತರಘಟ್ಟಮ್ಮ ದೇವಿಯ ರಥೋತ್ಸವ ಮಂಗಳವಾರ ಭಕ್ತರ ಸಮ್ಮುಖದಲ್ಲಿ ನೆರವೇರಿತು
ಬೀರೂರು ಪಟ್ಟಣದ ಕರಗಲ್‌ ಬೀದಿಯಲ್ಲಿ ನೆಲೆಸಿರುವ ಶ್ರೀ ಅಂತರಘಟ್ಟಮ್ಮ ದೇವಿಯ ರಥೋತ್ಸವ ಮಂಗಳವಾರ ಭಕ್ತರ ಸಮ್ಮುಖದಲ್ಲಿ ನೆರವೇರಿತು   

ಬೀರೂರು(ಕಡೂರು): ಬೀರೂರು ಪಟ್ಟಣದ ಕರಗಲ್‌ ಬೀದಿಯಲ್ಲಿ ನೆಲೆಸಿರುವ ಗ್ರಾಮದೇವತೆ ಅಂತರಘಟ್ಟಮ್ಮ ದೇವಿಯ ರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ ಹಾಗೂ ಸಡಗರದಿಂದ ಜರುಗಿತು. 

ಸೋಮವಾರ ಬೆಳಿಗ್ಗೆ ಅಮ್ಮನವರಿಗೆ ಅಭಿಷೇಕ, ತ್ರಿಶಕ್ತಿ ಅಲಂಕಾರ, ದುರ್ಗಾಸೂಕ್ತ ಪ್ರಾರ್ಥನೆ, ಮಹಾಮಂಗಳಾರತಿ ನೆರವೇರಿಸಲಾಯಿತು. ರಾತ್ರಿ ಗಣಂಗಳ ಸೇವೆಯ ನಂತರ ಅಮ್ಮನವರ ಉತ್ಸವ ಮೂರ್ತಿಯನ್ನು ವಿವಿಧ ಪುಷ್ಪ ಮಾಲೆಗಳಿಂದ ಅಲಂಕರಿಸಲಾಗಿದ್ದ ರಥದಲ್ಲಿ ಪ್ರತಿಷ್ಠಾಪಿಸಿ, ದುಗ್ಗಳ ಸೇವೆ ಮತ್ತು ಬ್ರಹ್ಮರಥೋತ್ಸವ ನಡೆಸಲಾಯಿತು. ಮಂಗಳವಾರ ಬೆಳಿಗ್ಗೆ ದೇವಾಲಯದ ಆವರಣದಲ್ಲಿ ಭಕ್ತರು ಬೇವಿನ ಸೀರೆ ಸೇವೆ ಸಮರ್ಪಿಸಿದ ನಂತರ, ಮನೆಗಳಿಂದ ಹೋಳಿಗೆ ನೈವೇದ್ಯ, ಪಾನಕ ಸೇವೆ ನಡೆದವು.

ಭಕ್ತರು ಮನೆಗಳಲ್ಲಿ ಹಬ್ಬದೂಟ, ಬಾಡೂಟ ಸವಿದು ನೆಂಟರಿಷ್ಟರ ಜತೆ ಬಂದ ಬಳಿಕ ಕೃಷಿಕರು ಅಲಂಕರಿಸಿದ್ದ ಎತ್ತಿನ ಬಂಡಿಗಳನ್ನು ಕರೆತಂದರು. ರಥದಲ್ಲಿರುವ ಅಮ್ಮನವರಿಗೆ ಮಹಾ ಮಂಗಳಾರತಿಯನ್ನು ನೆರವೇರಿಸಿದ ನಂತರ ರಥವು ನಿಧಾನವಾಗಿ ಚಲಿಸತೊಡಗಿದಂತೆ ಪಾನಕದ ಬಂಡಿಗಳು ಹಿಂಬಾಲಿಸಿಕೊಂಡು ಬರುತ್ತಿದ್ದವು. ಅಸಾದಿಗಳ ಮೇಳ, ಮಂಗಳವಾದ್ಯ, ಜಾನಪದ ವಾದ್ಯಗಳು, ಚೋಮನ ಕುಣಿತದೊಂದಿಗೆ ಬರುತ್ತಿದ್ದ ರಥಕ್ಕೆ ಭಕ್ತರು ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರೆ, ಬಹಳಷ್ಟು ಜನರು ಹಣ್ಣು, ಕಾಯಿ, ಮಂಗಳಾರತಿ ಮಾಡಿಸಿದರು.

ADVERTISEMENT

ರಥವನ್ನು ಹಳೇಪೇಟೆಯ ವೀರಾಂಜನೇಯ ಸ್ವಾಮಿ ದೇವಾಲಯ ಬಳಿ ಸರಿದು ನಿಲ್ಲಿಸಲಾಗುತ್ತಿದ್ದಂತೆ ರಥವನ್ನು ಹಿಂಬಾಲಿಸಿಕೊಂಡು ಬಂದಿದ್ದ ಪಾನಕದ ಎತ್ತಿನ ಬಂಡಿಗಳ ಓಟಕ್ಕೆ ಅವಕಾಶ ಮಾಡಿಕೊಡಲಾಯಿತು.

ಎತ್ತುಗಳು ತನ್ನನ್ನು ನಿಯಂತ್ರಿಸಲು ಯತ್ನಿಸುತ್ತಿದ್ದ ಗಾಡಿಯ ಒಡೆಯನ ಬಾರುಕೋಲು ಏಟು ಮತ್ತು ಮೂಗುದಾರ ನಿಯಂತ್ರಣ ಮೀರಿ ಶರವೇಗದಲ್ಲಿ ಮಹಾನವಮಿ ಬಯಲಿನ ಕಡೆಗೆ ಓಡುತ್ತಿದ್ದರೆ, ಅಕ್ಕಪಕ್ಕದಲ್ಲಿದ್ದ ಜನರು ಶಿಳ್ಳೆ ಮತ್ತು ಕೇಕೆಯನ್ನು ಹಾಕುತ್ತಾ ಎತ್ತುಗಳನ್ನು ಹುರಿದುಂಬಿಸುತ್ತಿದ್ದರು. ಹೂವಿನ ಹಾರ ಹಾಗೂ ಬಣ್ಣಗಳಿಂದ ಅಲಂಕರಿಸಲಾಗಿದ್ದ ಎತ್ತುಗಳು ಜನರ ನಡುವೆ ನುಗ್ಗಿ ಓಡುತ್ತಿದ್ದರೆ ನೋಡುಗರಲ್ಲಿ ರೋಮಾಂಚನ ಮೂಡಿಸಿತು. 68ಕ್ಕೂ ಹೆಚ್ಚು ಎತ್ತಿನ ಪಾನಕದ ಬಂಡಿಗಳು ಈ ಬಾರಿ ಜಾತ್ರೆಯಲ್ಲಿ ಭಾಗವಹಿಸಿದ್ದವು. ಈ ಬಾರಿ ರಥದ ಎಡಬದಿಯಲ್ಲಿ ಸೂಕ್ತ ತಡೆಗಟ್ಟೆ ನಿರ್ಮಿಸದ ಕಾರಣ ಬಹಳಷ್ಟು ಯುವಜನರು ರಸ್ತೆ ಮಧ್ಯೆಯೇ ನಿಂತು ಎತ್ತುಗಳನ್ನು ಹುರಿದುಂಬಿಸಲು ಯತ್ನಿಸಿದ್ದು ಅಪಾಯಕಾರಿಯಾಗಿತ್ತು, ಅವರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹೈರಾಣಾದರು.

ಮಹಾನವಮಿ ಬಯಲಿನ ಬಳಿ ಭಕ್ತರು ರಥಕ್ಕೆ ಮಂಗಳಾರತಿ ಅರ್ಪಿಸಿದ ಬಳಿಕ ಬಳಿಕ ರಥವನ್ನು ಮೂಲಸ್ಥಾನಕ್ಕೆ ಕರೆದೊಯ್ಯಲಾಯಿತು. ಬುಧವಾರ ಓಕಳಿ ಉತ್ಸವ, ಮುಖಾರ್ಚನೆ, ಸಂಜೆ ಪ್ರಮುಖ ಬೀದಿಗಳಲ್ಲಿ ಉತ್ಸವದೊಂದಿಗೆ ರಥೋತ್ಸವ ಸಂಪನ್ನಗೊಳ್ಳಲಿದ್ದು, ಭಕ್ತರು ಬರುವ ಶುಕ್ರವಾರ, ಶನಿವಾರದಂದು ಅಂತರಘಟ್ಟೆಯಲ್ಲಿ ನಡೆಯುವ ದುರ್ಗಾಂಬ ರಥೋತ್ಸವಕ್ಕೆ ತೆರಳಲು ಸಿದ್ಧತೆ ನಡೆಸಲಿದ್ದಾರೆ.

ಅಂತರಘಟ್ಟಮ್ಮಗೆ ತ್ರಿಶಕ್ತಿ ಅಲಂಕಾರ ಮಾಡಲಾಗಿತ್ತು
ಅಮ್ಮನಹಬ್ಬದ ಅಂಗವಾಗಿ ಪಾನಕದ ಬಂಡಿಗಳ ಓಟ ನವಿರೇಳುವಂತಿತ್ತು

68ಕ್ಕೂ ಹೆಚ್ಚು ಎತ್ತಿನ ಪಾನಕದ ಬಂಡಿಗಳು ಭಾಗಿ ಮನೆಗಳಿಂದ ಹೋಳಿಗೆ ನೈವೇದ್ಯ, ಪಾನಕ ಸೇವೆ ಅಮ್ಮನವರಿಗೆ ಅಭಿಷೇಕ, ತ್ರಿಶಕ್ತಿ ಅಲಂಕಾರ, ದುರ್ಗಾಸೂಕ್ತ ಪ್ರಾರ್ಥನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.