ADVERTISEMENT

ಬೀರೂರು ಮೈಲಾರಲಿಂಗ ಸ್ವಾಮಿ ಕಾರಣಿಕ

ವಿಜೃಂಭಣೆಯಿಂದ ನಡೆದ ವಿಜಯದಶಮಿ ಆಚರಣೆಗಳು, ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 6:11 IST
Last Updated 7 ಅಕ್ಟೋಬರ್ 2022, 6:11 IST
ಬೀರೂರು ಮಹಾನವಮಿ ಬಯಲಿನಲ್ಲಿ ಗುರುವಾರ ಮೈಲಾರಲಿಂಗಸ್ವಾಮಿಯವರ ಕಾರಣಿಕ ಮಹೋತ್ಸವ ನಡೆಯಿತು
ಬೀರೂರು ಮಹಾನವಮಿ ಬಯಲಿನಲ್ಲಿ ಗುರುವಾರ ಮೈಲಾರಲಿಂಗಸ್ವಾಮಿಯವರ ಕಾರಣಿಕ ಮಹೋತ್ಸವ ನಡೆಯಿತು   

ಬೀರೂರು: ಪಟ್ಟಣದ ಮೈಲಾರಲಿಂಗಸ್ವಾಮಿ ಕಾರಣಿಕ ಮಹೋತ್ಸವ, ವಿಜಯದಶಮಿ ಕಾರ್ಯಕ್ರಮಗಳು ಗುರುವಾರ ಬೆಳಗಿನ ಜಾವ ಸಂಪನ್ನಗೊಂಡವು.

ವಿಜಯದಶಮಿಯ ಬುಧವಾರ ದೇವಾಲಯದಲ್ಲಿ ಮೂಲಮೂರ್ತಿಗೆ ರುದ್ರಾಭಿಷೇಕ, ಭಂಡಾರಾರ್ಚನೆ, ಉತ್ಸವಮೂರ್ತಿಯನ್ನು ಚಿನ್ನದ ಆಭರಣಗಳಿಂದ ಅಲಂಕರಿಸಿ ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಯಿತು. ರಾತ್ರಿ 10ಗಂಟೆಗೆ ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಭಕ್ತರ ಜಯಘೋಷಗಳ, ಭಂಡಾರ ಎರಚುವ ಪ್ರದರ್ಶನದ ನಡುವೆ ಬೆಣ್ಣೆ ಮೆತ್ತಿದ ದೊಡ್ಡಬಿಲ್ಲಪ್ಪನ ನೇತೃತ್ವದಲ್ಲಿ ಪಾದಕೆರೆಗೆ ಉತ್ಸವಮೂರ್ತಿಯ ಮೆರವಣಿಗೆ ಹೊರಟಿತು. ವೀರಭದ್ರಸ್ವಾಮಿ ದೇವಾಲಯಕ್ಕೆ ತೆರಳಿ ಪ್ರದಕ್ಷಿಣೆ ನಡೆಸಿ ಮಂಗಳಾರತಿ ಸ್ವೀಕರಿಸಿ, ಗಾಳಿಹಳ್ಳಿ ಬಳಿಯ ಮೂಲಸ್ಥಾನದಲ್ಲಿರುವ ಪಾದಕ್ಕೆ ಬೆಣ್ಣೆ ಅಲಂಕಾರ, ದೋಣಿಸೇವೆ, 101 ಗಣಂಗಳ ಸೇವೆ ನಡೆಸಿ 2.30ರ ಸುಮಾರಿಗೆ ಬನ್ನಿ ಮುಡಿದು ಕಾರಣಿಕ ಮಹೋತ್ಸವ ನೆರವೇರಿಸಲು ಮಹಾನವಮಿ ಬಯಯಲಿನ ಕಡೆ ಹೊರಟಿತು.

ಮೈಲಾರಲಿಂಗಸ್ವಾಮಿಯು ಬೆಳಿಗ್ಗೆ 4.45ಕ್ಕೆ ಮಹಾನವಮಿ ಬಯಲಿಗೆ ಬರುವ ವೇಳೆಗೆ ವೀರಭದ್ರಸ್ವಾಮಿ, ಬೀರಲಿಂಗೇಶ್ವರ, ಹಿರಿಯಂಗಳ ರುದ್ರಸ್ವಾಮಿ ದೈವಗಳು ಪ್ರತಿಷ್ಠಾಪಿತಗೊಂಡಿದ್ದವು.

ADVERTISEMENT

ಕಾರಣಿಕ: ‘ಇಟ್ಟ ರಾಮನ ಬಾಣಕ್ಕೆ ಹುಸಿ ಇಲ್ಲ, ಭೂಮಿಗೆ ವರುಣನ ಸಿಂಚನವಾಯಿತು, ಕುರು-ಪಾಂಡವರು ಕಾದಾಡಿದರು, ಧರ್ಮದ ಜ್ಯೋತಿ ಬೆಳಗಿದರು, ಸರ್ವರೂ ಎಚ್ಚರದಿಂದಿರಬೇಕು ಪರಾಕ್’ ಎಂದುಪಟ್ಟಣದ ಸರಸ್ವತೀಪುರಂ ಬಡಾವಣೆಯಲ್ಲಿನ ಮೈಲಾರಲಿಂಗ ಸ್ವಾಮಿ ದೇಗುಲದ ಅರ್ಚಕ ದಶರಥ ಪೂಜಾರ ಕಾರಣಿಕ ನುಡಿದರು.

ಗ್ರಾಮ ಭೇಟಿ
ಕಳಸ
: ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಲೆ ಗ್ರಾಮದಲ್ಲಿ ಅ.15ರಂದು ಉಪವಿಭಾಗಾಧಿಕಾರಿ ‘ಗ್ರಾಮ ಭೇಟಿ’ ಕಾರ್ಯಕ್ರಮ ನಡೆಯಲಿದೆ.

ಅಲ್ಲಿನ ಸಮುದಾಯ ಭವನದಲ್ಲಿ ಬೆಳಿಗ್ಗೆ 11ರಿಂದ ಕಾರ್ಯಕ್ರಮ ನಡೆಯಲಿದ್ದು ವಿವಿಧ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ಸೂಚನೆ ನೀಡಲಾಗಿದೆ.

ಉಪವಿಭಾಗಾಧಿಕಾರಿ ಜೊತೆ ತಾಲ್ಲೂಕು ಪಂಚಾಯಿತಿ, ಕಂದಾಯ, ಅರಣ್ಯ, ಸಮಾಜ ಕಲ್ಯಾಣ, ಅಬಕಾರಿ, ಅಲ್ಪಸಂಖ್ಯಾತ, ಪೊಲೀಸ್, ಭೂದಾಖಲೆ, ಕೃಷಿ, ತೋಟಗಾರಿಕೆ, ಗಿರಿಜನ ಅಭಿವೃದ್ಧಿ, ಹಿಂದುಳಿದ ವರ್ಗಗಳು, ಪಶುಪಾಲನಾ, ಆರೋಗ್ಯ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳುವರು.

ಪರಿಶಿಷ್ಟ ಜಾತಿ ಮತ್ತು ವರ್ಗಗಳ ದೌರ್ಜನ್ಯ ತಡೆ ಸಮಿತಿಯ ಸದಸ್ಯ ಡಾ.ಶಿವಪ್ರಸಾದ್ ಈಚೆಗೆ ಕಾರ್ಲೆ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ಜನರ ಬವಣೆ ಬಗ್ಗೆ ಜಿಲ್ಲಾಧಿಕಾರಿ ಗಮನ ಸೆಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.