ADVERTISEMENT

ಕಡೂರು | ಬಿಜೆಪಿ- ಜೆಡಿಎಸ್ ಬೆಂಬಲಿತರ ಮೇಲುಗೈ

ಕಡೂರು: ಪಿಕಾರ್ಡ್ ಬ್ಯಾಂಕ್ ಚುನಾವಣಾ ಫಲಿತಾಂಶ ಪ್ರಕಟ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 4:40 IST
Last Updated 17 ನವೆಂಬರ್ 2025, 4:40 IST
ಕಡೂರು ಪಿಕಾರ್ಡ್ ಬ್ಯಾಂಕ್‌ ಚುನಾವಣೆಯಲ್ಲಿ ಆಯ್ಕೆಯಾದ ನಿರ್ದೇಶಕರೊಂದಿಗೆ ಬೆಳ್ಳಿಪ್ರಕಾಶ್ ಮತ್ತು ಕಾರ್ಯಕರ್ತರು ಬಿಜೆಪಿ ಕಚೇರಿ ಮುಂದೆ ಭಾನುವಾರ ಸಂಭ್ರಮಾಚರಣೆ ನಡೆಸಿದರು
ಕಡೂರು ಪಿಕಾರ್ಡ್ ಬ್ಯಾಂಕ್‌ ಚುನಾವಣೆಯಲ್ಲಿ ಆಯ್ಕೆಯಾದ ನಿರ್ದೇಶಕರೊಂದಿಗೆ ಬೆಳ್ಳಿಪ್ರಕಾಶ್ ಮತ್ತು ಕಾರ್ಯಕರ್ತರು ಬಿಜೆಪಿ ಕಚೇರಿ ಮುಂದೆ ಭಾನುವಾರ ಸಂಭ್ರಮಾಚರಣೆ ನಡೆಸಿದರು   

ಕಡೂರು: ಕಡೂರು ಪಿಕಾರ್ಡ್ ಬ್ಯಾಂಕ್ ಚುನಾವಣೆ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಬಿಜೆಪಿ ಮತ್ತು ಮಿತ್ರ ಪಕ್ಷ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್‌ ಅಧ್ಯಕ್ಷ ಬೆಳ್ಳಿಪ್ರಕಾಶ್ ಘೋಷಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ದೇವಾನಂದ್ ಹಾಗೂ ಚುನಾವಣೆಯಲ್ಲಿ ಗೆದ್ದ ನಿರ್ದೇಶಕರ ಸಮ್ಮುಖದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

ಪಿಕಾರ್ಡ್ ಬ್ಯಾಂಕ್ ಚುನಾವಣೆ ಪಕ್ಷದ ಚಿಹ್ನೆಯ ಮೇಲೆ ನಡೆಯದಿದ್ದರೂ ಅಭ್ಯರ್ಥಿಗಳು ಪಕ್ಷಗಳ ಬೆಂಬಲಿಗರಾಗಿರುತ್ತಾರೆ. ಬ್ಯಾಂಕ್‌ನ 14 ಸ್ಥಾನಗಳಲ್ಲಿ ಬಿಜೆಪಿಯಿಂದ 8, ಜೆಡಿಎಸ್ 2 ಸ್ಥಾನ ಗೆಲ್ಲುವುದರ ಮೂಲಕ ಸ್ಪಷ್ಟ ಬಹುಮತ ಬಂದಿದೆ. ಹಿರೇನಲ್ಲೂರು ಮತ್ತು ಸಖರಾಯಪಟ್ಟಣ ಕ್ಷೇತ್ರದಿಂದ ಗೆದ್ದಿರುವ ತಿಪ್ಪೇಶ್ ಮತ್ತು ಆನಂದನಾಯ್ಕ ಅವರೂ ಬಂದರೆ ಸ್ವಾಗತಿಸುತ್ತೇವೆ ಎಂದರು.

ADVERTISEMENT

ಬಿಜೆಪಿಗೆ ಈ ಗೆಲುವು ನೈತಿಕವಾಗಿ ಬಲ ತುಂಬಿದ್ದು, ಬಿಕ್ಕಟ್ಟಿನ ನಡುವೆಯೂ ನಮ್ಮಲ್ಲಿನ ಒಗ್ಗಟ್ಟನ್ನು ಪ್ರದರ್ಶಿಸಿದ್ದೇವೆ. ಎಚ್.ಎಂ.ರೇವಣ್ಣಯ್ಯ, ಸಂತೋಷ್, ನೀಲಕಂಠಪ್ಪ, ಸುನಂದಮ್ಮ ಎಸ್., ಚನ್ನಬಸಪ್ಪ, ರಂಗನಾಥ್, ತಿಮ್ಮೇಗೌಡ, ಸಂಜಯ್ ಮತ್ತು ಸಿಂಗಟಗೆರೆ ರುದ್ರಮ್ಮ (ಕಲ್ಲೇಶಪ್ಪ), ಯಳ್ಳಂಬಳಸೆ ಕ್ಷೇತ್ರದ ವಿರೂಪಾಕ್ಷಪ್ಪ ಗೆಲ್ಲುವುದರ ಮೂಲಕ ಪಿಕಾರ್ಡ್ ಬ್ಯಾಂಕ್‌ನ ಆಡಳಿತ ಬಿಜೆಪಿ ಜೆಡಿಎಸ್ ಒಕ್ಕೂಟದ್ದಾಗಲಿದೆ ಎಂದು ಹೇಳಿದರು.

ಈ ನಿಚ್ಚಳ ಬಹುಮತ ಕಡೂರು ಕ್ಷೇತ್ರದ ಮುಂದಿನ ರಾಜಕೀಯಕ್ಕೆ ದಿಕ್ಸೂಚಿ ಆಗಲಿದೆ. ಈಗಾಗಲೇ ಜಿಲ್ಲಾ ಯೂನಿಯನ್ ಬ್ಯಾಂಕಿನಲ್ಲಿಯೂ ಬಿಜೆಪಿ ಬೆಂಬಲಿತರು ಗೆದ್ದಿದ್ದಾರೆ. ಪಿಕಾರ್ಡ್ ಬ್ಯಾಂಕ್ ರೈತಾಪಿ ವರ್ಗಕ್ಕೆ ನೆರವು ನೀಡುವ ಆರ್ಥಿಕ ಸಂಸ್ಥೆಯಾಗಿದ್ದು, ಗೆದ್ದವರು ಸೇವಾ ಮನೋಭಾವನೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಕಿವಿ ಮಾತು ಹೇಳಿದರು.

ಮುಖಂಡ ವೈ.ಎಸ್.ವಿ ದತ್ತ, ನೂತನ ನಿರ್ದೇಶಕ ಕೆ.ಎಚ್.ರಂಗನಾಥ್, ಮತಿಘಟ್ಟ ಶೇಖರಪ್ಪ ಮಾತನಾಡಿದರು.

ಟಿ.ಆರ್.ಲಕ್ಕಪ್ಪ, ರಾಜನಾಯ್ಕ, ಶಾಮಿಯಾನ ಚಂದ್ರು, ಎ.ಮಣಿ, ರವಿ, ಜಿಗಣೆಹಳ್ಳಿ ನೀಲಕಂಠಪ್ಪ ಸೇರಿದಂತೆ ಬಿಜೆಪಿ–ಜೆಡಿಎಸ್ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.