ಚಿಕ್ಕಮಗಳೂರು: ಬಿಜೆಪಿ ಯುವಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಅವರನ್ನು ಪೊಲೀಸರು ಬಂಧನ ಖಂಡಿಸಿ, ಪ್ರತಿಭಟನೆ ನಡೆಸುವ ಮೂಲಕ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಆರ್.ಲಾಕೇಶ್ ಒತ್ತಾಯಿಸಿದರು.
ಬಿಜೆಪಿ ಮುಖಂಡರು ನಡೆಸುತ್ತಿರುವ ಪ್ರತಿಭಟನೆ ಮತ್ತು ಕಾರ್ಯಕ್ರಮದ ವೇಳೆ ಪೊಲೀಸರು ರಕ್ಷಣೆ ನೀಡುತ್ತಿದ್ದಾರೆ. ಅವರ ವಿರುದ್ಧವೇ ದಬ್ಬಾಳಿಕೆ ಮತ್ತು ದರ್ಪದಿಂದ ಬಿಜೆಪಿ ಕಾರ್ಯಕರ್ತರು ಮಾತನಾಡುತ್ತಿದ್ದಾರೆ. ಇದು ಕಾನೂನು ಮತ್ತು ಸಂವಿಧಾನ ವಿರೋಧಿ ನಡೆ ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಹೇಳಿದರು.
ನಗರಠಾಣೆ ಎದುರು ನಡೆದ ಪ್ರತಿಭಟನೆಯಲ್ಲಿ ಪೊಲೀಸರ ಜೀಪಿಗೆ ಅಡ್ಡ ಮಲಗಲು ಹೋಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ದೇಶ, ಸಂಸ್ಕೃತಿಯ ಬಗ್ಗೆ ಮಾತನಾಡುವ ಬಿಜೆಪಿ ಮುಖಂಡರಿಗೆ ಆ ರೀತಿ ಮಾತನಾಡುವ ನೈತಿಕತೆ ಇಲ್ಲ. ಬಿಜೆಪಿಯ ದಲಿತ ವಿರೋಧಿ ನೀತಿ ಈಗ ಬಹಿರಂಗವಾಗಿದೆ ಎಂದು ತಿಳಿಸಿದರು.
ಗೃಹ ಸಚಿವ ಜಿ.ಪರಮೇಶ್ವರ ಮತ್ತವರ ಕುಟುಂಬ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಚಿವ ಪ್ರಿಯಾಂಕ ಖರ್ಗೆ ಕುಟುಂಬದ ಬಗ್ಗೆ ಪದೇ ಪದೇ ಅವಹೇಳನ ಮಾಡಲಾಗುತ್ತಿದೆ. ಆ ಮೂಲಕ ಬಿಜೆಪಿಯವರ ಮನಃಸ್ಥಿತಿ ಏನೆಂಬುದು ಅರ್ಥವಾಗುತ್ತಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಎಚ್.ಡಿ. ತಮ್ಮಯ್ಯ ಅವರ ಬಗ್ಗೆಯೂ ಅವಾಚ್ಯವಾಗಿ ನಿಂದಿಸಿದ್ದಾರೆ. ಇದನ್ನು ಗಮನಿಸಿದರೆ ಬಿಜೆಪಿ ಸಂಸ್ಕೃತಿ ಎಷ್ಟು ಕೀಳುಮಟ್ಟಕ್ಕೆ ಇಳಿದಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ನೀತಿ ಮತ್ತು ಸಂಶೋಧನಾ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ್ ಹಿರೇಗೌಜ, ಕ್ಷೇತ್ರ ಸಮಿತಿ ಯುವ ಕಾಂಗ್ರೆಸ್ ಮುಖಂಡ ಮುಕೇಶ್, ಸಿದ್ದೇಶ್, ಆದರ್ಶ ಬಹುಜನ್, ಪ್ರಕಾಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.