ADVERTISEMENT

ಚಿಕ್ಕಮಗಳೂರು | ಬಿಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆ ಹೆಚ್ಚಳ

ಒಂದೂವರೆ ತಿಂಗಳಲ್ಲಿ 40 ಸಾವಿರ ಹೊಸ ಗ್ರಾಹಕರು

ವಿಜಯಕುಮಾರ್ ಎಸ್.ಕೆ.
Published 7 ಮೇ 2025, 5:58 IST
Last Updated 7 ಮೇ 2025, 5:58 IST
ಮೂಡಿಗೆರೆ ತಾಲ್ಲೂಕಿನ ಆಲೆಖಾನ್ ಹೊರಟ್ಟಿಯಲ್ಲಿ ನಿರ್ಮಾಣವಾಗಿರುವ ಸ್ಯಾಟಿಲೈಟ್ ಟವರ್
ಮೂಡಿಗೆರೆ ತಾಲ್ಲೂಕಿನ ಆಲೆಖಾನ್ ಹೊರಟ್ಟಿಯಲ್ಲಿ ನಿರ್ಮಾಣವಾಗಿರುವ ಸ್ಯಾಟಿಲೈಟ್ ಟವರ್   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆಗುಂದಿದ್ದ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಮತ್ತೆ ಗ್ರಾಹಕರನ್ನು ಆಕರ್ಷಿಸುತ್ತಿದೆ. ಒಂದೂವರೆ ತಿಂಗಳಲ್ಲಿ 40 ಸಾವಿರ ಹೊಸ ಗ್ರಾಹಕರು ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಂಪರ್ಕ ಪಡೆದಿದ್ದಾರೆ.

ಜಿಲ್ಲೆಯ ಮಲೆನಾಡು ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆಯೇ ಹೆಚ್ಚು. ಒಂದು ಕಾಲದಲ್ಲಿ ಮಲೆನಾಡಿನ ಮೂಲೆಗೂ ಲ್ಯಾಂಡ್‌ಲೈನ್ ಸಂಪರ್ಕ ಕಲ್ಪಿಸಿದ್ದ ಬಿಎಸ್‌ಎನ್‌ಎಲ್‌, ಖಾಸಗಿ ಕಂಪನಿಗಳ ಆರ್ಭಟಕ್ಕೆ ನುಲುಗಿ ಹೋಗಿತ್ತು. 4ಜಿ, 5ಜಿ ವ್ಯವಸ್ಥೆಯೊಂದಿಗೆ ನೀಡುವ ಆಫರ್‌ನಿಂದ ಜನರಿಂದ ದೂರವೇ ಆಗಿತ್ತು. 

ಮಲೆನಾಡಿನ ನೆಟ್‌ವರ್ಕ್‌ ಸಮಸ್ಯೆ ಸರಿಪಡಿಸಲು ಒಂದೆಡೆ ಬಿಎಸ್‌ಎನ್‌ಎಲ್ ಪ್ರಯತ್ನ ನಡೆಸುತ್ತಿದ್ದರೆ, ಗ್ರಾಹಕರು ಬಿಎಸ್‌ಎನ್‌ಎಲ್‌ ಸಂಪರ್ಕ ಪಡೆಯುತ್ತಿದ್ದಾರೆ. ಒಂದೂವರೆ ತಿಂಗಳಲ್ಲಿ 40 ಸಾವಿರ ಹೊಸ ಗ್ರಾಹಕರು ಸೇರ್ಪಡೆಯಾಗಿದ್ದರೆ, ಮಲೆನಾಡು ಭಾಗದಲ್ಲೇ 30 ಸಾವಿರ ಗ್ರಾಹಕರು ಬಿಎಸ್‌ಎನ್‌ಎಲ್ ಸೇರಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2.50 ಲಕ್ಷ ಗ್ರಾಹಕರಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸೌಲಭ್ಯ ಉತ್ತಮಪಡಿಸಲು 28 ನೆಟ್‌ವರ್ಕ್ ಟವರ್‌ಗಳನ್ನು ನಿರ್ಮಿಸಲಾಗಿದೆ. ಈ ಪೈಕಿ 17‌ ಟವರ್‌ಗಳಿಗೆ 4ಜಿ ಸೇವೆ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ 5ಜಿ ಸೇವೆಯನ್ನು ನೀಡಲು ಸಿದ್ಧತೆ ನಡೆದಿದೆ.

ನೆಟ್‌ವರ್ಕ್ ಸೌಲಭ್ಯವೇ ಇಲ್ಲದ ಮೂಡಿಗೆರೆ ತಾಲ್ಲೂಕಿನ ಅಲೆಖಾನ್ ಹೊರಟ್ಟಿ ಗ್ರಾಮಕ್ಕೆ ಸ್ಯಾಟಿಲೈಟ್ ನೆಟ್‌ವರ್ಕ್ ಸೌಲಭ್ಯ ಕಲ್ಪಿಸಲಾಗಿದೆ. ಮಲೆನಾಡಿನ ಕುಗ್ರಾಮಗಳನ್ನೂ ತಲುಪುವ ಪ್ರಯತ್ನ ಮಾಡುತ್ತಿದ್ದು, ಗ್ರಾಹಕರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಸೌರಶಕ್ತಿ ಬಳಕೆ:  ಬಿಎಸ್‌ಎನ್‌ಎಲ್ ಟವರ್‌ಗಳಿಗೆ ಈ ಹಿಂದೆ ಮೆಸ್ಕಾಂನಿಂದ ವಿದ್ಯುತ್ ಸಂಪರ್ಕ ಪಡೆದುಕೊಂಡಿತ್ತು. ವಿದ್ಯುತ್ ಪೂರೈಕೆ ಇದ್ದರೆ ಮಾತ್ರ ನೆಟ್‌ವರ್ಕ್ ಕಾರ್ಯನಿರ್ವಹಿಸುತ್ತಿತ್ತು. ಈ ಸಮಸ್ಯೆಯನ್ನು ದೂರಗೊಳಿಸಲು ಬಿಎಸ್‌ಎನ್‌ಎಲ್‌ ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.

ಟವರ್‌ಗಳಿಗೆ ವಿದ್ಯುತ್ ಸಂಪರ್ಕದ ಜತೆಗೆ ಸೌರಶಕ್ತಿ ಮತ್ತು ಬ್ಯಾಟರಿಗಳನ್ನೂ ಅಳವಡಿಸಿದೆ. ಹೊಸದಾಗಿ ನಿರ್ಮಿಸಿರುವ 17 ಟವರ್‌ಗಳಲ್ಲಿ ಮೂರು ವಿಧದ ವಿದ್ಯುತ್ ಪೂರೈಕೆಯಾಗುತ್ತಿದೆ. ಇದರಿಂದಾಗಿ ಗ್ರಾಹಕರಿಗೆ ನಿರಂತರ ನೆಟ್‌ವರ್ಕ್ ಸೇವೆ ದೊರಕುತ್ತಿದೆ ಎಂದು ಬಿಎಸ್‌ಎನ್‌ಎಲ್ ಅಧಿಕಾರಿಗಳು ಹೇಳುತ್ತಾರೆ.

170 ಕಡೆ 4ಜಿ ನೆಟ್‌ವರ್ಕ್‌ ಜಿಲ್ಲೆಯಲ್ಲಿ 217 ಟವರ್‌ಗಳಲ್ಲಿ 3ಜಿ ನೆಟ್‌ವರ್ಕ್ ಇದ್ದರೆ 170 ಕಡೆ 4ಜಿ ನೆಟ್‌ವರ್ಕ್‌ ಕಾರ್ಯಾರಂಭವಾಗಿದೆ ಎಂದು ಬಿಎಸ್‌ಎನ್‌ಎಲ್ ಉಪಮಹಾ ಪ್ರಬಂಧಕ ಬಾಲಾಜಿ ಹೇಳಿದರು. ಯಾವುದೇ ನೆಟ್‌ವರ್ಕ್ ಇಲ್ಲದ ಜಿಲ್ಲೆಯ 28 ಕಡೆಗಳಲ್ಲಿ ಟವರ್ ಮಂಜೂರಾಗಿದೆ. ಈ ಪೈಕಿ 21 ಕಡೆ ಈಗಾಗಲೇ ಟವರ್ ನಿರ್ಮಾಣ ಕೆಲಸ ಪೂರ್ಣವಾಗಿದೆ. 17 ಕಡೆ ಈಗಾಗಲೇ ಟವರ್ ಕಾರ್ಯನಿರ್ವಹಿಸುತ್ತಿವೆ. ನೆಟ್‌ವರ್ಕ್ ಸಮಸ್ಯೆ ಸರಿಯಾಗುತ್ತಿರುವುದರಿಂದ ಗ್ರಾಹಕರ ಸಂಖ್ಯೆ ಪ್ರತಿ ತಿಂಗಳು ಹೆಚ್ಚಾಗುತ್ತಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.