ADVERTISEMENT

‘ಕಾಮಗಾರಿ ಪೂರ್ಣಗೊಳ್ಳುವವರೆಗೆ ಬಾಡಿಗೆ ವಿನಾಯಿತಿ’

ಪಟ್ಟಣ ಪಂಚಾಯಿತಿ ನಡೆದ ಸಾಮಾನ್ಯ ಸಭೆ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 5:19 IST
Last Updated 1 ನವೆಂಬರ್ 2025, 5:19 IST
ನರಸಿಂಹರಾಜಪುರದ ಪಟ್ಟಣ ಪಂಚಾಯಿತಿಯಲ್ಲಿ ಶುಕ್ರವಾರ ಅಧ್ಯಕ್ಷೆ ಜುಬೇದಾ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು
ನರಸಿಂಹರಾಜಪುರದ ಪಟ್ಟಣ ಪಂಚಾಯಿತಿಯಲ್ಲಿ ಶುಕ್ರವಾರ ಅಧ್ಯಕ್ಷೆ ಜುಬೇದಾ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು   

ನರಸಿಂಹರಾಜಪುರ: ನಗರೋತ್ಥಾನ 4 ಯೋಜನೆಯಡಿ ಕ್ರಿಯಾಯೋಜನೆ ಮಂಜೂರಾಗಿರುವ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳುವವರೆಗೆ ನಿಲ್ದಾಣದ ಬಾಡಿಗೆದಾರರಿಗೆ ಬಾಡಿಗೆಯಲ್ಲಿ ವಿನಾಯಿತಿ ನೀಡಬೇಕು. ಅದನ್ನು ಕರಾರು ಅವಧಿಯಲ್ಲಿ ಪರಿಗಣಿಸಬೇಕು ಎಂದು ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷೆ ಜುಬೇದಾ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನಿಸಲಾಯಿತು.

ಬಸ್ ನಿಲ್ದಾಣದ ಅಭಿವೃದ್ಧಿ ವಿಚಾರ ಪ್ರಸ್ತಾಪವಾದಾಗ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಅಂಗಡಿ ಬಾಗಿಲು ಮುಚ್ಚುವುದರಿಂದ ಬಾಡಿಗೆ ಪಾವತಿಸಿ ಎಂದು ಹೇಳುವುದು ಮಾನವೀಯತೆಯಲ್ಲ. ಪಟ್ಟಣ ಪಂಚಾಯಿತಿಯಿಂದ ಕಾಮಗಾರಿ ಮುಗಿಯುವವರೆಗೆ ಬಾಡಿಗೆ ವಿನಾಯಿತಿ ನೀಡುವ ಬಗ್ಗೆ ಅಧಿಕೃತ ದಾಖಲೆ ನೀಡಬೇಕು. ಈ ಬಗ್ಗೆ ಬಾಡಿಗೆದಾರರ ಸಭೆ ಕರೆದು ತೀರ್ಮಾನಿಸುವಂತೆ ಅಧ್ಯಕ್ಷೆ ಜುಬೇದಾ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಸೂಚಿಸಿದರು.

ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಮುತ್ತಿನಕೊಪ್ಪದ ತುಂಗಾ ನದಿಯಿಂದ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಗೆ ₹22.63 ಕೋಟಿ ಅನುದಾನ ಬಿಡುಗಡೆಯಾಗಿದೆ. ಪಟ್ಟಣದ 1,800 ಮನೆಗಳಿಗೆ ಹೊಸದಾಗಿ ಪೈಪ್ ಲೈನ್ ಅಳವಡಿಸಿ ಮೀಟರ್ ಸಹಿತ ಪ್ರತಿ ವ್ಯಕ್ತಿಗೆ ದಿನಕ್ಕೆ 135 ಲೀಟರ್‌ನಂತೆ 16 ಲಕ್ಷ ಲೀಟರ್ ನೀರು ಸರಬರಾಜು ಮಾಡಲಾಗುವುದು. ಇದಕ್ಕೆ 2.50ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಲಾಗುವುದು ಎಂದು ಕುಡಿಯುವ ನೀರು ಸರಬರಾಜು ಯೋಜನೆ ಎಂಜಿನಿಯರ್ ಮಾಹಿತಿ ನೀಡಿದರು.

ADVERTISEMENT

ಪಟ್ಟಣದ ವ್ಯಾಪ್ತಿಯ ಮುಖ್ಯರಸ್ತೆಯ ಎರಡು ಬದಿಯಲ್ಲೂ ಪೈಪ್ ಲೈನ್ ಅಳವಡಿಸಬೇಕು. ಸಮರ್ಪಕವಾಗಿ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಸಭೆ ಎಂಜಿನಿಯರ್‌ಗೆ ಸೂಚಿಸಿತು.

ಕಸ ವಿಲೇವಾರಿ ಘಟಕದ ಟೆಂಡರ್ ಪಡೆದ ಗುತ್ತಿಗೆದಾರರು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕಂದಾಯ ನಿರೀಕ್ಷಕ ವಿಜಯಕುಮಾರ್ ಸಭೆಯ ಗಮನಕ್ಕೆ ತಂದರು.

ಸಮರ್ಪಕವಾಗಿ ಕಾರ್ಯನಿರ್ವಹಿಸದ ಗುತ್ತಿಗೆದಾರನ ಟೆಂಡರ್ ರದ್ದು ಪಡಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಪಟ್ಟಣದ ಶಾರದ ವಿದ್ಯಾಮಂದಿರದ ಬಳಿಯ ಕೆರೆಯ ಕಾಮಗಾರಿ ಕಳಪೆಯಾಗಿದೆ. ಕೆರೆಗೆ ತಡೆಗೋಡೆ ನಿರ್ಮಿಸಲು ಅನುದಾನ ಮೀಸಲಿಟ್ಟರೂ ಅನುಮೋದನೆ ನೀಡದಿರುವ ಬಗ್ಗೆ ಪ್ರಶಾಂತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಆಶ್ರಯ ಬಡಾವಣೆಗೆ ಶಾಸಕರು ₹4ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದು, ರಸ್ತೆ ಮತ್ತು ಪಾರ್ಕ್‌ಗೆ ಟಿ.ಡಿ.ರಾಜೇಗೌಡ ಅವರ ಹೆಸರಿಡುವಂತೆ ಸಭೆ ತೀರ್ಮಾನಿಸಿತು. ಪಟ್ಟಣದಲ್ಲಿ ಬೀದಿ ದೀಪದ ಗುತ್ತಿಗೆ ಪಡೆದವರು ಸಮರ್ಪಕವಾಗಿ ಬೀದಿ ದೀಪಗಳನ್ನು ಅಳವಡಿಸದಿರುವ ಬಗ್ಗೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ವಾರ್ಡ್ 8ರಲ್ಲಿ ಮದರ್ ಥೆರಸಾ ಬಸ್ ತಂಗುದಾಣ ನವೀಕರಿಸಲು ಲಿಟ್ಲ್ ಫ್ಲವರ್ ಚರ್ಚ್‌ನವರು ಮನವಿ ಸಲ್ಲಿಸಿದ ವಿಚಾರ ಚರ್ಚೆಗೆ ಬಂತು. ಈ ಬಸ್ ತಂಗುದಾಣಕ್ಕೆ ಮದರ್ ಥೆರೆಸಾ ಅವರ ಹೆಸರನ್ನೇ ಇಡಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಪಟ್ಟಣ ಪಂಚಾಯಿತಿಯಿಂದ ನೀರಿನ ಶುಲ್ಕವನ್ನು ಕಡ್ಡಾಯವಾಗಿ ವಸೂಲಿ ಮಾಡಬೇಕು. ಅರಣ್ಯ, ಪೊಲೀಸ್, ಲೋ‌ಕೋಪಯೋಗಿ ಇಲಾಖೆಯ ಕಟ್ಟಡಗಳನ್ನು ನೀರಿನ ಬಿಲ್ ಬಾಕಿ ಉಳಿಸಿಕೊಂಡಿದ್ದು, ನೋಟಿಸ್ ನೀಡಿ ವಸೂಲಿ ಮಾಡಬೇಕೆಂದು ಅಧ್ಯಕ್ಷೆ ಜುಬೇದಾ ಸೂಚಿಸಿದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಉಮಾಕೇಶವ್, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಸಿಬ್ಬಂದಿ ಉಷಾ, ಲಕ್ಷ್ಮಣಗೌಡ ಭಾಗವಹಿಸಿದ್ದರು.

ಆಶ್ರಯ ನಿವೇಶನ

ನರಸಿಂಹರಾಜಪುರ ಪಟ್ಟಣದ ವ್ಯಾಪ್ತಿಯಲ್ಲಿ ರಸ್ತೆ ವಿಸ್ತರಣೆಗೆ ಸರ್ಕಾರದಿಂದ ಈಗಾಗಲೇ ಅನುಮೋದನೆ ದೊರೆತಿದ್ದು ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಸಂಪೂರ್ಣ ಮನೆ ಕಳೆದುಕೊಳ್ಳುವ ಮೂರು–ನಾಲ್ಕು ಕುಟುಂಬಗಳಿಗೆ ಪರಿಹಾರ ನೀಡುವುದರ ಜತೆಗೆ ಆಶ್ರಯ ಬಡಾವಣೆಯಲ್ಲಿ ನಿವೇಶನ ನೀಡಲು ಆಶ್ರಯ ಸಮಿತಿ ಅಧ್ಯಕ್ಷರಿಗೆ ಶಿಫಾರಸು ಮಾಡಲು ಸಭೆ ನಿರ್ಧರಿಸಿತು. ಕೆಲವು ಅಂಗಡಿಯವರಿಗೆ ರಸ್ತೆ ಕಾಮಗಾರಿ ಮುಗಿಯುವವರೆಗೂ ಪಟ್ಟಣ ಪಂಚಾಯಿತಿಯ ಖಾಲಿ ಮಳಿಗೆಯಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗುವುದು. ಖಾತೆ ಇಲ್ಲದೆ ಇರುವ ಮನೆಯವರಿಗೂ ಮಾನವೀಯ ನೆಲೆಗಟ್ಟಿನಲ್ಲಿ ಪರಿಹಾರ ನೀಡಲಾಗುವುದು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ತಿಳಿಸಿದರು. ಸಭೆ ಇದಕ್ಕೆ ಒಪ್ಪಿಗೆ ಸೂಚಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.