ADVERTISEMENT

ಕಾಯ್ದೆ ಬಗ್ಗೆ ಅನಗತ್ಯವಾಗಿ ಭಯ ಹುಟ್ಟಿಸಲಾಗುತ್ತಿದೆ: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 12:32 IST
Last Updated 21 ಡಿಸೆಂಬರ್ 2019, 12:32 IST
ಸಿ.ಟಿ.ರವಿ
ಸಿ.ಟಿ.ರವಿ   

ಚಿಕ್ಕಮಗಳೂರು: ‘ಪೌರತ್ವ ತಿದ್ದುಪಡಿ ಕಾಯ್ದೆಯಿಂದ(ಸಿಎಎ) ಯಾವ ಅಲ್ಪಸಂಖ್ಯಾತರ ಹಕ್ಕು ಮೊಟಕುಗೊಂಡಿದೆ ಎಂದು ಕಾಂಗ್ರೆಸ್‌ನ ಯು.ಟಿ.ಖಾದರ್‌, ಸಿದ್ದರಾಮಯ್ಯ ಹೇಳಬೇಕು, ಈ ಬಗ್ಗೆ ಚರ್ಚೆಗೆ ಸಿದ್ಧ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಸವಾಲೆಸೆದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪ್ರಜಾಪ್ರಭುತ್ವ ಇರುವುದು ಪರಸ್ಪರ ಕೆಸರೆರಚಾಟಕ್ಕಲ್ಲ. ಕಾಯ್ದೆಯನ್ನು ರಾಜಕೀಯ ಹಿನ್ನೆಲೆಯಲ್ಲಿ ನೋಡದೆ ವಸ್ತುನಿಷ್ಠವಾಗಿ ಚರ್ಚಿಸಬೇಕು. ಸುಪ್ರೀಂಕೋರ್ಟ್‌ ಮೆಟ್ಟಿಲೇರಲು ಅವಕಾಶ ಇದೆ. ಆದರೆ, ದೊಂಬಿ ಎಬ್ಬಿಸುವ, ಬೆಂಕಿ ಹೆಚ್ಚು ಕೆಲಸ ಮಾಡಬಾರದು’ ಎಂದು ಪ್ರತಿಕ್ರಿಯಿಸಿದರು.

‘2003ರಲ್ಲಿ ರಾಜ್ಯಸಭೆಯಲ್ಲಿ ಮನಮೋಹನಸಿಂಗ್‌ ಅವರು ಭಾಷಣದಲ್ಲಿ ‘ಪಾಕಿಸ್ತಾನ, ಬಾಂಗ್ಲಾದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಸಂಕಷ್ಟ ಅನುಭವಿಸುತ್ತಿದ್ದು, ಅವರಿಗೆ ಪೌರತ್ವ ಕೊಡಬೇಕು’ ಎಂದು ಹೇಳಿದ್ದರು. ಅವರು ಹೇಳಿದ್ದನ್ನು ಬಿಜೆಪಿ ಈಗ ಅನುಷ್ಠಾನಗೊಳಿಸಿದರೆ ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ವಿರೋಧಿಸುತ್ತಿದ್ದಾರೆ. ವೋಟ್‌ ಬ್ಯಾಂಕ್ ಸದಾ ಕ್ರೋಢಿಕರಿಸಿಟ್ಟುಕೊಳ್ಳಬೇಕು ಎನ್ನುವುದು ಕಾಂಗ್ರೆಸ್‌ ಹುನ್ನಾರ’ ಎಂದು ಕುಟುಕಿದರು.

ADVERTISEMENT

‘ಪೌರತ್ವ ಕಾಯ್ದೆ ಅನುಷ್ಠಾನಗೊಳಿಸಿದರೆ ರಾಜ್ಯದಲ್ಲಿ ಬೆಂಕಿ ಹಾಕಿಸುತ್ತೇವೆ ಎಂದು ಯು.ಟಿ.ಖಾದರ್‌ ಹೇಳಿದ್ದಾರೆ. ಈ ಹೇಳಿಕೆ ಹಿಂದೆ ಷಡ್ಯಂತ್ರ ಇದೆ. ಷಡ್ಯಂತ್ರವನ್ನು ಸಾಕ್ಷಿ ಸಮೇತ ಬಯಲಿಗೆ ಎಳೆಯುತ್ತೇವೆ. ಕಾಯ್ದೆ ಬಗ್ಗೆ ಅನಗತ್ಯವಾಗಿ ಭಯ ಹುಟ್ಟಿಸಲಾಗುತ್ತಿದೆ. ನಿರಾಶ್ರಿತರಿಗೆ ಪೌರತ್ವ ಕೊಡುವ ಕಾಯ್ದೆ ಇದು’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.