ADVERTISEMENT

ಚಾರ್ಮಾಡಿ ಘಾಟಿ : ಕಾಮಗಾರಿಗೆ ₹ 300 ಕೋಟಿ ಅಂದಾಜುಪಟ್ಟಿ

ಚಾರ್ಮಾಡಿ: ಭಾರಿ ವಾಹನ ಸಂಚಾರಕ್ಕೆ ನಿರ್ಬಂಧ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 19:45 IST
Last Updated 15 ಸೆಪ್ಟೆಂಬರ್ 2019, 19:45 IST
ಚಾರ್ಮಾಡಿ ಘಾಟಿ
ಚಾರ್ಮಾಡಿ ಘಾಟಿ   

ಚಿಕ್ಕಮಗಳೂರು: ಚಾರ್ಮಾಡಿ ಘಾಟಿ ಮಾರ್ಗದಲ್ಲಿ ತಾತ್ಕಾಲಿಕ ರಿಪೇರಿ ಮುಗಿಸಿ ಲಘುವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಾರಿ ವಾಹನ ಸಂಚಾರಕ್ಕೆ ನಿರ್ಬಂಧ ಮುಂದುವರಿಸಲಾಗಿದೆ.

ಮಳೆಯಿಂದಾಗಿ ಚಾರ್ಮಾಡಿ ರಸ್ತೆಯಲ್ಲಿ ಕುಸಿದಿದ್ದ ಗುಡ್ಡದಮಣ್ಣು, ಬಿದ್ದಿದ್ದ ಮರಗಳನ್ನು ತೆರವುಗೊಳಿಸಿ ತಾತ್ಕಾಲಿಕ ಸುರಕ್ಷತಾ ಕಾಮಗಾರಿಗಳನ್ನು ಮುಗಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌) ಹಾಸನ ವಿಭಾಗದವರು ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಲಿಖಿತವಾಗಿ ತಿಳಿಸಿದ್ದಾರೆ.

ಹಳ್ಳದ ಬದಿ ತಡೆಗೋಡೆ ಕುಸಿದಿರುವ ಕಡೆ ಬದು ನಿರ್ಮಿಸುವ ಕಾಮಗಾರಿ, ಏಳು ಕಡೆ ಸಿಮೆಂಟ್‌ ಕಾಂಕ್ರಿಟ್‌ ಬ್ಲಾಕ್‌ ತಡೆಗಡೆ ನಿರ್ಮಾಣ, ಸೂಚನಾ ಫಲಕ ಅಳವಡಿಕೆ, ಚರಂಡಿ ನಿರ್ವಹಣೆ ನಡೆಯುತ್ತಿದೆ. ಶಾಶ್ವತ ದುರಸ್ತಿ ನಿಟ್ಟಿನಲ್ಲಿ ಅಂದಾಜು ₹300 ಕೋಟಿ ಅನುದಾನದ ಅಗತ್ಯ ಇದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

ರಸ್ತೆಯ ಕೆಳಭಾಗದಲ್ಲಿ ಕೊರಕಲಾಗಿ ಅಗಲ ಕಡಿಮೆಯಾಗಿರುವ ಕಡೆಗಳಲ್ಲಿ ಸಾಯಿಲ್‌ ನೆಯ್ಲ್‌ ತಂತ್ರಜ್ಞಾನ ಅಳವಡಿಸಿಕೊಂಡು ಶಾಶ್ವತ ದುರಸ್ತಿ ಕೈಗೊಳ್ಳಲು ಪರಿಣತರ ತಂಡ ಸಲಹೆ ನೀಡಿದೆ. ದುರಸ್ತಿ ನಿಟ್ಟಿನಲ್ಲಿ ಅಂದಾಜು ಪಟ್ಟಿಗೆ ಅನುಮೋದನೆ ದೊರೆತ ತಕ್ಷಣ ಟೆಂಡರ್‌ ಆಹ್ವಾನಿಸಿ ತ್ವರಿತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಈ ಕಾಮಗಾರಿಗೆ ಹೆಚ್ಚು ಸಮಯ ಹಿಡಿಯಲಿದೆ. ಸದ್ಯಕ್ಕೆ ಲಘು ವಾಹನಗಳ ಸಂಚಾರಕ್ಕೆ ಬೆಳಿಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಮಾರ್ಗ ಮುಕ್ತಗೊಳಿಸಬಹುದು ಎಂದು ತಿಳಿಸಿದ್ದಾರೆ.

ವರದಿ ಆಧರಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಭಾನುವಾರದಿಂದ (ಬೆಳಿಗ್ಗೆ 6ರಿಂದ ಸಂಜೆ 6 ಗಂಟೆವರೆಗೆ) ಲಘು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ. ಮಾರ್ಗದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಹಾಸನ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಸೂಚಿಸಿದ್ದಾರೆ.

ದ್ವಿಚಕ್ರ ವಾಹನ, ಕಾರು, ಜೀಪು, ವ್ಯಾನು, ಆಂಬುಲೆನ್ಸ್‌, ಇತರ ಲಘುವಾಹನಗಳಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಬುಲೆಟ್‌ ಟ್ಯಾಂಕರ್ಸ್‌, ಷಿಪ್‌ ಕಾರ್ಗೊ ಕಂಟೈನರ್ಸ್‌, ಬಸ್ಸುಗಳು, ಸರಕು ಸಾಗಣೆ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಮುಂದುವರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.