ADVERTISEMENT

ಯುದ್ಧ ಬೇಡ, ಶಾಂತಿ ಬೇಕು

ಪೋಶೆಟ್ಟಿಹಳ್ಳಿ ಸರ್ಕಾರಿ ಹಿರಿಯ ಪ್ರೌಢಶಾಲೆಗೆ ಜಪಾನಿನ ಬಾನ್ ಪ್ರೀ ಆರ್ಟ್ ಕಲಾವಿದರ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 11:11 IST
Last Updated 3 ಆಗಸ್ಟ್ 2019, 11:11 IST
ಪೋಶೆಟ್ಟಿಹಳ್ಳಿ ಸರ್ಕಾರಿ ಹಿರಿಯ ಪ್ರೌಢಶಾಲೆಗೆ ಭೇಟಿ ನೀಡಿದ ಜಪಾನಿನ ಬಾನ್ ಪ್ರೀ ಆರ್ಟ್ ಕಲಾವಿದರ ತಂಡ
ಪೋಶೆಟ್ಟಿಹಳ್ಳಿ ಸರ್ಕಾರಿ ಹಿರಿಯ ಪ್ರೌಢಶಾಲೆಗೆ ಭೇಟಿ ನೀಡಿದ ಜಪಾನಿನ ಬಾನ್ ಪ್ರೀ ಆರ್ಟ್ ಕಲಾವಿದರ ತಂಡ   

ಚಿಕ್ಕಬಳ್ಳಾಪುರ: ‘ನಮಗೆ ಯಾವುದೇ ಯುದ್ಧ ಬೇಡ. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಸದಾ ಜನರು ಶಾಂತಿ, ನೆಮ್ಮದಿ ಜೀವನ ಮಾಡಬೇಕು’ ಎಂದು ಜಪಾನಿನ ಬಾನ್ ಪ್ರೀ ಆರ್ಟ್ ಅಧ್ಯಕ್ಷ ಶಿಯೋಸಾಗುಚಿ ಸಾನ್ ಹೇಳಿದರು.

ತಾಲ್ಲೂಕಿನ ಪೋಶೆಟ್ಟಿಹಳ್ಳಿ ಸರ್ಕಾರಿ ಹಿರಿಯ ಪ್ರೌಢಶಾಲೆಯಲ್ಲಿ ಬಾನ್ ಪ್ರೀ ಆರ್ಟ್ ಜಪಾನ್ ಮತ್ತು ಇಂಡಿಯನ್ ಪೋಕ್ ಟ್ರಸ್ಟ್ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಯುದ್ಧ ಬೇಡ ಶಾಂತಿ ಬೇಕು’ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರತಿ ವರ್ಷ ಅಗಸ್ಟ್ ತಿಂಗಳು ಬರುತ್ತಲೇ ಜಪಾನಿನ ಹಿರೊಶಿಮಾ ಮತ್ತು ನಾಗಸಾಕಿ ಮೇಲೆ ಅಮೇರಿಕಾ ದೇಶ ನಡೆಸಿದ ಪರಮಾಣು ಬಾಂಬ್ ದಾಳಿ ಮತ್ತೆ ಮತ್ತೆ ನೆನಪಿಗೆ ಬರುತ್ತದೆ. ವಿಶ್ವ ಪರಮಾಣು ಶಸ್ತ್ರಾಸ್ತ್ರ ಮುಕ್ತವಾಗಬೇಕು. ಜಾಗತಿಕತೆಯಿಂದ ಹೆಚ್ಚುತ್ತಿರುವ ರಾಷ್ಟ್ರೀಯತೆ ಶಾಂತಿಯನ್ನು ಕದಡುತ್ತಿದೆ’ ಎಂದು ತಿಳಿಸಿದರು.

‘ಅಣು ಬಾಂಬ್ ದಾಳಿಗೆ ಒಳಗಾದ ಹಿರೋಷಿಮಾ ಮತ್ತು ನಾಗಸಾಕಿಯಲ್ಲಿ ಇವತ್ತಿಗೂ ಮಕ್ಕಳು ಅಂಗವಿಕಲರಾಗಿ ಹುಟ್ಟುತ್ತಾರೆ. ಆದ್ದರಿಂದ ನಮಗೆ ಯಾವುದೇ ದ್ವೇಷ, ಅಸೂಯೆಯ ಯುದ್ಧ ಬೇಡ. ಶಾಂತಿ, ನೆಮ್ಮದಿ ಜೀವನದ ಅಗತ್ಯವಿದೆ. ದಾಳಿ ನಡೆದು 74 ವರ್ಷಗಳು ಕಳೆದಿವೆ. ಅದರ ಅಂಗವಾಗಿ ಇವತ್ತು ಮಕ್ಕಳಿಗೆ ಕಲೆ ಮೂಲಕ ಶಾಂತಿ ಸಂದೇಶ ಸಾರುವ ಕೆಲಸ ಮಾಡುತ್ತಿದ್ದೇವೆ’ ಎಂದರು.

ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕಲಿಕಾ, ಕ್ರೀಡಾ ಸಾಮಾಗ್ರಿಗಳು ವಿತರಿಸಲಾಯಿತು. ಬಾನ್ ಪ್ರೀ ಆರ್ಟ್ ಕಲಾವಿದರಾದ ಮೊರಿಶಿತ ಸಾನ್, ನಾಕ್ಕಾಯಮ್ ಸಾನ್ , ಹಿಮುಚಿಸಾನ್, ಸುವಾ ಸಾನ್, ಇಂಡಿಯನ್ ಪೋಕ್ ಟ್ರಸ್ಟ್ ಜಿಲ್ಲಾ ಘಟಕದ ಅಧ್ಯಕ್ಷ ನಲ್ಲಕದಿರೇನಹಳ್ಳಿ ಜಂಬೆ ಬಾಲು, ಕಲಾವಿದರಾದ ಹಾರನಹಳ್ಳಿ ವಿವೇಕ್ ಮೌರ್ಯ, ನಾಗೇಶ್, ಗೌತಮ್ ಮೌರ್ಯ, ಅನೀಶ್, ಅಮರಾವತಿ, ಹನುಮಂತು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.