ಮಂಗಳೂರು: ಬೇಸಿಗೆ ರಜೆಯಲ್ಲಿರುವ ಮಕ್ಕಳು ಇನ್ನು 10 ದಿನಗಳಲ್ಲಿ ಶಾಲೆಗೆ ಹೊರಡಲು ಅಣಿಯಾಗಲಿದ್ದಾರೆ. ಶೈಕ್ಷಣಿಕ ವರ್ಷದ ಆರಂಭದ ದಿನವೇ ಮಕ್ಕಳಿಗೆ ಹೊಸ ಪಠ್ಯ ಪುಸ್ತಕ ನೀಡಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಈಗಾಗಲೇ ಶೇ 50ರಷ್ಟು ಪಠ್ಯಪುಸ್ತಕಗಳು ಪೂರೈಕೆಯಾಗಿವೆ.
ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಉಚಿತವಾಗಿ ಮತ್ತು ಅನುದಾನ ರಹಿತ ಶಾಲೆಗಳಿಗೆ ನಿಗದಿತ ದರದಲ್ಲಿ ಸರ್ಕಾರ ಪಠ್ಯಪುಸ್ತಕಗಳನ್ನು ಸರಬರಾಜು ಮಾಡುತ್ತದೆ. ಜಿಲ್ಲೆಯಿಂದ ಈ ಬಾರಿ 10.61 ಲಕ್ಷ ಉಚಿತ ಹಾಗೂ 5.32 ಲಕ್ಷ ಮಾರಾಟ, 20,606 ಆರ್‌ಟಿಇ ಪಠ್ಯಪುಸ್ತಕಗಳು ಸೇರಿ ಒಟ್ಟು 16.14 ಲಕ್ಷ ಪಠ್ಯಪುಸ್ತಕಗಳ ಬೇಡಿಕೆ ಸಲ್ಲಿಸಲಾಗಿದೆ. ಅವುಗಳಲ್ಲಿ 7.41 ಲಕ್ಷ ಪಠ್ಯಪುಸ್ತಕಗಳು ಪೂರೈಕೆಯಾಗಿವೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
6ರಿಂದ 10ನೇ ತರಗತಿ ತನಕ ಮೂರು ಪ್ರಮುಖ ವಿಷಯ, ಮೂರು ಭಾಷಾ ವಿಷಯ ಹಾಗೂ ದೈಹಿಕ ಶಿಕ್ಷಣ ಸೇರಿ ಒಟ್ಟು ಏಳು ವಿಷಯಗಳು ಇರುತ್ತವೆ. ಒಟ್ಟು 14 ಟೈಟಲ್‌ಗಳ ಪುಸ್ತಕಗಳು, 1ರಿಂದ 5ನೇ ತರಗತಿಗೆ ನಾಲ್ಕು ವಿಷಯಗಳು ಇದ್ದು, ಎಂಟು ಟೈಟಲ್‌ಗಳ ಪುಸ್ತಕಗಳು ಪೂರೈಕೆಯಾಗುತ್ತವೆ. ಇನ್ನು ಒಂದು ವಾರದಲ್ಲಿ ಎಲ್ಲ ಪುಸ್ತಕಗಳೂ ಬರುವ ನಿರೀಕ್ಷೆ ಇದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 8 ಶೈಕ್ಷಣಿಕ ತಾಲ್ಲೂಕುಗಳಿದ್ದು, ಅಲ್ಲಿಗೆ ಪುಸ್ತಕಗಳು ಪೂರೈಕೆಯಾಗಲಿವೆ. ಅಲ್ಲಿಂದ ಶಾಲೆಗಳಿಗೆ ಪೂರೈಕೆಯಾಗಲಿದ್ದು, ಸಾಗಣೆ ವೆಚ್ಚವನ್ನೂ ಸರ್ಕಾರವೇ ಭರಿಸಲಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ 1,387 ಸರ್ಕಾರಿ ಶಾಲೆಗಳಿದ್ದು, ಯಾವ ಶಾಲೆಗೂ ಇನ್ನೂ ಸಮವಸ್ತ್ರ ಪೂರೈಕೆಯಾಗಿಲ್ಲ. ಶೀಘ್ರವೇ ಸಮವಸ್ತ್ರ ಬರುವ ನಿರೀಕ್ಷೆ ಇದೆ ಎಂದು ಅವರು ಮಾಹಿತಿ ನೀಡಿದರು.
ಶಾಲಾ ಆರಂಭಕ್ಕೆ ಸಿದ್ಧತೆ
ನರಸಿಂಹರಾಜಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಶಾಲೆಗಳ ಆರಂಭಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಶಾಲೆಗಳು ಮೇ 29ರಿಂದ ಆರಂಭವಾಗಲಿದ್ದು ಮೇ 25ರಂದು 1ರಿಂದ 10ನೇ ತರಗತಿಯವರೆಗೆ ಪುಸ್ತಕ ವಿತರಿಸಲು ನಿರ್ಧರಿಸಲಾಗಿದೆ. ತಾಲ್ಲೂಕಿನ ವ್ಯಾಪ್ತಿಯಲ್ಲಿ 2ನೇ ತರಗತಿಯಿಂದ 10ನೇ ತರಗತಿ ತನಕ 9263 ಮಕ್ಕಳಿದ್ದಾರೆ. 1ನೇ ತರಗತಿಯ ಕನ್ನಡ ಗಣಿತ ಪರಿಸರ ವಿಜ್ಞಾನ. 2ನೇ ತರಗತಿಯ ಗಣಿತ ಪರಿಸರ ವಿಜ್ಞಾನ. 3ನೇ ತರಗತಿಯ ಕನ್ನಡ ಇಂಗ್ಲಿಷ್ ಗಣಿತ ಪರಿಸರ ವಿಜ್ಞಾನ. 4ನೇ ತರಗತಿಯ ಕನ್ನಡ. 5ನೇ ತರಗತಿಯ ಕನ್ನಡ ಗಣಿತ. 6ನೇ ತರಗತಿಯ ಕನ್ನಡ ಗಣಿತ ಸಮಾಜ ವಿಜ್ಞಾನ. 7ನೇ ತರಗತಿಯ ಕನ್ನಡ ಇಂಗ್ಲಿಷ್ ಹಿಂದಿ ಗಣಿತ ಸಮಾಜ ವಿಜ್ಞಾನ ದೈಹಿಕ ಶಿಕ್ಷಣ ವಿಜ್ಞಾನ. 8ನೇ ತರಗತಿಯ ಇಂಗ್ಲಿಷ್ ಸಮಾಜ ವಿಜ್ಞಾನ ವಿಜ್ಞಾನ ದೈಹಿಕ ಶಿಕ್ಷಣ. 9ನೇ ತರಗತಿಯ ಸಮಾಜ ವಿಜ್ಞಾನ ದೈಹಿಕ ಶಿಕ್ಷಣ. 10ನೇ ತರಗತಿಯ ಹಿಂದಿ ಗಣಿತ ಸಮಾಜ ವಿಜ್ಞಾನ ವಿಜ್ಞಾನ ದೈಹಿಕ ಶಿಕ್ಷಣ ಪುಸ್ತಕಗಳು ಬಂದಿಲ್ಲ. ತಾಲ್ಲೂಕಿನ ವ್ಯಾಪ್ತಿಯಲ್ಲಿ ಪ್ರಾಥಮಿಕ ಶಾಲೆಯಲ್ಲಿ 37 ಸಹ ಶಿಕ್ಷಕರು ಹಾಗೂ ಪ್ರೌಢಶಾಲಾ ವಿಭಾಗದಲ್ಲಿ 32 ಸಹ ಶಿಕ್ಷಕ ಹುದ್ದೆ ಖಾಲಿಯಿದ್ದು ಅತಿಥಿ ಶಿಕ್ಷಕರ ನೇಮಕಕ್ಕೆ ಪ್ರಸ್ತಾವನೆ ಸಲ್ಲಿಸಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಸಮವಸ್ತ್ರ ಪೂರೈಕೆಯಾಗಿಲ್ಲ. ಈಗಾಗಲೇ ಪ್ರೌಢಶಾಲೆಯ ಮುಖ್ಯ ಶಿಕ್ಷಕರ ಸಭೆಯನ್ನು ಕರೆದು ಬಿಸಿಯೂಟದ ಸಿದ್ಧತೆ ಆಹಾರ ಸಾಮಗ್ರಿಗಳ ದಾಸ್ತಾನು ಇಟ್ಟುಕೊಳ್ಳುವಂತೆ ಹಾಗೂ ಶಾಲೆಯ ಕೊಠಡಿ ಆವರಣದ ಸ್ವಚ್ಛಗೊಳಿಸಲು ಸೂಚಿಸಲಾಗಿದೆ. ಶೀಘ್ರದಲ್ಲೇ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರ ಸಭೆ ಕರೆದು ಶಾಲಾ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗುವುದು. ಮೇ 29ರಂದು ಶಾಲೆಗಳನ್ನು ತಳಿರುತೋರಣಗಳಿಂದ ಶೃಂಗರಿಸಿ ಮಕ್ಕಳಿಗೆ ಸಿಹಿ ಹಂಚಿ ಶಾಲೆಗೆ ಸ್ವಾಗತಿಸಲಾಗುವುದು ಎಂದು ಕ್ಷೇತ್ರಶಿಕ್ಷಣಾಧಿಕಾರಿ ರಮೇಶ್ ನಾಯ್ಕ ಮಾಹಿತಿ ನೀಡಿದರು.
ಶುಕ್ರವಾರದಿಂದ ಪುಸ್ತಕ ವಿತರಣೆ
ಕೊಪ್ಪ ತಾಲ್ಲೂಕಿನ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ ಶುಕ್ರವಾರದಿಂದ ನಡೆಯುತ್ತಿದೆ. ಸರ್ಕಾರಿ ಅನುದಾನಿತ ಶಾಲೆಗಳಿಗೆ ಶೇ 54ರಷ್ಟು ಖಾಸಗಿ ಶಾಲೆಗಳಿಗೆ ಶೇ 56ರಷ್ಟು ಪಠ್ಯ ಪುಸ್ತಕ ತಲುಪಿವೆ. ತಾಲ್ಲೂಕಿನ ಎಲ್ಲಾ ಶಾಲೆಗಳಿಗೆ ಮೇ 29ರೊಳಗೆ ಪಠ್ಯ ಪುಸ್ತಕ ಪೂರ್ಣ ಪ್ರಮಾಣದಲ್ಲಿ ತಲುಪಿವೆ. ಸಮವಸ್ತ್ರ ಇನ್ನೂ ಬಂದಿಲ್ಲ. ಶಾಲೆ ಆರಂಭಕ್ಕೂ ಮುನ್ನ ಸಮವಸ್ತ್ರ ತಾಲ್ಲೂಕು ಕೇಂದ್ರಕ್ಕೆ ತಲಪುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಶಾಲೆ ಆರಂಭಕ್ಕೆ ತಯಾರಿ
ಮೇ 29ರಂದು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಆರಂಭಗೊಳ್ಳಲಿದ್ದು ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ತಯಾರಾಗಿದ್ದಾರೆ. ಶೃಂಗೇರಿ ತಾಲ್ಲೂಕಿನಲ್ಲಿ 52 ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿದ್ದು ಶಾಲಾ ಕಟ್ಟಡಗಳು ಸುಸ್ಥಿತಿಯಲ್ಲಿದೆ. ಸಮವಸ್ತ್ರ ಮತ್ತು ಪಠ್ಯ ಪುಸ್ತಕ ಇನ್ನೂ ಬಂದಿಲ್ಲ. ‘ಶಾಲೆಯ ಆರಂಭಕ್ಕೂ ಮೊದಲು ಪೋಷಕರಿಗೆ ಮಕ್ಕಳನ್ನು ಮೊದಲನೇ ದಿನ ಕಳುಹಿಸಲು ಮಾಹಿತಿ ನೀಡುತ್ತೇವೆ. ಶಾಲೆಗೆ ಮಕ್ಕಳು ಬಂದ ನಂತರ 15 ದಿನ ಸೇತು ಬಂಧ ಕಾರ್ಯಕ್ರಮ ನಡೆಸುತ್ತೇವೆ. ಉಪ ನಿರ್ದೇಶಕರ ಸಭೆಯ ನಂತರ ಶಾಲಾ ಆರಂಭಕ್ಕೂ ಮೊದಲು ಮುಖ್ಯ ಶಿಕ್ಷಕರ ಸಭೆ ಕರೆಯುತ್ತೇವೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ವರಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.
ಶೇ 70ರಷ್ಟು ಪುಸ್ತಕ ಲಭ್ಯ
ತರೀಕೆರೆ ತಾಲ್ಲೂಕಿಗೆ ಶೇ 70ರಷ್ಟು ಪಠ್ಯ ಪುಸ್ತಕಗಳು ಸರಬರಾಜಾಗಿದ್ದು ಇನ್ನುಳಿದ ಪುಸ್ತಕಗಳು ಶಾಲಾ ಪ್ರಾರಂಭಕ್ಕೂ ಮುನ್ನ ಬರುವ ನಿರೀಕ್ಷೆ ಇದೆ. ಬಹುತೇಕ ಶಿಕ್ಷಕರು ಜಾತಿ ಗಣತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಇದು ಮುಗಿದ ನಂತರ ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಸಿಆರ್‌ಪಿಗಳ ಹೋಬಳಿವಾರು ಸಭೆಗಳನ್ನು ನಡೆಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪರುಶುರಾಮಪ್ಪ ಎಚ್.ಎ. ತಿಳಿಸಿದ್ದಾರೆ. ಸಮವಸ್ತ್ರ ಇನ್ನೂ ಬಂದಿಲ್ಲ. ಶಾಲೆ ಆರಂಭವಾಗುವಷ್ಟರಲ್ಲಿ ಬರುವ ನಿರೀಕ್ಷೆ ಇದೆ ಎಂದರು.
ಪ್ರಥಮ ಹಂತದ ಪುಸ್ತಕ ಪೂರೈಕೆ
ಮೂಡಿಗೆರೆ ತಾಲ್ಲೂಕಿನಲ್ಲಿ ಇದೇ 29ರಂದು ಎಲ್ಲಾ ಶಾಲೆಗಳು ಪುನರಾರಂಭಗೊಳ್ಳಲಿದ್ದು ಸಿದ್ದತೆಗಳು ಭರದಿಂದ ಸಾಗಿವೆ. ಶಾಲೆಗಳಿಗೆ ಪ್ರಾರಂಭದಲ್ಲಿಯೇ ಸರ್ಕಾರಿ ಪಠ್ಯ ಪುಸ್ತಕಗಳನ್ನು ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು ಸಮವಸ್ತ್ರ ಇನ್ನಷ್ಟೇ ಪೂರೈಕೆಯಾಗಬೇಕಿದೆ. ತಾಲ್ಲೂಕಿಗೆ ಪಠ್ಯ ಪುಸ್ತಕ ಮೊದಲ ಹಂತದಲ್ಲಿ ಪೂರೈಕೆಯಾಗಿದ್ದು ಇನ್ನೊಂದು ಹಂತದ ಬರಬೇಕಿದೆ. ಬಂದಿರುವ ಪುಸ್ತಗಳನ್ನು ಖಾಸಗಿ ಶಾಲೆಗಳಿಗೆ ವಿತರಣೆ ಮಾಡಲಾಗಿದೆ. 29ರಿಂದ ಶಾಲೆಗಳು ಪ್ರಾರಂಭವಾಗಲಿದ್ದು ಅದಕ್ಕಾಗಿ 28ರಂದು ಸರ್ಕಾರಿ ಶಾಲೆಗಳಲ್ಲಿ ಪೂರ್ವ ಸಿದ್ಧತೆ ನಡೆಯಲಿದೆ. ಸಮವಸ್ತ್ರ ಬಂದ ನಂತರ ವಿತರಣೆ ಮಾಡಲಾಗುವುದು. ಹೊಸ ಶೈಕ್ಷಣಿಕ ವರ್ಷದ ಪ್ರಾರಂಭಕ್ಕೆ ಯಾವುದೇ ಗೊಂದಲವಿಲ್ಲದೇ ಸಿದ್ಧತೆಗಳು ಪೂರ್ಣವಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೀನಾಕ್ಷಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಪೂರಕ ಮಾಹಿತಿ: ಕೆ.ವಿ.ನಾಗರಾಜ್, ರವಿಕುಮಾರ್ ಶೆಟ್ಟಿಹಡ್ಲು, ನಾಗರಾಜ್, ಕೆ.ಎನ್.ರಾಘವೇಂದ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.