ಚಿಕ್ಕಮಗಳೂರು: ಭೂಮಿ ಮತ್ತು ವಸತಿಯ ಹಕ್ಕುಪತ್ರ ನೀಡಿ ಕಡುಬಡವರು, ದಲಿತರಿಗೆ ಸರ್ಕಾರಿ ಸವಲತ್ತು ಒದಗಿಸಿಕೊಡಬೇಕು ಎಂದು ದಸಂಸ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಬಾಲಕೃಷ್ಣ ಬಿಳೇಕಲ್ಲು, ‘ಕಳಸ ತಾಲ್ಲೂಕಿನ ತನೂಡಿ ಗ್ರಾಮದ 170 ಕುಟುಂಬಗಳು ನೂರು ವರ್ಷಗಳಿಗೂ ಹೆಚ್ಚು ಕಾಲದಿಂದ ವಾಸಿಸುತ್ತಿವೆ. ಕಾಫಿ, ಮೆಣಸು, ಬಾಳೆ, ತೆಂಗು, ಸಿಲ್ವರ್ ಬೆಳೆಗಳನ್ನು ಸಾಗುವಳಿ ಮಾಡಿಕೊಂಡು ಸ್ವಾಧೀನದಲ್ಲಿದ್ದಾರೆ’ ಎಂದರು.
ಜಿಲ್ಲೆಯ ಬಹುತೇಕ ದಲಿತರಿಗೆ ಅಕ್ರಮ-ಸಕ್ರಮದಡಿ ಭೂ ಮಂಜೂರು ಮಾಡದೇ ದಲಿತ ಕುಟುಂಬಗಳು ಭೂಮಿ ವಂಚಿತರಾಗಿದ್ದಾರೆ. ಭೂಮಿಯನ್ನೇ ನಂಬಿಕೊಂಡು ಬದುಕುತ್ತಿರುವ ಕುಟುಂಬಗಳಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು.
ಅಧಿಕಾರಿಗಳಿಗೆ ಹಲವಾರು ಬಾರಿ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಸಬೂಬು ನೀಡಿ ಕಾಲಹರಣ ಮಾಡುತ್ತಿದ್ದಾರೆ. ದಲಿತರೊಂದಿಗೆ ಅರ್ಜಿ ಹಾಕಿರುವ ಇತರೆ ಸಮುದಾಯದವರಿಗೆ ಭೂಮಿ ಮಂಜೂರು ಮಾಡಲಾಗಿದೆ. ದಲಿತರಿಗೆ ಮಾತ್ರ ಭೂಮಿ ಮಂಜೂರು ಮಾಡದೆ ತಡೆ ಹಿಡಿಯಲಾಗಿದೆ ಎಂದರು.
ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಯೋಗೀಶ್, ಸತೀಶ್, ತಾಲ್ಲೂಕು ಸಂಚಾಲಕ ವಸಂತ್, ಮುಖಂಡರಾದ ಶ್ರೀನಿವಾಸ್, ರಾಜೇಶ್, ರಘು, ಸೀನಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.