ADVERTISEMENT

ಬಸ್ ಸೌಲಭ್ಯ ಇಲ್ಲದೆ ಶಾಲಾ ಮಕ್ಕಳ ಪರದಾಟ

ಕೂವೆ, ನಿಡುವಾಳೆ ಭಾಗದ ಗ್ರಾಮೀಣ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 4:47 IST
Last Updated 15 ಜೂನ್ 2022, 4:47 IST
ಕೊಟ್ಟಿಗೆಹಾರ ವೃತ್ತದಲ್ಲಿ ನಿಡುವಾಳೆ ಕಡೆಗೆ ಸಾಗಲು ಬಸ್‌ಗಾಗಿ ಕಾಯುತ್ತಿರುವ ಕೊಟ್ಟಿಗೆಹಾರ ಸರ್ಕಾರಿ ಶಾಲೆಯ ಮಕ್ಕಳು
ಕೊಟ್ಟಿಗೆಹಾರ ವೃತ್ತದಲ್ಲಿ ನಿಡುವಾಳೆ ಕಡೆಗೆ ಸಾಗಲು ಬಸ್‌ಗಾಗಿ ಕಾಯುತ್ತಿರುವ ಕೊಟ್ಟಿಗೆಹಾರ ಸರ್ಕಾರಿ ಶಾಲೆಯ ಮಕ್ಕಳು   

ಕೊಟ್ಟಿಗೆಹಾರ: ಕೂವೆ, ನಿಡುವಾಳೆ ಭಾಗದಿಂದ ಕೊಟ್ಟಿಗೆಹಾರದ ಸರ್ಕಾರಿ ಶಾಲೆಗಳಿಗೆ ಪ್ರವೇಶ ಪಡೆದು ಶಾಲೆಗೆ ಬರುತ್ತಿರುವ ಮಕ್ಕಳಿಗೆ ಸಂಜೆ ಸಮಯಕ್ಕೆ ಸರಿಯಾಗಿ ಬಸ್ ಇಲ್ಲದೇ ಕೊಟ್ಟಿಗೆಹಾರದಲ್ಲಿ ಗಂಟೆಗಟ್ಟಲೆ ಕಾಯುತ್ತಾ ನಿಲ್ಲುವ ಪರಿಸ್ಥಿತಿ ಇದೆ.

ಕೋವಿಡ್‍ಗಿಂತ ಮೊದಲು ಬಾಳೆಹೊನ್ನೂರು ಮಾರ್ಗಕ್ಕೆ ಹಲವು ಖಾಸಗಿ ಬಸ್‍ಗಳ ಸಂಚಾರ ಇತ್ತು. ಕೋವಿಡ್‌ ನಂತರ ಕೆಲವು ಬಸ್‍ಗಳು ಸೇವೆ ಸ್ಥಗಿತಗೊಳಿಸಿವೆ. ಸಂಜೆ ಶಾಲೆ ಬಿಡುವ ಸಮಯದಲ್ಲಿ ಬಸ್‌ಗಳು ಇಲ್ಲ. ಹೀಗಾಗಿ ಮಕ್ಕಳು ಸಂಜೆ 6 ಗಂಟೆಯಾದರೂ ಮನೆಗೆ ತಲುಪಲು ಕಷ್ಟಸಾಧ್ಯವಾಗಿದೆ. ನಿಡುವಾಳೆ ಸಮೀಪದ ಬಿಲ್ಲೋಟ ಮತ್ತಿತರ ಕಡೆಯಿಂದ 4 ಕಿ.ಮೀ ನಡೆದುಕೊಂಡು ಸಾಗಿ ಮನೆ ಸೇರಬೇಕಾದ ಪರಿಸ್ಥಿತಿ ಇದೆ. ಖಾಸಗಿ ವಾಹನಗಳು ದುಪ್ಪಟ್ಟು ಹಣ ಪಡೆಯುವುದರಿಂದ ಮಕ್ಕಳು ನಿತ್ಯ ಖಾಸಗಿ ವಾಹನದಲ್ಲಿ ಹಣ ಕೊಟ್ಟು ಹೋಗಲು ಕಷ್ಟವಾಗಿದೆ. ನಿಡುವಾಳೆ ಸುತ್ತಮುತ್ತಲ ಭಾಗದಿಂದ 30ಕ್ಕೂ ಹೆಚ್ಚು ಮಕ್ಕಳು ಕೊಟ್ಟಿಗೆಹಾರ ಸರ್ಕಾರಿ ಶಾಲೆಗೆ ಬರುತ್ತಾರೆ. ಬೆಳಿಗ್ಗೆ ಖಾಸಗಿ ಹಾಗೂ ಸರ್ಕಾರಿ ಬಸ್‍ಗಳು ಸಕಾಲಕ್ಕೆ ದೊರೆತರೂ ಸಂಜೆ ಮಾತ್ರ ಮಕ್ಕಳು ಮನೆ ಸೇರಲು ಪರದಾಡುವಂತಾಗಿದೆ.

ಕೆಲವು ಸಮಯದ ಹಿಂದೆ ಮಕ್ಕಳ ಅನುಕೂಲಕ್ಕಾಗಿ ಖಾಸಗಿ ಬಸ್ ಮಾಲಿಕರಲ್ಲಿ ಮನವಿ ಮಾಡಿ ಬಸ್ ಬಿಡಲಾಗಿತ್ತು. ನಂತರ ಬಸ್ ಸಂಚಾರ ನಿಂತಿದೆ ಎಂದು ಯುವ ಮುಖಂಡ ಡಿ.ಎಸ್. ಸಂಜಯ್ ಹೇಳಿದರು.

ADVERTISEMENT

‘ಬಾಳೆಹೊನ್ನೂರು ಮಾರ್ಗವಾಗಿ ಬೆಳಿಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಬಿಟ್ಟರೆ ಮಕ್ಕಳಿಗೆ ಮಾತ್ರವಲ್ಲದೇ ಶಿಕ್ಷಕರಿಗೆ, ಬ್ಯಾಂಕ್ ನೌಕರರಿಗೆ, ಕೂಲಿ ಕಾರ್ಮಿಕರಿಗೂ ಅನುಕೂಲವಾಗುತ್ತದೆ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.