
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳು ತಮ್ಮ ರೋಗದ ಸುಸ್ತಿಗಿಂತ ಚಿಕಿತ್ಸೆ ಪಡೆಯಲು ಅಲೆದಾಡುವ ಸುಸ್ತೆ ಹೆಚ್ಚು.
ಸರ್ಕಾರಿ ಆಸ್ಪತ್ರೆಗಳಿದ್ದರೂ ಖಾಸಗಿ ಆಸ್ಪತ್ರೆಗಳನ್ನೇ ಹೆಚ್ಚು ಅವಲಂಬಿಸಿದ್ದಾರೆ. ಇನ್ನು ಜಿಲ್ಲಾ ಕೇಂದ್ರದಲ್ಲಿ ಮಾತ್ರ ಪ್ರತ್ಯೇಕ ಹೆರಿಗೆ ಆಸ್ಪತ್ರೆ ಇರುವುದರಿಂದ ಸರ್ಕಾರಿ ಆಸ್ಪತ್ರೆಯನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ.
ಜಿಲ್ಲಾ ಕೇಂದ್ರದಲ್ಲಿರುವ ಅರಳುಗುಪ್ಪೆ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ನಿತ್ಯ ಸಾವಿರಾರು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊರರೋಗಿ ವಿಭಾಗದಲ್ಲಿ ಚೀಟಿ ಪಡೆಯುವುದೇ ದೊಡ್ಡ ಸವಾಲಿನ ಕೆಲಸ. ಅದರಲ್ಲೂ ಸೋಮವಾರ ದಿನ ರೋಗಿಗಳಿಗೆ ಸಾಲಿನಲ್ಲಿ ನಿಲ್ಲುವುದೇ ದೊಡ್ಡ ಕೆಲಸ.
ಸಾಲಿನಲ್ಲಿ ನಿಂತು ಚೀಟಿ ಪಡೆದು ವೈದ್ಯರ ಬಳಿ ತೆರಳಿದರೆ ಅಲ್ಲಿಯೂ ಸಾಲು. ಅಲ್ಲಿಂದ ರಕ್ತ ಪರೀಕ್ಷೆ, ಸ್ಕ್ಯಾನಿಂಗ್, ಇಸಿಜಿಗೆ ಬೇರೆ ಬೇರೆ ಕಟ್ಟಡಗಳಿಗೆ ಅಲೆದಾಡಬೇಕು. ಈಗ ಹೊರ ರೋಗಿ ವಿಭಾಗಕ್ಕೆ ಪ್ರತ್ಯೇಕವಾಗಿ ಹೊಸ ಕಟ್ಟಡ ತೆರೆದಿರುವುದರಿಂದ ಕೊಂಚ ಸಮಸ್ಯೆ ಸುಧಾರಿಸಿದೆ.
ಇನ್ನು ಒಳರೋಗಿ ವಿಭಾಗ, ದಂತ ವಿಭಾಗ ಸೇರಿ ಬಹುತೇಕ ಚಿಕಿತ್ಸೆ ಹಳೇ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿದ್ದು, ಸ್ವಚ್ಛತೆಯದ್ದೇ ದೊಡ್ಡ ಸಮಸ್ಯೆ. ಒಳರೋಗಿ ವಿಭಾಗಕ್ಕೆ ಹೋಗುವುವರು ಮೂಗು ಮುಚ್ಚಿಕೊಂಡು ಹೋಗಬೇಕಿರುವುದು ಅನಿವಾರ್ಯ.
‘ಗಾಳಿ ಇಲ್ಲ, ಬೆಳಕಿಲ್ಲ, ಕೆಟ್ಟ ವಾಸನೆ ನಡುವೆ ಒಳ ಹೋದರೆ ಹಾಸಿಗೆ ಮೇಲಿನ ರೋಗಿಗಳು ಮಲಗಲು ಭಯಪಡಬೇಕಾದ ಸ್ಥಿತಿ ಇದೆ. ಬೆಡ್‌ಶೀಟ್ ಆಗಾಗ ಬದಲಾಗುವುದಿಲ್ಲ, ಶೌಚಾಲಯಗಳಲ್ಲಿ ನೀರಿನ ಸೌಕರ್ಯ ಇಲ್ಲ. ಡ್ರಮ್‌ಗಳಲ್ಲಿ ನೀರು ತೋಡಿಕೊಂಡು ಹೋಗಬೇಕಾದ ಸ್ಥಿತಿ ಹಲವೆಡೆ ಇದೆ. ಖಾಸಗಿ ಆಸ್ಪತ್ರೆಗೆ ಹೋದರೆ ದುಬಾರಿ ಹಣ ಪಾವತಿಸಬೇಕಾಗುತ್ತದೆ. ಆದ್ದರಿಂದ ವಿಧಿ ಇಲ್ಲದೆ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದೇವೆ’ ಎನ್ನುತ್ತಾರೆ ರೋಗಿಗಳು.
ಗ್ರಾಮೀಣ ಪ್ರದೇಶದಲ್ಲಿ ಮಲೆನಾಡಿನ ತಾಲ್ಲೂಕು ಆಸ್ಪತ್ರೆಗಳಲ್ಲಿ ಹೆಚ್ಚಿನ ಕೊರತೆ ಇದೆ. ವೈದ್ಯರ ಕೊರತೆ, ಸಿಬ್ಬಂದಿ ಮತ್ತು ಸೌಲಭ್ಯಗಳಿಲ್ಲದೆ ಖಾಸಗಿ ಆಸ್ಪತ್ರೆ ಅಥವಾ ಹೊರ ಜಿಲ್ಲೆಗಳಿಗೆ ತೆರಳಬೇಕಾದ ಅನಿವಾರ್ಯತೆ ಇದೆ.
ಕಡೂರು ಮತ್ತು ತರೀಕೆರೆ ತಾಲ್ಲೂಕಿನಲ್ಲಿ ಹೆಚ್ಚಿನದಾಗಿ ಖಾಸಗಿ ಆಸ್ಪತ್ರೆಗಳನ್ನೇ ಜನ ಅವಲಂಬಿಸಿದ್ದಾರೆ. ಕೊಪ್ಪ, ಶೃಂಗೇರಿ, ಎನ್.ಆರ್.ಪುರ ಭಾಗದ ಜನ ಬಹುತೇಕ ನೆರೆ ಜಿಲ್ಲೆಯತ್ತ ಮುಖ ಮಾಡುತ್ತಾರೆ. ತರೀಕೆರೆ ಮತ್ತು ಎಂ.ಸಿ.ಹಳ್ಳಿ ಭಾಗದ ಜನ ಶಿವಮೊಗ್ಗ ಆಸ್ಪತ್ರೆಗಳನ್ನು ಅವಲಂಬಿಸುತ್ತಾರೆ.
ಪೂರಕ ಮಾಹಿತಿ: ಕೆ.ವಿ.ನಾಗರಾಜ್, ಕೆ.ನಾಗರಾಜ್, ರವಿ ಕೆಳಂಗಡಿ, ರವಿಕುಮಾರ್ ಶೆಟ್ಟಿಹಡ್ಲು, ಕೆ.ಎನ್.ರಾಘವೇಂದ್ರ.
ಅಪಘಾತವಾದರೆ ಹೊರ ಜಿಲ್ಲೆಗಳೇ ಗತಿ!
ಮೂಡಿಗೆರೆ: ಪಟ್ಟಣದ ಮಹಾತ್ಮಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆ ಇತ್ತೀಚಿನ ದಿನಗಳಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸುತ್ತಿದೆ. ಆದರೂ ಅಪಘಾತ ರೀತಿಯ ತುರ್ತು ಸಂದರ್ಭಗಳಲ್ಲಿ ಮಂಗಳೂರು ಹಾಸನ ಬೆಂಗಳೂರು ಜಿಲ್ಲೆಗಳನ್ನು ಆಶ್ರಯಿಸಬೇಕಾದ ಅನಿವಾರ್ಯ ಸ್ಥಿತಿ ಇದೆ. ಆಸ್ಪತ್ರೆಯಲ್ಲಿ ಎಕ್ಸರೇ ವಿಭಾಗವಿದ್ದರೂ ರಾತ್ರಿ ವೇಳೆ ಕಾರ್ಯನಿರ್ವಹಿಸುವುದಿಲ್ಲ. ಸಂಜೆ ನಂತರ ಸಂಭವಿಸುವ ಅಪಘಾತ ಪ್ರಕರಣಗಳಿಗೆ ಜಿಲ್ಲಾ ಕೇಂದ್ರ ಅಥವಾ ಮಂಗಳೂರು ಹಾಸನಕ್ಕೆ ಕಳುಹಿಸಲಾಗುತ್ತಿದೆ. ಹೃದಯ ರೋಗಕ್ಕೆ ಸಂಬಂಧಿಸಿದಂತೆ ದಿನದ 24 ಗಂಟೆಯೂ ಇಸಿಜಿ ವ್ಯವಸ್ಥೆಯಿದ್ದು ಹೆಚ್ಚಿನ ಪರೀಕ್ಷೆಗಳನ್ನು ಹೊರಗಡೆ ಖಾಸಗಿ ಲ್ಯಾಬ್‌ಗಳಲ್ಲಿ ಮಾಡಿಸಬೇಕಿದೆ. ಈ ಆಸ್ಪತ್ರೆಯಲ್ಲಿ ರಕ್ತನಿಧಿ ಕೇಂದ್ರ ಸ್ಥಾಪಿಸಬೇಕು ಎಂಬುದು ಹಲವು ದಶಕಗಳ ಒತ್ತಾಯ. ಈವರೆಗೂ ರಕ್ತನಿಧಿ ಅಲ್ಲದೇ ರಕ್ತದ ಅವಶ್ಯಕತೆ ಉಂಟಾದರೆ ಜಿಲ್ಲಾ ಕೇಂದ್ರವನ್ನೇ ಆಶ್ರಯಿಸುವಂತಾಗಿದೆ. ಆಸ್ಪತ್ರೆಯಲ್ಲಿ ಬಹುತೇಕ ಎಲ್ಲಾ ವೈದ್ಯರ ಸೇವೆ ಲಭ್ಯವಿದ್ದು ಡಯಾಲಿಸಿಸ್ ವಿಭಾಗದಲ್ಲಿ ನಾಲ್ಕು ಯಂತ್ರಗಳು ನಿತ್ಯವೂ ಕಾರ್ಯನಿರ್ವಹಿಸುತ್ತಿವೆ. ಸುಮಾರು 28 ಮಂದಿ ಮಧುಮೇಹಿ ರೋಗಿಗಳು ಸುಲಭವಾಗಿ ತಾಲ್ಲೂಕು ಆಸ್ಪತ್ರೆಯಲ್ಲಿಯೇ ಡಯಾಲಿಸಿಸ್ ಸೌಲಭ್ಯ ಪಡೆಯುತ್ತಿದ್ದಾರೆ. ಈ ವಿಭಾಗದಲ್ಲಿ ಉತ್ತಮ ಸೇವೆ ಲಭ್ಯವಾಗುತ್ತಿದೆ. ಆಸ್ಪತ್ರೆಯಲ್ಲಿ ಫಿಜಿಶಿಯನ್ ಮಕ್ಕಳ ವೈದ್ಯರ ಸೇವೆಗಾಗಿ ಅಕ್ಕಪಕ್ಕದ ತಾಲ್ಲೂಕುಗಳಿಂದಲೂ ಈ ಆಸ್ಪತ್ರೆಗೆ ಬರುತ್ತಿದ್ದಾರೆ. ಆ ವಿಭಾಗಗಳಲ್ಲಿ ಉತ್ತಮ ಸೇವೆ ಲಭ್ಯವಾಗುತ್ತಿದ್ದು ಸುಸಜ್ಜಿತ ರಕ್ತನಿಧಿ ಕೇಂದ್ರ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಪ್ರಯೋಗಾಲಯ ಹೃದಯ ಸಂಬಂಧಿ ಸಮಸ್ಯೆಗಳನ್ನು ಪತ್ತೆ ಹಚ್ಚುವ ಉನ್ನತ ಪರೀಕ್ಷೆಗಳು ಲಭ್ಯವಾದರೆ ಆಸ್ಪತ್ರೆಯು ಇನ್ನಷ್ಟು ಜನಪರವಾಗುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯ.
ತರೀಕೆರೆಯಲ್ಲಿ ಸುಸಜ್ಜಿತ ಆಸ್ಪತ್ರೆ
ತರೀಕೆರೆ: ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆ ಸುಸಜ್ಜಿತವಾಗಿದ್ದು ಪ್ರತಿನಿತ್ಯ ನೂರಾರು ರೋಗಿಗಳು ಉತ್ತಮ ಚಿಕಿತ್ಸೆ ಪಡೆಯುತ್ತಿದ್ದಾರೆ. ಲ್ಯಾಬ್ ಮತ್ತು ಆಪರೇಷನ್ ವಿಭಾಗದಲ್ಲಿ ಆಧುನಿಕ ಯಂತ್ರೋಪಕರಣಗಳನ್ನು ಸರ್ಕಾರ ಒದಗಿಸಿದೆ. ಇದರಿಂದ ಪ್ರತಿನಿತ್ಯ ರೋಗಿಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಹೆರಿಗೆ ಮತ್ತು ಸ್ತ್ರೀರೋಗ ತಜ್ಞರು ಫಿಜೀಷಿಯನ್ ಕೀಲೂ ಮತ್ತು ಮೂಳೆ ತಜ್ಞರು ಕಿವಿ ಮೂಗು ಮತ್ತು ಗಂಟಲು ತಜ್ಞರು ಮಕ್ಕಳ ತಜ್ಞರು ಅರಿವಳಿಕೆ ತಜ್ಞರು ಆಯುಷ್ ವೈದ್ಯರು ಎನ್.ಸಿ.ಡಿ. ವೈದ್ಯರು ನೇತ್ರ ತಜ್ಞರು ಇದ್ದಾರೆ. ಸುಸಜ್ಜಿತವಾದ ಹೆರಿಗೆ ವಾರ್ಡ್ ಪುರುಷ ಮತ್ತು ಮಹಿಳಾ ವಾರ್ಡ್‍ಗಳಿವೆ. ಕೆಲವೊಮ್ಮೆ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಮಟ್ಟದ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡುತ್ತಿದ್ದಾರೆ.
ವೈದ್ಯರು ಸಿಬ್ಬಂದಿ ಕೊರತೆ
ನರಸಿಂಹರಾಜಪುರ: ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಮಂಜೂರಾಗಿರುವ ಬಹುತೇಕ ತಜ್ಞ ವೈದ್ಯರ ಹುದ್ದೆಗಳು ಈಗ ಭರ್ತಿಯಾಗಿವೆ. ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಎಲ್ಲಾ ಹುದ್ದೆಗಳು ಸೇರಿ ಒಟ್ಟು 98 ಹುದ್ದೆಗಳು ಮಂಜೂರಾಗಿದ್ದು ಇದರಲ್ಲಿ 35 ಹುದ್ದೆಗಳು ಭರ್ತಿಯಾಗಿವೆ. 63 ಹುದ್ದೆಗಳು ಖಾಲಿ ಇವೆ. ಅರಿವಳಿಕೆ ತಜ್ಞ ನೇತ್ರತಜ್ಞ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ಪಿಜಿಷಿಯನ್ ಕೀಲು ಮತ್ತು ಮೂಳೆ ತಜ್ಞ ಕಿವಿ ಮೂಗು ಗಂಡಲು ತಜ್ಞ ಶಸ್ತ್ರ ಚಿಕಿತ್ಸಕ ಮಕ್ಕಳ ತಜ್ಞ ಹುದ್ದೆಗಳು ಭರ್ತಿಯಾಗಿವೆ. ರೇಡಿಯಾಲಜಿಸ್ಟ್ ಚರ್ಮರೋಗ ತಜ್ಞ 1 ಹಾಗೂ ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳ 4 ಹುದ್ದೆ ಖಾಲಿ ಇವೆ. ಇವುಗಳನ್ನು ಪಾಳಿ ವೈದ್ಯರೇ ನಿರ್ವಹಿಸುತ್ತಿದ್ದಾರೆ. ಶುಶ್ರೂಷಣಾಧಿಕಾರಿ 20 ಹುದ್ದೆಗಳಲ್ಲಿ 14 ಹುದ್ದೆಗಳು ಭರ್ತಿಯಾಗಿದ್ದು 6 ಹುದ್ದೆಗಳು ಖಾಲಿಯಿದೆ. ಖಾಲಿ ಇರುವ ಬಹುತೇಕ ಹುದ್ದೆಗಳು ಹೊರಗುತ್ತಿಗೆಯ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿತ್ಯ ಸರಾಸರಿ 300ಕ್ಕೂ ಹೆಚ್ಚು ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಒಳರೋಗಿಗಳಾಗಿ 10ರಿಂದ 15 ಜನರು ದಾಖಲಾಗುತ್ತಾರೆ. ಎಲ್ಲಾ ಮಕ್ಕಳು ಪುರುಷರು ಸ್ತ್ರೀಯರಿಗೆ ಪ್ರತ್ಯೇಕ ವಾರ್ಡ್ ಸೌಲಭ್ಯ ಲಭ್ಯವಿದೆ. ಒಳರೋಗಿಗಳಾಗಿ ದಾಖಲಾದ ರೋಗಿಗಳಿಗೆ ಬೆಳಿಗ್ಗೆ ಹಾಲು ಮತ್ತು ಬ್ರೇಡ್ ಮಧ್ಯಾಹ್ನ ಹಾಗೂ ರಾತ್ರಿ ಊಟದ ಸೌಲಭ್ಯವಿದೆ. ಪ್ರಸ್ತುತ ಡಯಾಲೀಸಿಸ್ ಕೇಂದ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಎಷ್ಟೇ ಜನ ಬಂದರು ಉಚಿತವಾಗಿ ಸೇವೆ ನೀಡಲಾಗುತ್ತಿದೆ. ತಿಂಗಳಿಗೆ 11 ಜನರು ಡಯಾಲೀಸಿಸ್ ಸೇವೆ ಪಡೆಯುತ್ತಿದ್ದಾರೆ. ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ತಿಂಗಳಿಗೆ ಸರಾಸರಿ 27 ಹೆರಿಗೆಗಳು ನಡೆಯುತ್ತಿವೆ. ತಾಲ್ಲೂಕಿನ ಬಾಳೆಹೊನ್ನೂರು ಹಾಗೂ ಮುತ್ತಿನಕೊಪ್ಪ ಉಪ ಆರೋಗ್ಯ ಕೇಂದ್ರಗಳಲ್ಲಿ ಕಾಯಂ ವೈದ್ಯರ ಹುದ್ದೆ ಖಾಲಿಯಿದೆ. ಗುತ್ತಿಗೆ ಆಧಾರದಲ್ಲಿ ನೇಮಕವಾದ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಆಸ್ಪತ್ರೆ ಕಟ್ಟಡ ಹಳೆಯದಾಗಿದ್ದು ಕೆಳಭಾಗದ ಕಟ್ಟಡದ ಆರ್‌ಸಿಸಿ ಭಾಗ ಉದುರುತ್ತಿದೆ. ಇದರ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಮಳೆಗಾಲದಲ್ಲಿ ಮೇಲಂತಸ್ತಿನ ಕಟ್ಟಡದಲ್ಲಿ ಸೋರಿಕೆ ಉಂಟಾಗುತ್ತಿದ್ದು ಇದನ್ನು ದುರಸ್ತಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಆಸ್ಪತ್ರೆಯಲ್ಲಿ ಲಭ್ಯವಾಗುವ ಎಲ್ಲಾ ಸೌಲಭ್ಯಗಳನ್ನು ರೋಗಿಗಳಿಗೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಉಚಿತ ಆರೋಗ್ಯ ಸೇವೆ ಮರೀಚಿಕೆ
ಕಳಸ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸೇರಿದಂತೆ ಅನೇಕ ಹುದ್ದೆಗಳು ಖಾಲಿ ಇದ್ದು ತಾಲ್ಲೂಕಿನ ಬಡ ಜನರಿಗೆ ಉಚಿತ ಆರೋಗ್ಯ ಸೇವೆ ಮರೀಚಿಕೆ ಆಗಿದೆ. ಕಳಸಕ್ಕೆ ತಾಲ್ಲೂಕು ಕೇಂದ್ರವಾಗಿ 4 ವರ್ಷ ಕಳೆದಿದೆ. ಆದರೆ ಇಲ್ಲಿನ ಆಸ್ಪತ್ರೆಗೆ ತಾಲ್ಲೂಕು ಆಸ್ಪತ್ರೆಯ ಸ್ಥಾನಮಾನ ದೊರೆತಿಲ್ಲ. ತಾಲ್ಲೂಕಿನಲ್ಲಿ ಸಾವಿರಾರು ತೋಟ ಕಾರ್ಮಿಕರು ಮತ್ತು ಬಡ ವರ್ಗದವರು ಇದ್ದಾರೆ. ಆದರೆ ಅವರ ನಿರೀಕ್ಷೆ ಮತ್ತು ಹಕ್ಕಿನಂತೆ ಉಚಿತ ಆರೋಗ್ಯ ಸೇವೆ ಸಮರ್ಪಕವಾಗಿ ಸಿಗುತ್ತಿಲ್ಲ. ಕಳಸ ತಾಲ್ಲೂಕು ಆಸ್ಪತ್ರೆಗಾಗಿ 10 ಎಕರೆ ಭೂಮಿ ಬೇಕಾಗಿದ್ದು ಜಾಗಕ್ಕಾಗಿ ಹುಡುಕಾಟ ನಡೆದಿದೆ. ಚಿಕ್ಕಮಗಳೂರಿನ ವೈದ್ಯರೊಬ್ಬರು ಈಗಿನ ಕಳಸ ಆಸ್ಪತ್ರೆಗೆ ಆಡಳಿತ ವೈದ್ಯರಾಗಿದ್ದರಿಂದ ಆಡಳಿತದಲ್ಲಿ ನಿರೀಕ್ಷಿತ ಬಿಗಿ ಸಾಧಿಸಲಾಗುತ್ತಿಲ್ಲ. ಇಲ್ಲಿ ಇಬ್ಬರು ತಾತ್ಕಾಲಿಕ ವೈದ್ಯರು ಶುಶ್ರೂಷೆಯ ಜವಾಬ್ದಾರಿ ಹೊತ್ತಿದ್ದಾರೆ. ಅವರಿಂದ ಹೆಚ್ಚಿನ ನಿರೀಕ್ಷೆ ಮಾಡಲಾರದೆ ರೋಗಿಗಳು ಖಾಸಗಿ ವೈದ್ಯರನ್ನೇ ನೆಚ್ಚಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಸ್ತ್ರಚಿಕಿತ್ಸೆ ಕೊಠಡಿ ಇದ್ದರೂ ತಜ್ಞ ವೈದ್ಯರ ಕೊರತೆ ಇದೆ. ಇದರಿಂದ ಬಡ ಗರ್ಭಿಣಿಯರು ಹೆರಿಗೆಗಾಗಿ ಖಾಸಗಿ ಆಸ್ಪತ್ರೆ ಅಥವಾ ಮೂಡಿಗೆರೆ ಕೊಪ್ಪದ ಸರ್ಕಾರಿ ಆಸ್ಪತ್ರೆ ಆಶ್ರಯಿಸಬೇಕಾಗಿದೆ. ಡಿಜಿಟಲ್ ಎಕ್ಸರೇ ಯಂತ್ರಕ್ಕೆ ₹12 ಲಕ್ಷ ಮಂಜೂರಾಗಿದ್ದು ಟೆಂಡರ್ ಕರೆಯಲಾಗಿದೆ. ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಇಲ್ಲದೆ ಇರುವುದರಿಂದ ಎಕ್ಸರೆ ಮತ್ತು ಪ್ರಯೋಗಾಲಯದ ಸೌಲಭ್ಯ ಇದ್ದರೂ ಹೆಚ್ಚಿನ ಉಪಯೋಗ ಆಗುತ್ತಿಲ್ಲ. ಆಸ್ಪತ್ರೆಯಲ್ಲಿ ಇರುವ 108 ಆಂಬುಲೆನ್ಸ್ ಆಗಾಗ ತಾಂತ್ರಿಕ ಕಾರಣಕ್ಕೆ ಕೈಕೊಡುತ್ತಲೇ ಇದೆ. ಇಲ್ಲಿನ ವೈದ್ಯ ಮತ್ತು ಆಸ್ಪತ್ರೆ ಸಿಬ್ಬಂದಿಗೆ ವಾಸದ ಮನೆಗಳ ಕೊರತೆ ಇದೆ. ಇದು ಕೂಡ ಕಳಸಕ್ಕೆ ಸಿಬ್ಬಂದಿ ಬರದೆ ಇರಲು ಕಾರಣವಾಗಿದೆ.
ಮೇಲ್ದರ್ಜೆಗೆ ಏರಬೇಕಿದೆ ಪ್ರಯೋಗಾಲಯ
ಕೊಪ್ಪ: ಪಟ್ಟಣದಲ್ಲಿರುವ ಎಂ.ಎಸ್.ದ್ಯಾವೇಗೌಡ ಸ್ಮಾರಕ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಿಂದ ಸುತ್ತಮುತ್ತಲಿನ ತಾಲ್ಲೂಕಿನ ಜನರಿಗೂ ಅನುಕೂಲವಾಗಿದೆ. ಪ್ರತಿದಿನ 300ರಿಂದ 400 ಜನ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಿಂಗಳಿಗೆ ನೂರಕ್ಕೂ ಅಧಿಕ ಹೆರಿಗೆಗಳನ್ನು ಮಾಡಿಸಲಾಗುತ್ತದೆ. ಸಾರ್ವಜನಿಕರಿಗೆ ಇನ್ನಷ್ಟು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಲು ಆಸ್ಪತ್ರೆಯ ಪ್ರಮುಖ ಬೇಡಿಕೆಗಳಿಗೆ ಆರೋಗ್ಯ ಇಲಾಖೆ ಸರ್ಕಾರ ಸ್ಪಂದಿಸಬೇಕಾಗಿದೆ. ಒಬ್ಬರು ರೇಡಿಯಾಲಜಿಸ್ಟ್ ಅವಶ್ಯಕತೆ ಇದೆ. ಪ್ರಯೋಗಶಾಲೆ ಉನ್ನತ ದರ್ಜೆಗೆ ಏರಿಸಬೇಕಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಅಗ್ನಿ ನಿರೋಧಕ ಉಪಕರಣಗಳು ಹಾಗೂ ಆಕ್ಸಿಜನ್ ಪೈಪ್ ಲಿಪ್ಟ್ ಅಳವಡಿಸಬೇಕಿದೆ. ಡಯಾಲಿಸಿಸ್ ಘಟಕ ಸಾಮರ್ಥ್ಯ ಹೆಚ್ಚಿಸಬೇಕಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಸಿ.ಸಿ.ಟಿವಿ ಅವಶ್ಯಕತೆ ಇದೆ. ಶುಶ್ರೂಷಾಧಿಕಾರಿಗಳು ಗ್ರೂಪ್ –ಡಿ ನೌಕರರ ಅವಶ್ಯಕತೆ ಇದೆ. ಹಾಗೂ ಎಕ್ಸರೇ ತೆಗೆಯುವ ಯಂತ್ರೋಪಕರಣ ಟೇಬಲ್ ಟಾಪ್ ಗಣಕಯಂತ್ರ ಆಲ್ ಇನ್ ಒನ್ ಪ್ರಿಂಟರ್ ಸಿಬಿಸಿ ಅನಲೈಸರ್ ಬಯೋಕೆಮೆಸ್ಟ್ರಿ ಅನಲೈಸರ್ ವಿಡಿಯೊ ಸಹಿತ ಲ್ಯಾಪ್ರೋಸ್ಕೋಪಿಕ್ ಯಂತ್ರ ಎಲೆಕ್ಟ್ರೋಲೈಟ್ ಅನಲೈಸರ್ ಹಾರ್ಮೋನಲ್ ಅಸೇ ಆನ್‌ಲೈನ್ ಯುಪಿಎಸ್-2 ಕೆ.ವಿ ಬ್ಲಡ್ ಸ್ಟೋರೇಜ್ ಯುನಿಟ್ ಬಿಲ್ ರೂಬಿನೋ ಮೀಟರ್ ಯುರಿನ್ ಅನಲೈಸರ್ ಸೈನೋ ಹಿಮೋಗ್ಲೋಬಿನೋಮೀಟರ್ ಈ ಅವಶ್ಯಕತೆಗಳನ್ನು ಪೂರೈಸಿದರೆ ಜನರಿಗೆ ಇನ್ನೂ ಹೆಚ್ಚಿನ ಸೇವೆ ಸಿಗಲಿದೆ.
ತಜ್ಞ ವೈದ್ಯರಿಲ್ಲದ ತಾಲ್ಲೂಕು ಆಸ್ಪತ್ರೆ
ಶೃಂಗೇರಿ: ಸಮುದಾಯ ಆರೋಗ್ಯ ಕೇಂದ್ರವು ತಾಲ್ಲೂಕು ಆಸ್ಪತ್ರೆಯಾಗಿ ಮಂಜುರಾತಿಯಾಗಿದ್ದರೂ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ತಾಲ್ಲೂಕು ವೈದ್ಯಾಧಿಕಾರಿ ಹೊರತುಪಡಿಸಿ ವೈದ್ಯರಿಲ್ಲದೆ ಆಸ್ಪತ್ರೆ ಬಿಕೋ ಎನ್ನುತ್ತಿದೆ. ಆಸ್ಪತ್ರೆಯು ಅಗತ್ಯ ಸೌಲಭ್ಯಗಳಿಲ್ಲದೆ ಖಾಲಿ ಹೊಡೆಯುತ್ತಿದೆ. ಜನರಲ್ ಸರ್ಜನ್ ಮಕ್ಕಳ ತಜ್ಞ ನೇತ್ರ ತಜ್ಞ ಕೀಲು ಮೂಳೆ ತಜ್ಞ ಕಿವಿ–ಮೂಗು–ಗಂಟಲು ತಜ್ಞರು ಚರ್ಮರೋಗ ತಜ್ಞರು ಪ್ರಸೂತಿ ತಜ್ಞರು ರೇಡಿಯೋಲಜಿ ತಜ್ಞರ ಹುದ್ದೆಗಳು ಸುದೀರ್ಘ ಕಾಲದಿಂದ ಖಾಲಿ ಇವೆ. ಅಪಘಾತ ಹೃದಯಘಾತ ಕಿಡ್ನಿ ಸಮಸ್ಯೆ ಮೆದುಳು ಸಮಸ್ಯೆ ಹೊಟ್ಟೆ ನೋವು ಮೂಳೆ ಜೋಡಿಸುವುದು ಸೇರಿ ಮುಂತಾದ ಆಪರೇಷನ್ ಮಾಡಿಸಿಕೊಳ್ಳಲು ರೇಡಿಯೋಲಜಿ ಅಲ್ಟ್ರಾ ಸೌಂಡ್ ಸ್ಕ್ಯಾನ್ ಎಂ.ಆರ್.ಐ ಸೌಲಭ್ಯಗಳಿಗೆ ತಜ್ಞರು ಇಲ್ಲ. ಆದ್ದರಿಂದ ಮಣಿಪಾಲ್ ಮಂಗಳೂರು ಶಿವಮೊಗ್ಗ ಚಿಕ್ಕಮಗಳೂರಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ರಾತ್ರಿ ತುರ್ತಾಗಿ ಆಸ್ಪತ್ರೆಗೆ ಬಂದರೆ ವೈದ್ಯರಿಲ್ಲದೆ ವಾಪಾಸು ಹೋಗಬೇಕಾಗಿದೆ. ಆಸ್ಪತ್ರೆಯಲ್ಲಿ 3 ವರ್ಷಗಳಿಂದ ಹೆರಿಗೆ ನಡೆದಿಲ್ಲ. ಲ್ಯಾಬ್ ಟೆಕ್ನಿಶನ್ ಹುದ್ದೆಗಳು ಖಾಲಿ ಇದೆ. ಒಬ್ಬ ಫಾರ್ಮಸಿಸ್ಟ್ ಬೇಕಿದೆ. ಇಬ್ಬರು ಆಂಬುಲೆನ್ಸ್ ಚಾಲಕರು ಕಾರ್ಯ ನಡೆಸುತ್ತಿದ್ದು ಇನ್ನಿಬ್ಬರು ಬೇಕಿದೆ. 108 ಆಂಬುಲೆನ್ಸ್ ಹದಗಿಟ್ಟಿದೆ. ತಾಲ್ಲೂಕಿನ ಸಾವಿರಾರು ರೋಗಿಗಳು ಚಿಕಿತ್ಸೆ ಅರಿಸಿ ಬರುತ್ತಾರೆ. ಎಲ್ಲಾ ವಿಭಾಗದಲ್ಲಿ ತಜ್ಞ ವೈದ್ಯರು ಇಲ್ಲದಿರುವುದರಿಂದ ಸಾರ್ವಜನಿಕರ ನಿರೀಕ್ಷೆಯಷ್ಟು ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಪ್ರಸ್ತುತ 6 ಜನ ವೈದ್ಯರು ಇದ್ದಾರೆ. ಅವರು ದಿನನಿತ್ಯ ಕುಳಿತು ಕರ್ತವ್ಯ ನಿರ್ವಹಿಸಿದರೆ ರೋಗಿಗಳ ತಪಾಸಣೆ ನಡೆಸಬಹುದು. ‘ಪ್ರಸ್ತುತ ಹೊನ್ನವಳ್ಳಿಯಲ್ಲಿ 100 ಹಾಸಿಗೆ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿದ್ದು ಕಾಮಗಾರಿ ಚಾಲನೆಯಲ್ಲಿದೆ. ಒಂದು ವರ್ಷದಲ್ಲಿ ಆಸ್ಪತ್ರೆ ಪ್ರಾರಂಭಗೊಳ್ಳಲಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಮಹೇಂದ್ರ ಕಿರೀಟಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.