ADVERTISEMENT

ಮಲೆನಾಡ ಕೆರೆ ಭರ್ತಿ: ಬಯಲು ನಾಡಿನ ಕೆರೆಗಳು ಖಾಲಿ...

ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 1,300ಕ್ಕೂ ಹೆಚ್ಚು ಸಣ್ಣ ಸಣ್ಣ ಕೆರೆ–ಕಟ್ಟೆ

ವಿಜಯಕುಮಾರ್ ಎಸ್.ಕೆ.
Published 28 ಜುಲೈ 2025, 7:07 IST
Last Updated 28 ಜುಲೈ 2025, 7:07 IST
ಕಡೂರು ತಾಲ್ಲೂಕಿನ ಗಡಿ ಅಂತರಗಟ್ಟೆಯ ಕೆರೆಯಲ್ಲಿ ಹನಿ ನೀರಿಲ್ಲದೆ ಒಣಗಿರುವುದು
ಕಡೂರು ತಾಲ್ಲೂಕಿನ ಗಡಿ ಅಂತರಗಟ್ಟೆಯ ಕೆರೆಯಲ್ಲಿ ಹನಿ ನೀರಿಲ್ಲದೆ ಒಣಗಿರುವುದು   

ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆ ಭೋರ್ಗರೆದು ಸುರಿಯುತ್ತಿದ್ದು, ನದಿಗಳು ಮೈದುಂಬಿ ಹರಿಯುತ್ತಿವೆ. ಕೆರೆಗಳು ಬಹುತೇಕ ಭರ್ತಿಯಾಗಿವೆ. ಆದರೆ, ಬಯಲು ಸೀಮೆಯ ಕೆರೆಗಳ ಒಡಲೂ ಇನ್ನೂ ತುಂಬಿಲ್ಲ; ಭರ್ತಿಯಾಗುವ ಸಾಧ್ಯತೆಯೂ ಕ್ಷಿಣಿಸಿದೆ.

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಪ್ರಮುಖ 126 ಕೆರೆಗಳಿದ್ದರೆ, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 1,300ಕ್ಕೂ ಹೆಚ್ಚು ಸಣ್ಣ ಸಣ್ಣ ಕೆರೆ–ಕಟ್ಟೆಗಳಿವೆ. ಮಲೆನಾಡು ಮತ್ತು ಮಲೆನಾಡಿಗೆ ಹೊಂದಿಕೊಂಡಿರುವ ಭಾಗದ ಕೆರೆಗಳು ಭರ್ತಿಯಾಗಿವೆ.

ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಪ್ರಮುಖ 28 ಕೆರೆಗಳು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿವೆ. ಹಿರೇಕೊಳಲೆ ಕೆರೆ ಸೇರಿ 17 ಕೆರೆಗಳು ಸಂಪೂರ್ಣ ಭರ್ತಿಯಾಗಿದ್ದು, ಮೂರು ಕೆರೆಗಳು ಶೇ 80ರಷ್ಟು ಭರ್ತಿಯಾಗಿದ್ದರೆ ಮೂರು ಕೆರೆಗಳು ಶೇ 30ರಷ್ಟು ಭರ್ತಿಯಾಗಿವೆ.

ADVERTISEMENT

ಸಣ್ಣ ನಿರಾವರಿ ಇಲಾಖೆ ನಿರ್ವಹಿಸುತ್ತಿರುವ ಮೂಡಿಗೆರೆ ತಾಲ್ಲೂಕಿನಲ್ಲಿ ಇರುವ ಏಳು ಕೆರೆ‌, ಕೊಪ್ಪ ತಾಲ್ಲೂಕಿನಲ್ಲಿರುವ ಆರು ಕೆರೆ, ಎನ್.ಆರ್‌.ಪುರ ತಾಲ್ಲೂಕಿನಲ್ಲಿರುವ 18 ಕೆರೆಗಳು ಸಂಪೂರ್ಣ ಭರ್ತಿಯಾಗಿವೆ. ತರೀಕೆರೆ ತಾಲ್ಲೂಕಿನಲ್ಲಿರುವ 23 ಕೆರೆಗಳು, ಅಜ್ಜಂಪುರ ತಾಲ್ಲೂಕಿನ 8 ಕೆರೆಗಳು, ಕಡೂರು ತಾಲ್ಲೂಕಿನ 31 ಕೆರೆಗಳಲ್ಲಿ ಅಯ್ಯನಕೆರೆ ಮತ್ತು ಮದಗದ ಕೆರೆಗಳು ಭಾನುವಾರವಷ್ಟೇ ಭರ್ತಿಯಾಗಿವೆ. ಉಳಿದ ಕೆರೆಗಳು ಭರ್ತಿಯಾಗಿಲ್ಲ.

ಅಯ್ಯನಕೆರೆ ಮತ್ತು ಮದಗದ ಕೆರೆಗಳು ಭರ್ತಿಯಾಗಿ ಕೋಡಿಯಲ್ಲಿ ನೀರು ಹರಿದರೆ, ಅದರ ಸರಣಿ ಕೆರೆಗಳು ಭರ್ತಿಯಾಗಿವೆ. ಇದೇ ರೀತಿ ಮಳೆ ಇನ್ನೂ 15 ದಿನಗಳು ಮುಂದುವರಿದರೆ ಮಾತ್ರ ಈ ಸರಣಿ ಕೆರೆಗಳಿಗೆ ನೀರು ಹರಿಯಲಿದೆ. ಇಲ್ಲದಿದ್ದರೆ ಈ ವರ್ಷ ಆ ಕೆರೆಗಳು ಭರ್ತಿಯಾಗುವ ಅವಕಾಶ ಕಡಿಮೆ.

ಪೂರಕ ಮಾಹಿತಿ: ಎನ್.ಸೋಮಶೇಖರ್, ಕೆ.ವಿ.ನಾಗರಾಜ್, ರವಿಕುಮಾರ್ ಶೆಟ್ಟಿಹಡ್ಲು, ಕೆ.ನಾಗರಾಜ್, ಜೆ.ಒ.ಉಮೇಶ್‌ಕುಮಾರ್

ಅಮೃತಾಪುರ ಹೋಬಳಿಯ ಕುಡ್ಲೂರು ಗ್ರಾಮದಲ್ಲಿರುವ ಊರ ಮುಂದಿನಕೆರೆಯಲ್ಲಿ ಅಲ್ಪಸ್ವಲ್ಪ ನೀರಿರುವುದು
ಅಜ್ಜಂಪುರ ತಾಲ್ಲೂಕಿನ ಬುಕ್ಕರಾಯನಕೆರೆಯಲ್ಲಿ ಸಂಗ್ರಹವಾಗಿರುವ ನೀರು

ಎರಡು ಕೆರೆಗಳು ಭರ್ತಿ: ಹಲವು ಕೆರೆಗಳು ಖಾಲಿ

ಕಡೂರು: ತಾಲ್ಲೂಕು ಮೊದಲಿನಿಂದಲೂ ನೀರಾವರಿಯಿಂದ ವಂಚಿತವಾಗಿರುವ ಪ್ರದೇಶ. ಹಾಗಿದ್ದರೂ ಬಯಲು ಸೀಮೆಯ ಕೆಲ ಭಾಗವನ್ನು ಪ್ರಮುಖವಾಗಿ ಬೀರೂರು ಹೋಬಳಿಯ ಮದಗದ ಕೆರೆ ಸಖರಾಯಪಟ್ಟಣದ ಅಯ್ಯನಕೆರೆ ಕಲ್ಕೆರೆಯ ಕುಕ್ಕ ಸಮುದ್ರ ಕೆರೆ ಕೆರೆಸಂತೆಯ ವಿಷ್ಣುಸಮುದ್ರ ಕೆರೆಗಳು ಜಲಮೂಲವಾಗಿ ರೈತರ ಬದುಕನ್ನು ಕಟ್ಟಿಕೊಡುತ್ತಾ ಬಂದಿವೆ.

ಮದಗದ ಕೆರೆ ಮತ್ತು ಅಯ್ಯನ ಕೆರೆಗಳು ಸಾಮಾನ್ಯವಾಗಿ ಜುಲೈ ಮಧ್ಯ ಭಾಗದಲ್ಲಿ ತುಂಬುತ್ತಿದ್ದವು. ಈ ವರ್ಷ ಜುಲೈ ಅಂತ್ಯದಲ್ಲಿ ಭರ್ತಿಯಾಗಿವೆ. ನಂತರ ಬರುವ ಮಳೆಯ ನೀರು ಸರಣಿ ಕೆರೆಗಳನ್ನು ತುಂಬಿಸುತ್ತವೆ. ಈ ಕೆರೆಗಳ ಆಶ್ರಯದಲ್ಲಿ ಹಲವು ಕುಟುಂಬಗಳು ಕೃಷಿ ಮಾಡುತ್ತಿವೆ. ಚೌಳಹಿರಿಯೂರು ಸಮೀಪದ ಕುಕ್ಕಸಮುದ್ರ ಕೆರೆ ಸಂಪೂರ್ಣ ಖಾಲಿಯಾಗಿದೆ.

ಮುಂದಿನ ವಾರದಲ್ಲಿ ಭದ್ರಾ ಮೇಲ್ದಂಡೆ ನೀರು ಹರಿಯುವ ಸಾಧ್ಯತೆಗಳಿವೆ. ಮದಗೆದ ಕೆರೆಯ ಸರಣಿ ಕೆರೆಗಳಲ್ಲಿ ಬುಕ್ಕಸಾಗರಕೆರೆ ಮತ್ತು ಚಿಕ್ಕಂಗಳ ಕೆರೆಗಳನ್ನು ಹೊರತುಪಡಿಸಿದರೆ ಸುಮಾರು 28ಕ್ಕೂ ಹೆಚ್ಚು ಕೆರೆಗಳು ಖಾಲಿ ಉಳಿದಿವೆ. ಈ ಕೆರೆಗಳು ಬೇಗ ತುಂಬದಿದ್ದರೆ ಮುಂದಿನ ದಿನಗಳಲ್ಲಿ ಜನ– ಜಾನುವಾರು ನೀರಿನ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ.

ಮುಂಗಾರು ಮಳೆ ತಾಲ್ಲೂಕಿನಲ್ಲಿ ಕೆಲವು ಕಡೆ ಸಾಧಾರಣ ಎನ್ನುವಂತೆ ಸುರಿದಿದ್ದರೆ ಇನ್ನು ಹಲವೆಡೆ ಮಳೆಯಾಗಿಲ್ಲ. ಪಂಚನಹಳ್ಳಿ ಸಿಂಗಟಗೆರೆ ಚೌಳಹಿರಿಯೂರು ಭಾಗದಲ್ಲಿ ಸಾಂಪ್ರದಾಯಿಕ ಕೃಷಿಯಾಗಿ ರಾಗಿ ಬೆಳೆ ಮತ್ತು ತೆಂಗಿನ ತೋಟಗಳು ಕೆರೆಗಳ ನೀರನ್ನು ಆಶ್ರಯಿಸಿವೆ. ವಿಷ್ಣುಸಮುದ್ರ ಕೆರೆಯಲ್ಲಿ ಸ್ವಲ್ಪಮಟ್ಟಿನ ನೀರು ಸಂಗ್ರಹವಾಗಿದ್ದು ಅದು ಅಂತರ್ಜಲ ವೃದ್ಧಿಗೆ ನೆರವಾಗುವ ಸಾಧ್ಯತೆಗಳಿವೆ. ಅದನ್ನು ಹೊರತುಪಡಿಸಿದರೆ ಕೃಷಿ ಚಟುವಟಿಕೆಗಳಿಗೆ ನೆರವಾಗುವ ಸಾಧ್ಯತೆ ಕಡಿಮೆ ಇದೆ.

ಭದ್ರಾ ಉಪ ಕಣಿವೆ ಯೋಜನೆಯಲ್ಲಿ ಈ ಪೈಕಿ ಹಲವು ಕೆರೆಗಳು ಸೇರ್ಪಡೆಯಾಗಿದ್ದು ಅವುಗಳು ತುಂಬಿದರೆ ಮಾತ್ರ ಜನರ ಜೀವನಕ್ಕೆ ಆಧಾರ ಆಗಲಿದೆ. ಹೊಸದುರ್ಗ ತಾಲ್ಲೂಕಿನ ಗಡಿ ಅಂತರಗಟ್ಟೆ ಕೆರೆಯಲ್ಲಿ ಹನಿ ನೀರು ಇಲ್ಲ. ಇಲ್ಲಿಗೂ ಭದ್ರಾ ನದಿಯ ಆಸರೆ ಬೇಕಿದೆ. ಇಲ್ಲದಿದ್ದರೆ ಬರದ ಸುಳಿಗೆ ಸಿಲುಕುವ ಸಾಧ್ಯತೆಗಳಿವೆ. ಜಾನುವಾರು ಮೇವು ಮತ್ತು ನೀರಿಗಾಗಿ ಪರಿತಪಿಸುವ ಸಾಧ್ಯತೆಗಳಿವೆ.

ಕೊಪ್ಪದ ಹಿರೀಕೆರೆ ಭರ್ತಿಯಾಗಿರುವುದು

ಅಮೃತಾಪುರ ಹೋಬಳಿಯಲ್ಲಿ ಕೆರೆಗಳು ಖಾಲಿ

ತರೀಕೆರೆ: ತಾಲ್ಲೂಕಿನಲ್ಲಿ ಮೂರ್ನಾಲ್ಕು ದಿನಗಳಿಂದ ಮಳೆ ಸುರಿಯುತ್ತಿದ್ದು ತೋಟದ ಬೆಳೆಗಳಿಗೆ ಅನುಕೂಲವಾಗಿದೆ. ಕಳೆದ ಬಾರಿ ಕೆರೆಯಲ್ಲಿ ನೀರು ಇತ್ತು. ಲಕ್ಕವಳ್ಳಿ ಕಸಬಾ ಮತ್ತು ಲಿಂಗದಹಳ್ಳಿ ಸುತ್ತಮುತ್ತ ಕೆರೆಗಳಲ್ಲಿ ನೀರಿದೆ. ಮಳೆ ಮುಂದುವರಿದರೆ ತುಂಬುವ ಸಾಧ್ಯತೆ ಇದೆ. ಆದರೆ ಅಮೃತಾಪುರ ಹೋಬಳಿಯಲ್ಲಿ ಮಳೆ ಕಡಿಮೆಯಾಗಿದ್ದು ಲಕ್ಷ್ಮೀಸಾಗರ ಹಾದಿಕೆರೆ ಕುಡ್ಲೂರು ಮುಂಡ್ರೆ ಭಾಗದ ಕೆರೆಗಳಲ್ಲಿ ನೀರಿಲ್ಲದೆ ಬರಿದಾಗಿವೆ.

ಕೆರೆಗಳ ಒಡಲು ಭರ್ತಿ

ಕೊಪ್ಪ: ಪಟ್ಟಣ ಪ್ರದೇಶದ ಜನರಿಗೆ ಜನವರಿಯಿಂದ ಜೂನ್‌ವರೆಗೆ ತುಂಗಾ ನದಿಯಿಂದ ಕುಡಿಯುವ ನೀರು ಪೂರೈಕೆ ಆಗುತ್ತದೆ. ಮಳೆಗಾಲ ಆರಂಭವಾದ ನಂತರ ಜುಲೈನಿಂದ ಡಿಸೆಂಬರ್‌ವರೆಗೆ ಹಿರೀಕೆರೆಯಿಂದ ನೀರು ಪೂರೈಸಲಾಗುತ್ತಿದೆ. ಈ ಬಾರಿ ಮಳೆ ಎಂದಿಗಿಂತ ಹೆಚ್ಚು ಸುರಿದಿದ್ದು ಹಿರೀಕೆರೆ ಈಗಾಗಲೇ ತುಂಬಿ ಕೋಡಿ ಹರಿದಿದೆ. ಜುಲೈ 29‌ರಂದು ಬಾಗಿನ ಸಮರ್ಪಣೆ ಇದೆ.

ಇಲ್ಲಿ ನೀರು ಸಂಗ್ರಹ ಸಾಮರ್ಥ್ಯ ಕಡಿಮೆ ಇರುವುದರಿಂದ ಬೇಸಿಗೆಯಲ್ಲಿ ತುಂಗಾ ನದಿ ನೀರು ಅವಲಂಬಿಸಬೇಕಾಗಿದೆ. ಈ ನೀರು ಪಟ್ಟಣಕ್ಕೆ ಹೊಂದಿಕೊಂಡಿರುವ ಗ್ರಾಮಾಂತರದ ಜನರಿಗೂ ಪೂರೈಕೆಯಾಗುತ್ತದೆ. ಪ್ರತಿ ವರ್ಷ ಕೆರೆ ತುಂಬಿದರೂ ಬೇಸಿಗೆಯಲ್ಲಿ ನೀರು ಸಾಕಾಗುವುದಿಲ್ಲ. ಎಂದಿನಂತೆ ಜನವರಿಯಿಂದ ಜೂನ್ ವರೆಗೆ ತುಂಗಾ ನದಿ ನೀರು ಆಶ್ರಯಿಸಬೇಕಾದ ಪರಿಸ್ಥಿತಿ ಇದೆ.

ನರಸಿಂಹರಾಜಪುರ ತಾಲ್ಲೂಕಿನ ನಾಗಲಾಪುರ ಗ್ರಾಮದಲ್ಲಿರುವ ಹೆಗ್ಗೆರಿ ಕೆರೆ ಭರ್ತಿಯಾಗಿರುವುದು

ಬಹುತೇಕ ಕೆರೆಗಳು ಭರ್ತಿ

ನರಸಿಂಹರಾಜಪುರ: ತಾಲ್ಲೂಕಿನ ವ್ಯಾಪ್ತಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು ಬಹುತೇಕ ಕೆರೆಗಳು ಭರ್ತಿಯಾಗಿವೆ. ತಾಲ್ಲೂಕಿನ 14 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿರುವ ಒಟ್ಟು 451 ಕೆರೆಗಳು ಇವೆ. ಇಲ್ಲಿನ ಬಹುಪಾಲು ಕೃಷಿ ಕೊಳವೆ ಬಾವಿ ಆಧಾರಿತ ಆಗಿರುವುದರಿಂದ ಕೆರೆಗಳ ಮೇಲಿನ ಅವಲಂಬನೆ ಕಡಿಮೆ.

ಸರ್ಕಾರದಿಂದ ಅನುದಾನ ಬಿಡುಗಡೆಯಾದರೂ ಆಯ್ದ ಕೆಲವು ಕೆರೆಗಳನ್ನು ಮಾತ್ರ ಪದೇ ಪದೇ ದುರಸ್ತಿ ಮಾಡಲಾಗುತ್ತಿದೆ. ಇದರಿಂದಾಗಿ ಬಹುತೇಕ ಕೆರೆಗಳಲ್ಲಿ ಹೂಳು ತುಂಬಿಕೊಂಡಿದ್ದು ಮೊದಲ ಮಳೆಗೆ ಭರ್ತಿಯಾಗುತ್ತವೆ. ಅಂತರ್ಜಲ ವೃದ್ಧಿಗೆ ಕೆರೆಗಳು ಸಹಾಯವಾಗಿವೆ. ದೊಡ್ಡ ಕೆರೆಗಳನ್ನು ಕೆಲವರು ಮೀನುಗಾರಿಕೆಗೆ ಬಳಸಿಕೊಂಡಿದ್ದಾರೆ.

ಅಜ್ಜಂಪುರ: ಕೆರೆಗಳು ಖಾಲಿ

ಅಜ್ಜಂಪುರ: ತಾಲ್ಲೂಕಿನಲ್ಲಿ ಮುಂಗಾರು ಆರ್ಭಟಿಸಿಲ್ಲ. ತಾಲ್ಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಿಲ್ಲ. ಜಿಲ್ಲೆಯ ಅತಿ ದೊಡ್ಡ ಕೆರೆಗಳಲ್ಲಿ ಒಂದಾದ ಬುಕ್ಕಾಂಬುದಿಯ ಬುಕ್ಕರಾಯನಕೆರೆ ಭರ್ತಿಯಾಗಿಲ್ಲ. ತಿಮ್ಮಶೆಟ್ಟಿ ಕೆರೆ ತುಂಬಿಲ್ಲ. ಪಟ್ಟಣದ ಪರ್ವತರಾಯನ ಕೆರೆ ಶಿವನಿಯ ದೊಡ್ಡಕೆರೆ ನಂದಿಪುರದ ಶಂಕರಯ್ಯನಕೆರೆ ಜಾವೂರಿನ ಕೆರೆ ಭರ್ತಿಯಾಗಿಲ್ಲ.

ಮುಂಗಾರು ಆರಂಭವಾಗಿ ಎರಡು ತಿಂಗಳು ಕಳೆದರೂ ಕೆರೆಗಳು ಭರ್ತಿ ಆಗದಿರುವುದು ರೈತರನ್ನು ಆತಂಕಕ್ಕೆ ದೂಡಿದೆ. ಅಂತರ್ಜಲ ಹೆಚ್ಚದಿದ್ದರೆ ಕೊಳವೆ ಬಾವಿಗಳು ಬತ್ತುವ ಭೀತಿ ಎದುರಾಗಿದೆ. ಕೆರೆಗಳು ತುಂಬದೆ ಇದ್ದರೆ ತೋಟಗಳನ್ನು ಉಳಿಸಿಕೊಳ್ಳುವುದು ಸವಾಲಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.