ಚಿಕ್ಕಮಗಳೂರು: ಸುಜಾತಾ ಶಿವಕುಮಾರ್ ರಾಜೀನಾಮೆಯಿಂದ ತೆರವಾಗಿರುವ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ದಿನಾಂಕ ನಿಗದಿಯಾಗಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿದೆ. ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಆಂತರಿಕ ಒಪ್ಪಂದದ ಪ್ರಕಾರ ಈ ಬಾರಿ ಜೆಡಿಎಸ್‌ಗೆ ಅಧಿಕಾರ ಸಿಗುವುದು ಬಹುತೇಕ ಖಚಿತವಾಗಿದೆ.
ಸ್ಥಳೀಯ ಸಂಸ್ಥೆಗಳಲ್ಲೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮುಂದುವರಿಸಿವೆ. ಒಟ್ಟು 35 ಸದಸ್ಯ ಬಲದ ನಗರಸಭೆಯಲ್ಲಿ ಬಿಜೆಪಿಯ 18 ಸದಸ್ಯರಿದ್ದರು. ಮಾಜಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರನ್ನು ಬಿಜೆಪಿಯಿಂದ ಅಮಾನತು ಮಾಡಲಾಗಿದೆ. ಇದರಿಂದ ಬಿಜೆಪಿ ಸದಸ್ಯರ ಸಂಖ್ಯೆ ಈಗ 17ಕ್ಕೆ ಇಳಿದಿದೆ. ಜೆಡಿಎಸ್‌ನ ಇಬ್ಬರು ಮತ್ತು ಜೆಡಿಎಸ್ ಬೆಂಬಲಿತ ಒಬ್ಬರು ಸೇರಿ ಮೂವರಿದ್ದಾರೆ. ಒಟ್ಟು 20 ಸದಸ್ಯ ಬಲವನ್ನು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಹೊಂದಿದೆ.
ಬಿಜೆಪಿ ಆಂತರಿಕ ಒಪ್ಪಂದದ ಪ್ರಕಾರ ರಾಜೀನಾಮೆ ನೀಡಲು ಹಿಂದೇಟು ಹಾಕಿ ಅಧಿಕಾರ ನಡೆಸಿದ ವರಸಿದ್ಧಿ ವೇಣುಗೋಪಾಲ್ ನಡೆಯಿಂದ ಎಚ್ಚೆತ್ತುಕೊಂಡ ಬಿಜೆಪಿ, ಬಳಿಕ ಎಚ್ಚರಿಕೆ ಹೆಜ್ಜೆ ಇಟ್ಟಿತು. ಅಷ್ಟರಲ್ಲಿ ಜೆಡಿಎಸ್–ಬಿಜೆಪಿ ರಾಜ್ಯ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡಿತ್ತು. ಅದರಂತೆ ನಗರಸಭೆಯಲ್ಲೂ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ.
30 ತಿಂಗಳ ಅವಧಿಗೆ ಮೊದಲ 10 ತಿಂಗಳ ಅವಧಿಯನ್ನು ಬಿಜೆಪಿಯ ಸುಜಾತಾ ಶಿವಕುಮಾರ್ ಅವರಿಗೆ ಬಿಟ್ಟು ಕೊಡಲಾಗಿದೆ. ಎರಡನೇ 10 ತಿಂಗಳನ್ನು ಜೆಡಿಎಸ್‌ಗೆ, ನಂತರದ 10 ತಿಂಗಳು ಮತ್ತೆ ಬಿಜೆಪಿಗೆ ಅಧಿಕಾರ ಬಿಟ್ಟುಕೊಡಲು ಒಪ್ಪಂದ ಮಾಡಿಕೊಂಡಿವೆ ಎಂದು ಮೂಲಗಳು ತಿಳಿಸಿವೆ.
ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಸಿ.ಟಿ.ರವಿ ಸಮ್ಮುಖದಲ್ಲಿ ಮಾತುಕತೆ ನಡೆದಿದ್ದು, ಬಳಿಕ ಸುಜಾತಾ ಶಿವಕುಮಾರ್ ರಾಜೀನಾಮೆ ಸಲ್ಲಿಸಿದರು. ಈಗ ಜೆಡಿಎಸ್‌ನಲ್ಲಿ ರಾಜಕೀಯ ಚಟುವಟಿಕೆ ಗರಿಗೆದಿರಿದೆ. ಇರುವ ಮೂವರಲ್ಲಿ ಶೀಲಾ ದಿನೇಶ್ ಒಬ್ಬರು ಮಾತ್ರ ಮಹಿಳೆ. ಬಹುತೇಕ ಅವರಿಗೆ ಅಧಿಕಾರ ಖಚಿತ ಎಂಬಂತಾಗಿದೆ. ಈ ಸಂಬಂಧ ಎಲ್ಲಾ ಮಾತುಕತೆಗಳು ಪೂರ್ಣಗೊಂಡಿವೆ ಎಂದು ಜೆಡಿಎಸ್ ಮುಖಂಡರು ಹೇಳುತ್ತಾರೆ.
17 ಸದಸ್ಯರ ಬಲ ಇದ್ದರೂ ಒಪ್ಪಂದದ ಪ್ರಕಾರ ಅಧಿಕಾರ ಬಿಟ್ಟುಕೊಡುತ್ತಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಲಾಭ ಪಡೆದುಕೊಳ್ಳಲು ಪ್ರಯತ್ನಿಸುವ ಸಾಧ್ಯತೆ ಇತ್ತು. ಆದರೆ, ಬಿಜೆಪಿ–ಜೆಡಿಎಸ್ ಒಟ್ಟಾಗಿರುವುದರಿಂದ ಪ್ರಯತ್ನ ನಡೆದಂತೆ ಕಾಣಿಸುತ್ತಿಲ್ಲ. ಕಾಂಗ್ರೆಸ್‌ನ 12 ಸದಸ್ಯರು, ಎಸ್‌ಡಿಪಿಐ ಒಬ್ಬರು, ಒಬ್ಬರು ಪಕ್ಷೇತರರು, ಬಿಜೆಪಿಯಿಂದ ಅಮಾನತುಗೊಂಡಿರುವ ಒಬ್ಬರು ಸೇರಿ 15 ಸದಸ್ಯರು, ಶಾಸಕ ಎಚ್.ಡಿ.ತಮ್ಮಯ್ಯ ಸೇರಿ 16 ಮತಗಳ ಬಲ ಇದೆ ಎಂಬುದು ಲೆಕ್ಕಾಚಾರ.
ಬಿಜೆಪಿ–ಜೆಡಿಎಸ್ ಮೈತ್ರಿ ಕೂಟಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಪಸಭಾಪತಿ ಎಂ.ಕೆ.ಪ್ರಾಣೇಶ್, ವಿಧಾನ ಪರಿಷತ್ತಿನ ಸದಸ್ಯರಾದ ಸಿ.ಟಿ.ರವಿ, ಎಸ್.ಎಲ್.ಭೋಜೇಗೌಡ ಅವರ ಮತಗಳ ಬಲವೂ ಇದೆ. ಆದ್ದರಿಂದ ಕಾಂಗ್ರೆಸ್ ಅಷ್ಟೇನು ತಲೆಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ಶೀಲಾ ದಿನೇಶ್ ಅವರು ಅಧ್ಯಕ್ಷರಾಗವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.