
ಚಿಕ್ಕಮಗಳೂರು: ನಗರೋತ್ಥಾನ ಯೋಜನೆ 4ನೇ ಹಂತದ ಕಾಮಗಾರಿಯನ್ನು ಶೀಘ್ರವೇ ಆರಂಭಿಸಬೇಕು. ಇಲ್ಲದಿದ್ದರೆ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಗರಸಭೆ ಕಾಂಗ್ರೆಸ್ ಸದಸ್ಯರು ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಶೀಲಾ ದಿನೇಶ್ ಅವರ ಅಧ್ಯಕ್ಷತೆಯಲ್ಲಿ ಗುರುವರ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಲಕ್ಷ್ಮಣ್, ‘ಕಾಮಗಾರಿ ಆರಂಭವಾಗದೆ ನಗರದ ಜನ ತೊಂದರೆ ಅನುಭವಿಸುತ್ತಿದ್ದಾರೆ. ಗುತ್ತಿಗೆದಾರರ ವಿರುದ್ಧ ಯಾವುದೇ ಕ್ರಮವನ್ನು ನಗರಸಭೆ ಕೈಗೊಳ್ಳುತ್ತಿಲ್ಲ ಏಕೆ’ ಎಂದು ಪ್ರಶ್ನಿಸಿದರು.
ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್‌ನ ಇತರ ಸದಸ್ಯರು, ‘ಒಳಚರಂಡಿ ಕಾಮಗಾರಿ ಕಳಪೆ ಬಗ್ಗೆ ಗುತ್ತಿಗೆದಾರ ಅಣ್ಣಾವೇಲು ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ನಗರೋತ್ಥಾನ ಯೋಜನೆ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರು ಯಾರು ಎಂಬುದನ್ನು ಸಾಮಾನ್ಯ ಸಭೆಗೆ ತಿಳಿಸಬೇಕು. ಅವರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಯಾವುದಾದರೂ ತೊಡಕುಗಳಿದ್ದರೆ ತಿಳಿಸಿ. ಇಲ್ಲದಿದ್ದರೆ ಕೂಡಲೇ ಕಾಮಗಾರಿ ಆರಂಭಿಸಲು ಸೂಚನೆ ನೀಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ‘ಗುತ್ತಿಗೆದಾರರು ಯಾರಾದರೂ ಆಗಲಿ. ಕೂಡಲೇ ಕಾಮಗಾರಿ ಆರಂಭಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಿ’ ಎಂದು ತಿಳಿಸಿದರು.
ಆಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ, ‘ಸಂಕ್ರಾಂತಿ ಬಳಿಕ ಕಾಮಗಾರಿ ಆರಂಭಿಸಲು ಸೂಚನೆ ನೀಡಲಾಗುವುದು. ಇಲ್ಲದಿದ್ದರೆ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆಯಲಾಗುವುದು’ ಎಂದು ತಿಳಿಸಿದರು.
‘ಈ ವಿಷಯವನ್ನು ಸಭೆಯ ನಿರ್ಣಯ ಎಂದು ದಾಖಲಿಸಬೇಕು. ಜ.15ರ ನಂತರ ಕಾಮಗಾರಿ ಆರಂಭವಾಗದಿದ್ದರೆ ಅಧಿಕಾರಿಗಳೇ ಹೊಣೆ’ ಎಂದು ಕಾಂಗ್ರೆಸ್ ಸದಸ್ಯ ಮುನೀರ್ ಹೇಳಿದರು.
ಒಳಚರಂಡಿ ಕಳಪೆ ಕಾಮಗಾರಿ ಬಗ್ಗೆ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಮಧುಕುಮಾರ್ ರಾಜ್ ಅರಸ್, ‘ಪೈಪ್ ಒಡೆದ ಸಣ್ಣ ಕೆಲಸದಿಂದ ಆದಿಯಾಗಿ ಕಿಲೋ ಮೀಟರ್ ಗಟ್ಟಲೆಯ ಕೆಲಸವನ್ನು ಅಣ್ಣಾವೇಲು ಒಬ್ಬರೇ ನಿರ್ವಹಿಸುತ್ತಿದ್ದಾರೆ. ನಗರಸಭೆಗೆ ಅವರೊಬ್ಬರೇ ಗುತ್ತಿಗೆದಾರ ಎಂಬಂತಾಗಿದೆ. ಬೇರೆಯವರಿಗೂ ಅವಕಾಶ ನೀಡಿದರೆ ಸ್ಪರ್ಧೆ ಏರ್ಪಟ್ಟು ಕಾಮಗಾರಿ ಚುರುಕಾಗಿ ನಡೆಯಲಿದೆ’ ಎಂದು ತಿಳಿಸಿದರು.
ಇದಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರೂ ಧ್ವನಿಗೂಡಿಸಿದರು. ಆಯುಕ್ತ ಬಸವರಾಜ್ ಮಾತನಾಡಿ, ‘ಒಳಚರಂಡಿ ಕಾಮಗಾರಿಗಳಿಗೆ ಟೆಂಡರ್ ಕರೆದರೆ ಯಾವುದೇ ಗುತ್ತಿಗೆದಾರರು ಅರ್ಜಿ ಹಾಕುತ್ತಿಲ್ಲ. ಇರುವ ಒಬ್ಬರೇ ಗುತ್ತಿಗೆದಾರರಿಂದ ಕಾಮಗಾರಿ ನಿರ್ವಹಿಸಲಾಗುತ್ತಿದೆ. 50 ವರ್ಷಗಳ ಹಿಂದೆ ಒಳಚರಂಡಿ ನಿರ್ಮಿಸಲಾಗಿದೆ. ಆಗಿನ ಜನಸಂಖ್ಯೆಗೆ ಅನುಗುಣವಾಗಿ ಪೈಪ್ ಅಳವಡಿಸಲಾಗಿದೆ. ಈಗ ಉಕ್ಕುವುದು, ಪೈಪ್ ಒಡೆಯುವುದು ಸಾಮಾನ್ಯವಾಗಿದೆ. ತುರ್ತು ಕಾಮಗಾರಿ ನಿರ್ವಹಿಸಲು ಇರುವ ಒಬ್ಬರೇ ಗುತ್ತಿಗೆದಾರ ಅವರು. ಬೇರೆಯವರಿಂದ ಅರ್ಜಿ ಹಾಕಿಸಿದರೆ ಕಾಮಗಾರಿ ನಿರ್ವಹಣೆ ಹೊಣೆ ನೀಡಲಾಗುದು’ ಎಂದರು.
ನಗರಸಭೆ ಅಧ್ಯಕ್ಷ ಶೀಲಾ ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಲಲಿತಾ ರವಿನಾಯ್ಕ ಉಪಸ್ಥಿತರಿದ್ದರು.
ನಗರದಲ್ಲಿ ಪ್ರಮುಖ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳು ನಿಲ್ಲುವುದರಿಂದ ತೊಂದರೆಯಾಗುತ್ತಿದೆ ಎಂದು ಸದಸ್ಯರು ಸಭೆಯ ಗಮನಕ್ಕೆ ತಂದರು. ಸಂಚಾರ ಪೊಲೀಸ್ ವಿಭಾಗದ ಅಧಿಕಾರಿಗಳು ಸಭೆಯಲ್ಲಿದ್ದು ಸಂಚಾರ ಸಮಸ್ಯೆ ಬಗ್ಗೆ ಸದಸ್ಯರು ಮಾಹಿತಿ ನೀಡಬಹುದು ಎಂದು ಆಯುಕ್ತರು ತಿಳಿಸಿದರು. ಈ ವೇಳೆ ಮಾತನಾಡಿದ ಎಲ್ಲಾ ಪಕ್ಷದ ಸದಸ್ಯರು ಎಂ.ಜಿ.ರಸ್ತೆ ಐ.ಜಿ.ರಸ್ತೆ ಬಾರ್‌ಲೈನ್ ರಸ್ತೆ ಮಲ್ಲಂದೂರು ರಸ್ತೆ ವಿಜಯಪುರ ರಸ್ತೆ ಫುಡ್ ಪ್ಯಾಲೇಸ್ ಒಕ್ಕಲಿಗರ ಕಲ್ಯಾಣ ಮಂಟಪ ರಸ್ತೆಗಳಲ್ಲಿ ಸಮಸ್ಯೆಗಳಿವೆ ಎಂದು ಗಮನಕ್ಕೆ ತಂದರು. ‘ಕಲ್ಯಾಣ ಮಂಟಪಗಳಲ್ಲಿ ಮದುವೆ ಆರಂಭವಾದರೆ ರಸ್ತೆಗಳಲ್ಲಿ ವಾಹನ ನಿಲುಗಡೆ ಸಮಸ್ಯೆ ಎದುರಾಗುತ್ತಿದೆ. ಕಲ್ಯಾಣ ಮಂಟಪಗಳ ಮಾಲೀಕರಿಗೆ ಸೂಚನೆ ನೀಡಿ ಪ್ರತ್ಯೇಕ ವಾಹನ ನಿಲುಗಡೆ ವ್ಯವಸ್ಥೆಗೆ ಸೂಚನೆ ನೀಡಿ’ ಎಂದು ಶಾಸಕರು ತಿಳಿಸಿದರು. ನಗರದ ಬಹುತೇಕ ಲಾಜ್ಡ್ ಮತ್ತು ಹೋಟೆಲ್‌ಗಳಲ್ಲಿ ನೆಲ ಮಹಡಿಯಲ್ಲಿ ವಾಹನ ನಿಲುಗಡೆ ತಾಣ ಎಂದು ತೋರಿಸ ನಕ್ಷೆಗೆ ಅನುಮೋದನೆ ಪಡೆಯಲಾಗಿದೆ. ಆದರೆ ವಾಹನಗಳನ್ನು ರಸ್ತೆಗೆ ನಿಲ್ಲಿಸಿ ನೆಲ ಮಹಡಿಗಳನ್ನು ಬೆರೆ ಕಾರ್ಯಕ್ಕೆ ಬಳಸಲಾಗುತ್ತಿದೆ. ಇಂತಹ ಕಟ್ಟಡಗಳ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.