ಚಿಕ್ಕಮಗಳೂರು: ನಗರದ ಉಂಡೇದಾಸರಹಳ್ಳಿ ಬಡಾವಣೆ ರಸ್ತೆಯಲ್ಲಿ ಹೆಜ್ಜೆಗೊಂದು ಗುಂಡಿಗಳಿದ್ದು, ವಾಹನ ಸಂಚಾರವೇ ದುಸ್ತರವಾಗಿದೆ.
ನಗರದ ತೊಗರಿಹಂಕಲ್ ವೃತ್ತದಿಂದ ಉಂಡೇದಾಸರಹಳ್ಳಿ ಕಡೆಗೆ ಇಳಿಜಾರಿನಲ್ಲಿ ಸಾಗಿದ ಕೂಡಲೇ ಗುಂಡಿಗಳ ದರ್ಶನವಾಗುತ್ತದೆ. ಮಳೆಗಾಲಕ್ಕೂ ಮುನ್ನ ಸಣ್ಣದಾಗಿದ್ದ ಗುಂಡಿಗಳು ಈಗ ಹೊಂಡಗಳಾಗಿ ಮಾರ್ಪಟ್ಟಿವೆ.
ಸದ್ಯ ಮಳೆ ನಿಂತಿರುವುದರಿಂದ ರಸ್ತೆ ತುಂಬಾ ದೂಳು ಆವರಿಸಿದ್ದು, ಸಂಚರಿಸುವುದೇ ಕಷ್ಟವಾಗಿದೆ. ವಾಹನ ಸವಾರರಿಗೆ ಈ ರಸ್ತೆಯಲ್ಲಿ ಸಂಚಾರ ನಡೆಸುವುದು ಸಂಕಟಮಯವಾಗಿದ್ದು, ನಿವಾಸಿಗಳಲ್ಲಿ ಆಕ್ರೋಶ ಹೆಚ್ಚಾಗಿದೆ.
ಯಗಚಿ ಸೇತುವೆಯ ಮೇಲೆಯೂ ಗುಂಡಿಗಳು ಬಿದ್ದಿವೆ. ತಗ್ಗಿನಲ್ಲಿರುವ ಸೇತುವೆ ಮೇಲೆ ಮಳೆಯಲ್ಲಿ ಎರಡೂ ಕಡೆಯಿಂದ ನೀರು ಬಂದು ಶೇಖರಣೆಯಾಗುತ್ತದೆ. ನೀರಿನಲ್ಲಿ ಗುಂಡಿಗಳು ಎಲ್ಲಿವೆ ಎಂಬುದು ಗೊತ್ತಾಗದೆ ದ್ವಿಚಕ್ರ ವಾಹನ ಸವಾರರು ಬಿದ್ದು ಎದ್ದು ಹೋಗುತ್ತಿದ್ದಾರೆ.
ಮುಂದೆ ಸಾಗಿದರೂ ಅದೇ ಪರಿಸ್ಥಿತಿ ಮುಂದುವರಿದಿದೆ. ರಾಮಯ್ಯ ವೃತ್ತದಲ್ಲಿ ದೊಡ್ಡ ಹೊಂಡವೇ ನಿರ್ಮಾಣವಾಗಿದೆ. ಸರಿಯಾಗಿದ್ದ ರಸ್ತೆಯನ್ನು ಒಳಚರಂಡಿ ಕಾಮಗಾರಿಗಾಗಿ ನಗರಸಭೆ ಸಿಬ್ಬಂದಿಯೇ ತೆಗೆದಿದ್ದರು. ಅದಕ್ಕೆ ಮಣ್ಣು ತುಂಬಿ ಡಾಂಬರ್ ಹಾಕಿದ್ದರು. ಆ ಡಾಂಬರ್ ವಾರದಲ್ಲೇ ಕಿತ್ತು ಬಂದು ಈಗ ದೊಡ್ಡ ಹೊಂಡವಾಗಿದೆ.
ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಗುಂಡಿಗಳಲ್ಲಿ ಬಿದ್ದು ಗಾಯಗೊಂಡ ಪ್ರಕರಣಗಳ ಲೆಕ್ಕವಿಲ್ಲ. ಕಾರುಗಳು ಸಹ ಗುಂಡಿಗಳಲ್ಲಿ ಸಿಲುಕಿ ಹಾನಿಗೊಳಗಾಗುತ್ತಿವೆ. ಗುಂಡಿಗಳನ್ನು ಮುಚ್ಚಲು ನಗರಸಭೆ ಯಾವುದೇ ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಕೋಪಕ್ಕೆ ಕಾರಣವಾಗಿದೆ.
ಉಂಡೇದಾಸರಹಳ್ಳಿ ಮುಖ್ಯರಸ್ತೆಯ ಸ್ಥಿತಿ ಇದಾದರೆ ಬಡಾವಣೆ ರಸ್ತೆಗಳ ಸ್ಥಿತಿ ಹೇಳತೀರದು. ಕೆಸರು, ಗೊಟರು, ಹೊಂಡಗಳಿಂದ ತುಂಬಿಕೊಂಡಿರುವ ಬಡಾವಣೆ ರಸ್ತೆಗಳು ಮಳೆಗಾಲದಲ್ಲಿ ಕೆಸರುಗದ್ದೆಯಾದರೆ, ಮಳೆ ಇಲ್ಲದ ವೇಳೆ ಕೆಮ್ಮಣ್ಣಿನ ದೂಳುಗುಂಡಿಗಳಾಗಿವೆ.
ಹೆಜ್ಜೆ ಇಡಲು ಹೆದರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಣ್ಣು ರಸ್ತೆಗಳು ಜಲ್ಲಿಯನ್ನೇ ಕಂಡಿಲ್ಲ. ಮಳೆಗಾಲದಲ್ಲಿ ಈ ಬಡಾವಣೆಯ ಜನ ಮನೆಗೆ ಸಾಗುವುದೆಂದರೆ ಕೆಸರುಗದ್ದೆಗಳಲ್ಲಿ ಸಂಚರಿಸಿದ ಅನುಭವವಾಗುತ್ತಿದೆ ಎಂದು ನಿವಾಸಿಗಳು ಹೇಳುತ್ತಾರೆ.
‘ನಗರಸಭೆ ಸದಸ್ಯರಿಗೆ, ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ, ರಸ್ತೆ ದುರಸ್ತಿ ಮಾತ್ರ ಆಗಿಲ್ಲ. ಜನರನ್ನು ಇಂತಹ ನರಕ ಸ್ಥಿತಿಯಲ್ಲಿ ಇರಿಸಿರುವ ನಗರಸಭೆ ಅಸ್ಥಿತ್ವದಲ್ಲಿ ಇದ್ದು ಪ್ರಯೋಜನ ಏನು’ ಎಂದು ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ನಿವಾಸಿಗಳು ಹಿಡಿಶಾಪ ಹಾಕುತ್ತಿದ್ದಾರೆ.
ರಸ್ತೆಗಳ ಅಭಿವೃದ್ಧಿಗೆ ಅಧಿಕಾರಿಗಳು ಮಳೆಯ ನೆಪ ಹೇಳುತ್ತಿದ್ದಾರೆ. ಈಗ ಮಳೆ ಬಿಡುವು ನೀಡಿದೆ. ರಸ್ತೆಗಳನ್ನು ದುರಸ್ತಿಪಡಿಸಲು ಜಿಲ್ಲಾಡಳಿತ ಮತ್ತು ನಗರಸಭೆ ಈಗಲಾದರೂ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಆಗ್ರಹಿಸಿದರು.
ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ರಸ್ತೆ ಅಭಿವೃದ್ಧಿಗೆ ಅನುದಾನ ದೊರೆತಿದೆ. ಮಳೆ ಕಾರಣಕ್ಕೆ ಕಾಮಗಾರಿ ಆರಂಭವಾಗಿಲ್ಲ. ತೊಗರಿಹಂಕಲ್ ವೃತ್ತದಿಂದ ರಾಮಯ್ಯ ವೃತ್ತದ ತನಕ ಹೊಸ ರಸ್ತೆ ನಿರ್ಮಿಸಲಾಗುವುದುರೂಪಾ ಕುಮಾರ್, ನಗರಸಭೆ ಸದಸ್ಯೆ
ಅಡ್ಡಾದಿಡ್ಡಿ ವಾಹನ ನಿಲುಗಡೆ: ಪರದಾಟ
ರಸ್ತೆ ಗುಂಡಿಗಳನ್ನು ತಪ್ಪಿಸಿ ವಾಹನ ಚಾಲನೆ ಮಾಡುವುದು ಒಂದೆಡೆಯಾದರೆ ದಟ್ಟಣೆಯಲ್ಲಿ ಸಿಲುಕಿ ನರಳುವುದು ಮತ್ತೊಂದು ಸವಾಲು. ತೊಗರಿಹಂಕಲ್ ವೃತ್ತದಿಂದ ಉಂಡೇದಾಸರಹಳ್ಳಿ ರಸ್ತೆಗೆ ತಿರುವ ಪಡೆದು ಕೂಡಲೇ ಖಾಸಗಿ ಆಸ್ಪತ್ರೆಯೊಂದಿದೆ. ಈ ಆಸ್ಪತ್ರೆಗೆ ಬರುವ ಜನ ರಸ್ತೆಯಲ್ಲೇ ಕಾರುಗಳನ್ನು ನಿಲ್ಲಿಸಿ ಹೋಗುತ್ತಿದ್ದಾರೆ. ಪಾದಚಾರಿ ಮಾರ್ಗವೇ ಇಲ್ಲದ ಕಿರಿದಾದ ರಸ್ತೆಯಲ್ಲಿ ಒಂದು ಕಾರು ನಿಂತರ ಮತ್ತೊಂದು ವಾಹನ ಸಾಗುವುದೇ ಕಷ್ಟ. ಆದರೂ ಸದಾ ನಾಲ್ಕೈದು ಕಾರುಗಳು ನಿಲ್ಲುವುದರಿಂದ ವಾಹನ ಸವಾರರು ದಟ್ಟಣೆಯಲ್ಲಿ ಸಿಲುಕಿ ನರಳುತ್ತಿದ್ದಾರೆ. ನಿತ್ಯ ನೂರಾರು ಶಾಲಾ ವಾಹನಗಳು ಇದೇ ರಸ್ತೆಯಲ್ಲಿ ಸಾಗಬೇಕಿದೆ. ಶಾಲೆ ಆರಂಭ ಮತ್ತು ಶಾಲೆ ಬಿಡುವ ಸಂದರ್ಭದಲ್ಲಿ ಇಲ್ಲಿ ನಿತ್ಯ ಪರದಾಡಬೇಕಾದ ಸ್ಥಿತಿ ಇದೆ. ಒಮ್ಮೆಲೆ ಬರುವ ಶಾಲಾ ಬಸ್‌ಗಳು ಸರಾಗವಾಗಿ ಸಾಗಲು ಆಗದ ಸ್ಥಿತಿ ಇದೆ. ತೊಗರಿಹಂಕಲ್ ವೃತ್ತದಲ್ಲಿ ಇರುವ ಸಂಚಾರ ಪೊಲೀಸರು ಈ ರಸ್ತೆಯ ದಟ್ಟಣೆ ಮತ್ತು ಅಡ್ಡಾದಿಡ್ಡಿ ವಾಹನ ನಿಲುಗಡೆ ಬಗ್ಗೆ ಕಿಂಚಿತ್ತು ಗಮನ ಹರಿಸುವುದಿಲ್ಲ. ಖಾಸಗಿ ಆಸ್ಪತ್ರೆಗೆ ಬರುವ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸದಂತೆ ಸೂಚನೆ ನೀಡಿಲ್ಲ. ಇದರಿಂದಾಗಿ ವಾಹನ ದಟ್ಟಣೆಯಲ್ಲಿ ಸಿಲುಕಿ ಸವಾರರು ನಿತ್ಯ ಪರದಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.