ಚಿಕ್ಕಮಗಳೂರು: ‘ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯಲ್ಲಿ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಕ್ಕೆ ಶೇ 6ರಷ್ಟು ಮೀಸಲಾತಿಯನ್ನು ಸರ್ಕಾರ ನಿಗದಿ ಪಡಿಸಬೇಕು’ ಎಂದು ಬಂಜಾರ ಸಂಘದ ಜಿಲ್ಲಾ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎಲ್. ಲಕ್ಷ್ಮಣ್ ನಾಯ್ಕ್ ಮನವಿ ಮಾಡಿದರು.
‘ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸಲು ನೇಮಕಗೊಂಡಿದ್ದ ನಿವೃತ್ತ ನ್ಯಾ.ನಾಗಮೋಹನ ದಾಸ್ ಆಯೋಗವು ಒಳಮೀಸಲಾತಿ ವಿಚಾರದಲ್ಲಿ ಸುಪ್ರೀಂಕೋರ್ಟ್‌ನ ಮಾನದಂಡಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ನಾಗಮೋಹನ್ ದಾಸ್ ಅವರೇ ವರದಿಯಲ್ಲಿ ತಿಳಿಸಿರುವಂತೆ ಸರ್ಕಾರದ ಕೆಲವು ಇಲಾಖೆಗಳೇ ಪರಿಶಿಷ್ಟ ಜಾತಿಯ ಅಂಕಿ ಅಂಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ಕುಟುಂಬಗಳು ಅಲಭ್ಯ ಇರುವುದರಿಂದ ಸಮೀಕ್ಷೆ ಅಪೂರ್ಣವಾಗಿದೆ ಎಂದು ತಿಳಿಸಿರುವಾಗ ಕಾಂಗ್ರೆಸ್ ನೇತೃತ್ವದ ಸರ್ಕಾರ ಈ ಅಪೂರ್ಣ ವರದಿಯನ್ನೇ ಬದಲಾವಣೆಯೊಂದಿಗೆ, ಕೆಲವು ಸಂಪುಟ ಸಚಿವರೊಂದಿಗೆ ರಾಜಿ ಪಂಚಾಯಿತಿ ನಡೆಸಿ ಜಾರಿಗೊಳಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ’ ಎಂದರು.
‘ನಾಗಮೋಹನ್ ದಾಸ್ ಅವರು ಜಾತಿಗಳನ್ನು ವಿಂಗಡಿಸುವಾಗ ಅತ್ಯಂತ ಹಿಂದುಳಿದ, ಹೆಚ್ಚು ಹಿಂದುಳಿದ ಹಾಗೂ ಕಡಿಮೆ ಹಿಂದುಳಿದ ಸಮುದಾಯಗಳೆಂದು ವರದಿಯಲ್ಲಿ ಹೆಸರಿಸಿದ್ದಾರೆ. ಆದರೆ, ಮೀಸಲಾತಿ ವರ್ಗೀಕರಿಸುವಾಗ ಸ್ಪೃಶ್ಯ ಹಾಗೂ ಅಸ್ಪೃಶ್ಯ ಎಂದು ಅಸಂವಿಧಾನಿಕ ಪದ ಬಳಕೆ ಮಾಡಿರುವುದರ ಹಿಂದೆ ಯಾವ ತಂತ್ರಗಾರಿಕೆ ಇದೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕಿದೆ’ ಎಂದರು.
‘ನ್ಯಾ.ಸದಾಶಿವ ಆಯೋಗ, ಮಾಧುಸ್ವಾಮಿ ವರದಿ ಹಾಗೂ ನಾಗಮೋಹನದಾಸ್ ಆಯೋಗದ ವರದಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ ನಿಗದಿಗೊಳಿಸಿರುವಾಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಯಾವುದೇ ದೃಷ್ಟಿಕೋನದಿಂದಲೂ ಹೊಂದಾಣಿಕೆ ಆಗದ ಅಲೆಮಾರಿ ಸಮುದಾಯವನ್ನು ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳೊಂದಿಗೆ ಸೇರಿಸಿರುವ ಉದ್ದೇಶವೇನು’ ಎಂದು ಪ್ರಶ್ನಿಸಿದರು.
‘ಹಲವು ಆಯೋಗಗಳ ವರದಿಯಲ್ಲಿ ಶಿಫಾರಸು ಮಾಡಿರುವಂತೆ ಅಲೆಮಾರಿ ಸಮುದಾಯಗಳಿಗೂ ಶೇ 1ರಷ್ಟು ಮೀಸಲಾತಿ ನೀಡಬೇಕು ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಿ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯದವರಿಗೂ ಶೇ 6ರಷ್ಟು ಮೀಸಲಾತಿ ನಿಗದಿ ಪಡಿಸಬೇಕು’ ಎಂದು ಒತ್ತಾಯಿಸಿದರು.
ಬಂಜಾರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಿ.ಟಿ.ಗಂಗಾಧರ ನಾಯ್ಕ್, ಬಂಜಾರ ಸಂಘದ ಕಡೂರು ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ್ ನಾಯ್ಕ್, ಸಮಾಜದ ಮುಖಂಡರಾದ ರಾಜನಾಯ್ಕ್, ಬಂಜಾರ ಅಭಿವೃದ್ಧಿ ಸಂಘದ ಅಧ್ಯಕ್ಷ ಗಂಗಾಧರ ನಾಯ್ಕ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.