ADVERTISEMENT

ಚಿಕ್ಕಮಗಳೂರು | 10 ದಿನದಲ್ಲಿ 68 ಕೆರೆ ತೆರವು

ಜಿಲ್ಲೆಯಲ್ಲಿ ಕೆರೆ ಒತ್ತುವರಿ ತೆರವು ಕಾರ್ಯ ಚುರುಕು

ವಿಜಯಕುಮಾರ್ ಎಸ್.ಕೆ.
Published 24 ಮೇ 2025, 7:27 IST
Last Updated 24 ಮೇ 2025, 7:27 IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೆರೆ ಒತ್ತುವರಿ ತೆರವು ಕಾರ್ಯ ಚುರುಕು ಪಡೆದುಕೊಂಡಿದೆ. ಹತ್ತೇ ದಿನದಲ್ಲಿ 68 ಕೆರೆಗಳ ಒತ್ತುವರಿಯನ್ನು ಅಧಿಕಾರಿಗಳು ಮಾಡಿದ್ದಾರೆ. 

ಜಿಲ್ಲೆಯ 1,810 ಕೆರೆಗಳ ಪೈಕಿ 777 ಕೆರೆಗಳಲ್ಲಿ ಒತ್ತುವರಿಯನ್ನು ಕಂದಾಯ ಇಲಾಖೆ ಜಂಟಿ ಸರ್ವೆ ಮೂಲಕ ಗುರುತಿಸಿದೆ. ಆದರೆ, ತೆರವು ಕಾರ್ಯಾಚರಣೆ ನಿಧಾನಗತಿಯಲ್ಲಿ ಸಾಗಿದ್ದು, ಇನ್ನೂ 476 ಕೆರೆಗಳಲ್ಲಿ ತೆರವು ಬಾಕಿ ಇದೆ. ಭೂದಾಖಲೆಗಳ ಇಲಾಖೆ, ಕಂದಾಯ ಇಲಾಖೆ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಪ್ರತಿ ಶನಿವಾರ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದರೂ, ತೆರವು ಕಾರ್ಯ ವಿಳಂಬವಾಗಿತ್ತು.

ಇತ್ತೀಚೆಗೆ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್‌ಕುಮಾರ್ ಕಟಾರಿಯಾ ಅವರು ಕೆರೆ ಒತ್ತುವರಿ ತೆರವು ವಿಳಂಬದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಕೂಡಲೇ ಕಾರ್ಯಾಚರಣೆ ತೀವ್ರಗೊಳಿಸಲು ಸೂಚನೆ ನೀಡಿದ್ದರು.

ADVERTISEMENT

ಇದಾದ 10 ದಿನಗಳಲ್ಲಿ ಒತ್ತುವರಿ ತೆರವು ತೀವ್ರಗೊಳಿಸಿದ್ದು, 68 ಕೆರೆಗಳ ಒತ್ತುವರಿ ತೆರವಾಗಿದೆ. ಕಡೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು 17 ಕೆರೆಗಳ ಒತ್ತುವರಿ ತೆರವಾಗಿದ್ದರೆ, ತರೀಕೆರೆ ತಾಲ್ಲೂಕಿನ 16, ಅಜ್ಜಂಪುರ ತಾಲ್ಲೂಕಿನ 12, ಚಿಕ್ಕಮಗಳೂರು ತಾಲ್ಲೂಕಿನ 12, ನರಸಿಂಹರಾಜಪುರ ತಾ‌ಲ್ಲೂಕಿನ 6 ಮತ್ತು ಮೂಡಿಗೆರೆ ತಾಲ್ಲೂಕಿನ 5 ಕೆರೆಗಳ ಒತ್ತುವರಿ ತೆರವಾಗಿದೆ.

ತೆರವಾಗಿರುವ ಕೆರೆ ಒತ್ತುವರಿಯಲ್ಲಿ ಅಜ್ಜಂಪುರ ತಾಲ್ಲೂಕಿನ ಕಾರೇಹಳ್ಳಿ ಕೆರೆಯಲ್ಲಿ ಅತಿ ಹೆಚ್ಚು 27 ಎಕರೆಯಷ್ಟು ತೆರವು ಮಾಡಲಾಗಿದೆ. ಚಿಕ್ಕಮಗಳೂರು ತಾಲ್ಲೂಕಿನ ಅಂಬಳೆ ಕೆರೆಯ 10 ಎಕರೆ ತೆರವು ಮಾಡಲಾಗಿದೆ. ಅಜ್ಜಂಪುರ ತಾಲ್ಲೂಕಿನ ಮಾಕೋನಹಳ್ಳಿ ಕೆರೆಯಲ್ಲಿ 6 ಎಕರೆ ತೆರವಾಗಿದೆ. 

ಕಡೂರು ತಾಲ್ಲೂಕಿನಲ್ಲಿ ಹೆಚ್ಚು ಕೆರೆಗಳ ಒತ್ತುವರಿ ತೆರವಾಗಿದ್ದರೂ, ತೆರವಾಗಿರವ ಜಾಗ 17 ಎಕರೆಯಷ್ಟೆ, ಅಜ್ಜಂಪುರ ತಾಲ್ಲೂಕಿನಲ್ಲಿ ಹೆಚ್ಚು ಒತ್ತುವರಿಯಾಗಿದ್ದು, 48 ಎಕರೆ ತೆರವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತೆರವು ಕಾರ್ಯಾಚರಣೆ ತಡೆಯಲು ಸ್ಥಳೀಯರು, ಪ್ರಭಾವಿಗಳ ಮೂಲಕ ಒತ್ತಡ ಹೇರುತ್ತಿದ್ದರೂ, ಅವುಗಳಿಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಕೆರೆ ಒತ್ತುವರಿಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕೆರೆ ಒತ್ತುವರಿ ಬಗ್ಗೆ ಸಭೆ ನಡೆಸಿ ತಾಕೀತು ಮಾಡಿದ್ದಾರೆ. ಪ್ರತಿ ಸಭೆಯಲ್ಲೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಸೂಚನೆ ನೀಡುತ್ತಿದ್ದಾರೆ. ಆದ್ದರಿಂದ ತೆರವು ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.