ADVERTISEMENT

ಪಿಎಸ್‌ಐ ಅರ್ಜುನ್‌ ಅವರನ್ನು ಜೈಲಿಗೆ ಕಳುಹಿಸಿ: ಎಲ್‌.ಹನುಮಂತಯ್ಯ

​ಪ್ರಜಾವಾಣಿ ವಾರ್ತೆ
Published 25 ಮೇ 2021, 21:26 IST
Last Updated 25 ಮೇ 2021, 21:26 IST

ಬೆಂಗಳೂರು: ‘ವಿಚಾರಣೆ ನೆಪದಲ್ಲಿ ದಲಿತ ಯುವಕನನ್ನು ಠಾಣೆಗೆ ಕರೆದೊಯ್ದು ಮೂತ್ರ ನೆಕ್ಕಿಸಿರುವ ಚಿಕ್ಕಮಗಳೂರು ಜಿಲ್ಲೆ ಗೋಣಿಬೀಡು ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ ಅರ್ಜುನ್‌ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು. ಅವರನ್ನು ಸೇವೆಯಿಂದಲೇ ವಜಾಗೊಳಿಸಬೇಕು’ ಎಂದು ರಾಜ್ಯಸಭಾ ಸದಸ್ಯ ಎಲ್‌.ಹನುಮಂತಯ್ಯ ಒತ್ತಾಯಿಸಿದ್ದಾರೆ.

ಈ ಸಂಬಂಧ ಹನುಮಂತಯ್ಯ, ರಾಜ್ಯಸಭಾ ಸದಸ್ಯ ಸಯ್ಯದ್‌ ನಾಸೀರ್‌ ಹುಸೇನ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್‌ ಹಾಗೂ ವಿಧಾನಪರಿಷತ್‌ ಸದಸ್ಯ ಪ್ರಕಾಶ್‌ ರಾಥೋಡ್‌ ಅವರು ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಹಾಗೂ ಪೊಲೀಸ್‌ ಮಹಾನಿರೀಕ್ಷಕರಿಗೆ ಮಂಗಳವಾರ ಮನವಿ ನೀಡಿದ್ದಾರೆ.

‘ಕಿರುಗುಂದ ಗ್ರಾಮದ ಕೆ.ಎಲ್‌.ಪುನೀತ್‌ ಜೊತೆ ಅರ್ಜುನ್‌ ಅಮಾನುಷವಾಗಿ ನಡೆದುಕೊಂಡಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಸಿಕ್ಕ ಮೇಲೂ ಮೌನವಹಿಸಿದ್ದ ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ ಅವರನ್ನು ಹೊಣೆಗಾರರನ್ನಾಗಿಸಿ ಅಮಾನತುಗೊಳಿಸಬೇಕು. ಘಟನೆಯ ವೇಳೆ ಕರ್ತವ್ಯದಲ್ಲಿದ್ದ ಕಾನ್‌ಸ್ಟೆಬಲ್‌ ಮೇಲೂ ಎಫ್‌ಐಆರ್‌ ದಾಖಲಿಸಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.