ADVERTISEMENT

ಕನ್ಹಯ್ಯ ಹಂತಕರಿಗೆ ಕಠಿಣ ಶಿಕ್ಷೆ ನೀಡಲು ಒತ್ತಾಯ

ಜಿಲ್ಲೆಯ ವಿವಿಧೆಡೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 1:39 IST
Last Updated 1 ಜುಲೈ 2022, 1:39 IST
ಚಿಕ್ಕಮಗಳೂರಿನಲ್ಲಿ ಟೈಲರ್ಸ್ ಅಸೋಸಿಯೇಷನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಸಂಘದ ಅಧ್ಯಕ್ಷ ಎಚ್.ಆರ್.ಸುದೀರ್, ಕಾರ್ಯದರ್ಶಿ ಜಿ.ಎಸ್.ಅನಿಲ್‌ಕುಮಾರ್, ಖಜಾಂಚಿ ಕೆ.ಎಸ್.ಪಾಂಡುಕುಮಾರ್ ಇದ್ದರು.
ಚಿಕ್ಕಮಗಳೂರಿನಲ್ಲಿ ಟೈಲರ್ಸ್ ಅಸೋಸಿಯೇಷನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಸಂಘದ ಅಧ್ಯಕ್ಷ ಎಚ್.ಆರ್.ಸುದೀರ್, ಕಾರ್ಯದರ್ಶಿ ಜಿ.ಎಸ್.ಅನಿಲ್‌ಕುಮಾರ್, ಖಜಾಂಚಿ ಕೆ.ಎಸ್.ಪಾಂಡುಕುಮಾರ್ ಇದ್ದರು.   

ಚಿಕ್ಕಮಗಳೂರು: ರಾಜಸ್ಥಾನದ ಉದಯಪುರದಲ್ಲಿಟೈಲರ್ ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಚಿಕ್ಕಮಗಳೂರು ಟೈಲರ್ಸ್ ಅಸೋಸಿಯೇಷನ್ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಸೇರಿದ ಪ್ರತಿಭಟನಕಾರರು, ಕೊಲೆಗಾರರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಘೋಷಣೆ ಕೂಗಿದರು.

ಕನ್ಹಯ್ಯಲಾಲ್ ಅವರು ಟೈಲರ್ ವೃತ್ತಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕೆಲ ಧರ್ಮಾಂದರು ಗ್ರಾಹಕರಂತೆ ಅವರ ಅಂಗಡಿಗೆ ಬಂದು, ಹತ್ಯೆ ಮಾಡಿದ್ದಾರೆ. ಹತ್ಯೆಯ ವಿಡಿಯೊ ಮಾಡಿ, ವಿಕೃತಿ ಮೆರೆದಿದ್ದಾರೆ. ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡಿದ್ದಾರೆ. ಅವರಿಗೆ ಕಠಿಣ ಶಿಕ್ಷೆ ವಿಧಿಸಲು ಸರ್ಕಾರ ಕ್ರಮವಹಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ADVERTISEMENT

ಕನ್ಹಯ್ಯಲಾಲ್ ಅವರದ್ದು ಬಡ ಕುಟುಂಬವಾಗಿದೆ. ಸರ್ಕಾರ ಅವರಿಗೆ ಆರ್ಥಿಕ ನೆರವು ನೀಡಬೇಕು. ಭದ್ರತೆ ಒದಗಿಸಬೇಕು ಎಂದು ಪ್ರತಿಭಟನಕಾರರು ಮನವಿ ಮಾಡಿದರು.

ಸಂಘದ ಸದಸ್ಯರಾದ ಯುವರಾಜ, ವಜೀರ್‌ಅಹಮದ್, ಸಿ.ಪಿ.ಸಿದ್ದೇಶ್, ಎಸ್.ಪಿ.ಅಶೋಕ್, ಎಚ್.ಆರ್.ರಾಜು, ಲಕ್ಷ್ಮಿಕಾಂತ, ಎನ್.ಲೋಕೇಶ್, ಬಿ.ಎಂ.ಪ್ರಕಾಶ್, ಎಸ್.ಸತೀಶ್ ಇದ್ದರು.

ಶ್ರೀರಾಮ ಸೇನೆ ಮನವಿ

ಚಿಕ್ಕಮಗಳೂರು: ರಾಜಸ್ಥಾನದ ಉದಯಪುರದಲ್ಲಿ ಟೈಲರ್‌ ಕನ್ಹಯ್ಯ ಲಾಲ್ ಹತ್ಯೆಗೈದ ಹಂತಕರಿಗೆ ಗಲ್ಲುಶಿಕ್ಷೆ ವಿಧಿಸಲು ರಾಷ್ಟ್ರಪತಿ ಅವರು ಕ್ರಮಕೈಗೊಳ್ಳಬೇಕು ಎಂದು ಶ್ರೀರಾಮಸೇನೆ ಜಿಲ್ಲಾ ಘಟಕದವತಿಯಿಂದ ಗುರುವಾರ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ರೂಪಾ ಅವರಿಗೆ ಮನವಿ ಸಲ್ಲಿಸಲಾಯಿತು.

ಟೈಲರ್ ಕನ್ಹಯ್ಯಲಾಲ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹತ್ಯೆ ಕೃತ್ಯ ವಿಡಿಯೊ ಮಾಡಿ, ಸಾಮಾಜಿಕ ಮಾಧ್ಯಮಗಳಿಗೆ ಹರಿಯಬಿಟ್ಟಿದ್ದಾರೆ. ಹಂತಕರನ್ನು ಎನ್‌ಐಎಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ರಾಜಸ್ಥಾನ ಸರ್ಕಾರವು ಕನ್ಹಯ್ಯಲಾಲ್ ಅವರ ಕುಟುಂಬಕ್ಕೆ ₹ 10 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ರಂಜಿತ್‌ ಶೆಟ್ಟಿ,‌ದಿಲೀಪ್‌ಶೆಟ್ಟಿ ಇದ್ದರು.

ಹಂತಕರ ಪ್ರತಿಕೃತಿ ದಹನ

ಚಿಕ್ಕಮಗಳೂರು: ರಾಜಸ್ಥಾನದ ಉದಯಪುರದಲ್ಲಿ ಟೈಲರ್‌ ಕನ್ಹಯ್ಯಲಾಲ್ ಹತ್ಯೆ ಖಂಡಿಸಿ, ವಿಶ್ವ ಹಿಂದೂ ಪರಿಷತ್, ಬಜರಂಗದಳದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಹನುಮಂತಪ್ಪ ವೃತ್ತದಲ್ಲಿ ಸೇರಿದ ಪ್ರತಿಭಟನಕಾರರು, ಮಾನವ ಸರಪಳಿ ನಿರ್ಮಿಸಿದರು. ಹಂತಕರ ಪ್ರತಿಕೃತಿ ದಹಿಸಿದರು. ಕಠಿಣ ಶಿಕ್ಷೆ ವಿಧಿಸುವಂತೆ ಘೋಷಣೆ ಕೂಗಿದರು.

ಮುಖಂಡ ರಂಗನಾಥ್ ಮಾತನಾಡಿ, ‘ಕನ್ಹಯ್ಯ ಲಾಲ್ ಅವರು ಟೈಲರ್ ವೃತ್ತಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅವರನ್ನುಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹಂತಕರನ್ನು ಗಲ್ಲೆಗೇರಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಯೋಗೀಶ್‌ ರಾಜ್ ಅರಸ್, ಶಶಾಂಕ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.