ADVERTISEMENT

ಅಮೃತ್ ಮಹಲ್: ಒತ್ತುವರಿ ಗುರುತಿಸಲು ಸೂಚನೆ

ರಾಜೇಂದರ್‌ ಕುಮಾರ ಕಟಾರಿಯಾ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 14:52 IST
Last Updated 28 ಏಪ್ರಿಲ್ 2025, 14:52 IST
ಜಿ.ಪಂ.ಸಭಾಂಗಣದಲ್ಲಿ ನಡೆದ ಜಿಲ್ಲೆಯ ಸಮಗ್ರ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆ
ಜಿ.ಪಂ.ಸಭಾಂಗಣದಲ್ಲಿ ನಡೆದ ಜಿಲ್ಲೆಯ ಸಮಗ್ರ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆ   

ಚಿಕ್ಕಮಗಳೂರು: ‘ಅಮೃತ್ ಮಹಲ್ ಕಾವಲು ಜಮೀನು ಒತ್ತುವರಿಯಾಗಿದ್ದರೆ ತೆರವುಗೊಳಿಸಿ ಉಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್‌ ಕುಮಾರ ಕಟಾರಿಯಾ ಸೂಚನೆ ನೀಡಿದರು.‌

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಅಮೃತ್ ಮಹಲ್ ಕಾವಲು ಹೆಸರಿನಲ್ಲಿ ಒಟ್ಟು 30 ಸಾವಿರ ಎಕರೆಗೂ ಹೆಚ್ಚು ಜಾಗ ಇದೆ. ಈ ಪೈಕಿ ಸಾಕಷ್ಟು ಒತ್ತುವರಿಯಾಗಿದೆ. ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಒತ್ತುವರಿಯಾಗಿರುವ ಜಾಗ ಎಷ್ಟು, ತೆರವಿಗೆ ಕೈಗೊಂಡ ಕ್ರಮ ಏನು ಎಂಬುದನ್ನು ತಿಳಿಸಬೇಕು’ ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ADVERTISEMENT

‘ದಾಖಲೆಗಳು ಸಿಗುತ್ತಿಲ್ಲ ಎಂದು ಸುಮ್ಮನೆ ಕುಳಿತರೆ ಆಗುವುದಿಲ್ಲ. ಸರ್ವೆ ನಂಬರ್ ಆಧರಿಸಿ ನಕ್ಷೆಗಳನ್ನು ಹುಡುಕಬೇಕು. ಅಮೃತ್ ಮಹಲ್ ಕಾವಲು ಜಾಗವನ್ನು ಉಳಿಸಲೇಬೇಕು’ ಎಂದು ತಾಕೀತು ಮಾಡಿದರು.

‘ಜಿಲ್ಲೆಯಲ್ಲಿ ಕೆರೆಗಳ ಒತ್ತುವರಿ ತೆರವು ವಿಷಯದಲ್ಲಿ ಹಲವು ಬಾರಿ ಸಭೆ ನಡೆಸಿದ್ದರೂ ಸಂಪೂರ್ಣ ತೆರವಾಗಿಲ್ಲ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಬಳಿ ದಾಖಲೆಗಳೇ ಇಲ್ಲ. ಇದು ಸರಿಯಾದ ಕ್ರಮವಲ್ಲ, ನಿಮ್ಮ ಇಲಾಖೆ ಜಾಗವನ್ನು ಉಳಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ ಅಲ್ಲವೇ’ ಎಂದು ಪ್ರಶ್ನಿಸಿದರು.

ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಮಾತನಾಡಿ, ‘ಕಂದಾಯ, ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸೇರಿದ 1,810 ಕೆರೆಗಳಿದ್ದು, ಈಗಾಗಲೇ 1,744 ಕೆರೆಗಳ ಸರ್ವೆ ಕಾರ್ಯ ಪೂರ್ಣಗೊಂಡಿದೆ’ ಎಂದು ಮಾಹಿತಿ ನೀಡಿದರು.

777 ಕೆರೆಗಳ ಒತ್ತುವರಿ ಗುರುತಿಸಲಾಗಿದ್ದು, 301 ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ. ಒತ್ತುವರಿ ತೆರವುಗೊಳಿಸಲು ಇನ್ನೂ 476 ಕೆರೆಗಳು ಬಾಕಿಯಿವೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 124 ಕೆರೆಗಳಿದ್ದು, ಈ ಪೈಕಿ 34 ಕೆರೆಗಳು ಹಿಡುವಳಿ, ಅರಣ್ಯ, ಗೋಮಾಳ ಜಮೀನಿನಲ್ಲಿವೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಬಿತ್ತನೆಗೆ ಭೂಮಿ ಹದ ಮಾಡಿಕೊಳ್ಳುತ್ತಿದ್ದಾರೆ. ಬಿತ್ತನೆ ಬೀಜ ಮತ್ತು ರಸಗೊಬ್ಬರಕ್ಕೆ ಕೊರತೆ ಇಲ್ಲ ಎಂದು ಕೃಷಿ ಜಂಟಿ ನಿರ್ದೇಶಕಿ ಸುಜಾತಾ ಸಭೆಗೆ ಮಾಹಿತಿ ನೀಡಿದರು.

ದಾಖಲೆ ನಾಪತ್ತೆ: ಎಫ್‌ಐಆರ್ ದಾಖಲಿಸಲು ಸೂಚನೆ

‘ಎನ್.ಆರ್.ಪುರ ತಾಲ್ಲೂಕು ಕಚೇರಿಯ ರೆಕಾರ್ಡ್‌ ರೂಂನಲ್ಲಿ ದಾಖಲೆಗಳು ಕಾಣೆಯಾಗಿರುವ ಬಗ್ಗೆ ಇಂದೇ ಎಫ್‌ಐಆರ್‌ ದಾಖಲಿಸಬೇಕು’ ಎಂದು ತನುಜಾ ಟಿ.ಸವದತ್ತಿ ಅವರಿಗೆ ಕಟಾರಿಯಾ ಸೂಚನೆ ನೀಡಿದರು. ‘ರೆಕಾರ್ಡ್‌ ರೂಂ ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿ ಯಾರು ಅಲ್ಲಿದ್ದ ದಾಖಲೆಗಳು ಕಾಣೆಯಾಗಿವೆ ಅಥವಾ ಕಳ್ಳತನ ಆಗಿವೆ ಎಂದರೆ ಏನರ್ಥ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ‘ಮನೆಯಲ್ಲಿ ಕಳ್ಳತನವಾಗಿದೆ ಎಂದು ಸುಮ್ಮನಿದ್ದರೆ ವಸ್ತುಗಳು ವಾಪಸ್ ಸಿಗುತ್ತವೆಯೇ  ಮೊದಲನೆಯದಾಗಿ ಪೊಲೀಸರಿಗೆ ದೂರು ನೀಡಿ ಎಫ್‌ಐಆರ್ ದಾಖಲಿಸಬೇಕು. ಈ ಕೆಲಸವನ್ನೂ ಮಾಡಿಲ್ಲ ಎಂದು ಹೇಗೆ’ ಎಂದು ಪ್ರಶ್ನಿಸಿದರು. ‘ಇಂದೇ ಎಫ್ಐಆರ್ ದಾಖಲಿಸಿ ಅದರ ಪ್ರತಿಯನ್ನು ಜಿಲ್ಲಾಧಿಕಾರಿ ಮೂಲಕ ನನಗೆ ಕಳುಹಿಸಬೇಕು. ಜಿಲ್ಲಾಧಿಕಾರಿ ಕೂಡ ಈ ಬಗ್ಗೆ ಗಮನ ಹರಿಸಬೇಕು’ ಎಂದು ಸೂಚನೆ ನೀಡಿದರು.

ಸಂಪೂರ್ಣ ಇ–ಕಚೇರಿಯಾಗಬೇಕು

ಜಿಲ್ಲೆಯ ಎಲ್ಲಾ ಕಚೇರಿಗಳಲ್ಲೂ ಶೇ 100ರಷ್ಟು ಇ–ಕಚೇರಿಯಾಗಬೇಕು ಎಂದು ರಾಜೇಂದರ್‌ ಕುಮಾರ್ ಕಟಾರಿಯಾ ತಿಳಿಸಿದರು. ಪ್ರಾಯೋಗಿಕವಾಗಿ ಚಿಕ್ಕಮಗಳೂರು ಜಿಲ್ಲೆಯನ್ನು ಮೊದಲ ಹಂತದಲ್ಲಿ ಪರಿಗಣಿಸಲಾಗಿದೆ. ಎಲ್ಲಾ ಸಿಬ್ಬಂದಿಗೂ ತರಬೇತಿ ನೀಡುವ ಕೆಲಸ ಆಗಬೇಕು. ನಾಡ ಕಚೇರಿಯಿಂದಲೇ ಇ–ಕಚೇರಿ ಆರಂಭವಾಗಬೇಕು ಎಂದು ತಾಕೀತು ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.