ADVERTISEMENT

ಕಾಫಿ ಹೂವರಳಿ ಕಂಗೊಳಿಸುತ್ತಿರುವ ಮಲೆನಾಡು

ಹದವಾದ ಮಳೆ: ಬೆಳೆಗಾರರ ಮೊಗದಲ್ಲಿ ಮಂದಹಾಸ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2025, 11:35 IST
Last Updated 20 ಮಾರ್ಚ್ 2025, 11:35 IST
ಮೂಡಿಗೆರೆ ತಾಲ್ಲೂಕಿನ ಗುತ್ತಿ ಗ್ರಾಮದಲ್ಲಿ ಹೂವಾಗಿರುವ ಕಾಫಿ ತೋಟ
ಮೂಡಿಗೆರೆ ತಾಲ್ಲೂಕಿನ ಗುತ್ತಿ ಗ್ರಾಮದಲ್ಲಿ ಹೂವಾಗಿರುವ ಕಾಫಿ ತೋಟ   

ಮೂಡಿಗೆರೆ: ತಾಲ್ಲೂಕಿನಲ್ಲಿ ಕಳೆದ ವಾರ ಸುರಿದ ಮಳೆಯು ಕಾಫಿ ಬೆಳೆಗೆ ಹದವಾಗಿದ್ದು, ಎಲ್ಲೆಡೆ ಕಾಫಿ ಹೂವು ಅರಳಿ ತೋಟಗಳು ಕಂಗೊಳಿಸುತ್ತಿವೆ.

ಪ್ರತಿ ವರ್ಷವೂ ಮಲೆನಾಡಿನಲ್ಲಿ ಮಾರ್ಚ್ ತಿಂಗಳಿನಲ್ಲಿ‌ ಮಳೆ ಬೀಳುವುದು ವಾಡಿಕೆ. ಈ ಮಳೆಯು ಮಾರ್ಚ್ ಅಂತ್ಯದಲ್ಲಿ ಬಂದರೆ ಕಾಫಿಗೆ ಅಷ್ಟೇನೂ ಉಪಯೋಗವಾಗುವುದಿಲ್ಲ. ಏಕೆಂದರೆ ತಾಲ್ಲೂಕಿನಲ್ಲಿ ರೊಬಸ್ಟಾ ಕಾಫಿಯ ಪ್ರಮಾಣ ಹೆಚ್ಚಾಗಿದ್ದು, ಜನವರಿ ಅಂತ್ಯ, ಫೆಬ್ರುವರಿ ಮೊದಲ ವಾರದಿಂದಲೇ ಕಾಫಿ ಮೊಗ್ಗಾಗಲು ಪ್ರಾರಂಭಿಸುತ್ತದೆ. ಈ ಅವಧಿಯಲ್ಲಿ ನೀರಾಯಿಸದಿದ್ದರೆ ಮೊಗ್ಗು ಗಿಡದಲ್ಲಿಯೇ ಒಣಗುವುದರಿಂದ ಮುಂದಿನ ಫಸಲಿಗೆ ಹಾನಿಯಾಗುತ್ತದೆ.

ಹಾಗಾಗಿಯೇ ಫೆಬ್ರುವರಿ ಮಧ್ಯಭಾಗದಿಂದ ರೊಬಸ್ಟಾ ಕಾಫಿಗೆ ನೀರಾಯಿಸಲು ಮುಂದಾಗುತ್ತಾರೆ. ಈ ಬಾರಿ ಮಾರ್ಚ್ ‌ಮೊದಲ‌ ವಾರಾಂತ್ಯದಲ್ಲಿಯೇ ಮಳೆಯಾಗಿದ್ದರಿಂದ ಕಾಫಿಗೆ ಉತ್ತಮವಾಗಿದ್ದು, ರೊಬಸ್ಟಾದೊಂದಿಗೆ ಅರೇಬಿಕಾ ತಳಿಯೂ ಹೂವಾಗಲು ಮಳೆ ನೆರವಾಗಿದೆ. ಇದರಿಂದ ಬೆಳೆಗಾರರಿಗೆ ನೀರಾಯಿಸುವ ಖರ್ಚು ಉಳಿಕೆಯಾಗಿದ್ದು, ಮುಂದಿನ ಎಂಟತ್ತು ದಿನಗಳಲ್ಲಿ ಮತ್ತೊಮ್ಮೆ ಮಳೆಯಾದರೆ ಕಾಫಿಗೆ ಹಿನ್ನೀರು ಸಿಕ್ಕಂತಾಗಿ ಹೆಚ್ಚು ಉಪಯೋಗವಾಗುತ್ತದೆ.

ADVERTISEMENT

‘ಕಳೆದ ವರ್ಷ ಮಳೆ ವ್ಯತ್ಯಾಸದಿಂದ ಎಲ್ಲೆಡೆ ಬೆಳೆಯ ಪ್ರಮಾಣ ಗಣನೀಯವಾಗಿ ಕುಗ್ಗಿದೆ. ಅದರೂ ಬೆಲೆ ಏರಿಕೆಯಾಗಿರುವುದರಿಂದ ಹೆಚ್ಚಿನ ಲಾಭವಾಗದಿದ್ದರೂ ನಷ್ಟದ ಸುಳಿಯಿಂದ ಹೊರ ಬರಲು ನೆರವಾಗಿದೆ’ ಎಂದು ಬೆಳೆಗಾರರು ಹೇಳುತ್ತಾರೆ.

‘ಕೆಲವು ಭಾಗಗಳಲ್ಲಿ ಈ ವಾರ ಎರಡು ದಿವಸ ಮಳೆಯಾಗಿದೆ. ಇದರಿಂದ ಹೆಚ್ಚು ಅನುಕೂಲವಾಗಿದೆ. ಮುಂದಿನ ಹದಿನೈದು ದಿನದಲ್ಲಿ ಮತ್ತೊಂದು ಸುತ್ತು ಮಳೆಯಾದರೆ ಹೂವಾಗಿರುವ ಕಾಫಿ ಉಳಿಯುತ್ತದೆ. ಇಲ್ಲದಿದ್ದರೆ ಏಕಕಾಲಿಕವಾಗಿ ಹಿನ್ನೀರು‌ ಹಾಯಿಸಲು ಸಾಧ್ಯವಾಗದೇ, ಕಾಫಿ ಹೂವು ಒಣಗಿ ಹೋಗಬಹುದು’ ಎನ್ನುತ್ತಾರೆ ಕಾಫಿ ಬೆಳೆಗಾರ ಮಹೇಶ್.

‘ತಾಲ್ಲೂಕಿನಲ್ಲಿ ಪ್ರತಿ ವರ್ಷವೂ ಹವಾಮಾನ ವೈಪರೀತ್ಯದಿಂದ ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ. ನಾಲ್ಕೈದು ವರ್ಷಗಳಿಂದ ಬೆಳೆಗಾರರಿಗೆ ನಷ್ಟದ ಅನುಭವವೇ ಹೆಚ್ಚು. ಈಗ ಮಳೆಯಾಗಿ‌ ಹೂವಾಗಿದ್ದರೂ, ಹಿನ್ನೀರಿಗೆ ಮಳೆಯಾಗದಿದ್ದರೆ ಮತ್ತೆ ಬೆಳೆಗಾರರು ಕಹಿಯನ್ನೇ ಅನುಭವಿಸಬೇಕಾಗುತ್ತದೆ. ಹದಿನೈದು ದಿನದಲ್ಲಿ ಕನಿಷ್ಠ ಒಂದಿಂಚಾದರೂ ಮಳೆಯಾದರೆ ಅನುಕೂಲವಾಗುತ್ತದೆ’ ಎಂದು ಕಾಫಿ ವರ್ತಕ ಪ್ರವೀಣ್ ಮಗ್ಗಲಮಕ್ಕಿ ಹೇಳುತ್ತಾರೆ.

ಇಡೀ ತಾಲ್ಲೂಕಿನಲ್ಲಿ ಒಂದೇ ಬಾರಿಗೆ ಕಾಫಿ ಹೂವು ಅರಳಿರುವುದು ಜೇನು ನೊಣಗಳಿಗೂ ಮಕರಂದ ಹೀರಲು ಅನುಕೂಲವಾಗಿದೆ. ಮುಂದಿನ ಮೂರು ದಿನ ಹೂವಿನ‌ ಸೊಬಗನ್ನು ಕಣ್ತುಂಬಿಕೊಳ್ಳಬಹುದಾಗಿದೆ. ವಾರದಲ್ಲಿ ಮತ್ತೊಮ್ಮೆ ಮಳೆಯಾದರೆ ಸಾಕು ಎಂಬುದು ಬೆಳೆಗಾರರ ಪ್ರಾರ್ಥನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.