ಕಳಸ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೊಬಸ್ಟಾ ಕಾಫಿ ಬೆಲೆ ಗಗನಕ್ಕೆ ಏರಿದೆ. ಆದರೆ, ಮಳೆ ಕೊರತೆ ಮತ್ತು ಹೆಚ್ಚುತ್ತಿರುವ ತಾಪಮಾನದಿಂದ ಕಾಫಿಗೆ ಸಂಕಷ್ಟ ಎದುರಾಗಿದೆ. ಸಾಮಾನ್ಯವಾಗಿ ಮಾರ್ಚ್ 15ರ ಒಳಗೆ ಬೇಸಿಗೆ ಮಳೆ ಲಭಿಸಿ, ರೊಬಸ್ಟಾ ಕಾಫಿ ಗಿಡದಲ್ಲಿ ಹೂವು ಅರಳಿ ಕಾಯಿಕಟ್ಟುವುದು ವಾಡಿಕೆ. ಆದರೆ, ಈ ಬಾರಿ ಮಳೆ ಆಗದ ಕಾರಣ ಮತ್ತು ಬಿಸಿಲಿನ ಝಳ ಹೆಚ್ಚುತ್ತಿರುವುದರಿಂದ ಬೆಳೆಹಾನಿ ಸಾಧ್ಯತೆ ಹೆಚ್ಚಿದೆ.
ಕಳಸ ತಾಲ್ಲೂಕಿನಲ್ಲಿ ಬಲಿಗೆ, ಮರಸಣಿಗೆ, ಎಡೂರು, ಮುನ್ನೂರುಪಾಲು, ಬಾಳೆಹೊಳೆ, ಹಿರೇಬೈಲು ಮತ್ತು ಕಳಕೋಡು ಹೊರತುಪಡಿಸಿದರೆ ಉಳಿದೆಡೆ ಮಳೆ ಆಗಿಲ್ಲ. ಕಳಸದಲ್ಲಿ ಈಚೆಗೆ ಎರಡು ಬಾರಿ ತುಂತುರು ಮಳೆಯಾಗಿದೆ. ಇದು ಕಾಫಿ ಹೂವು ಅರಳಲು ಸಾಕಾಗಿಲ್ಲ. ಕೆಲವೆಡೆ ಕಾಫಿ ಹೂವು ಅರಳಿತಾದರೂ, ನಂತರ ತೇವಾಂಶದ ಕೊರತೆಯಿಂದ ಹೀಚು ಕಟ್ಟಲಾರದೆ ಹೂವು ಒಣಗಿ ಹೋಗುತ್ತಿವೆ.
'ಕಾಫಿಗೆ ಬೆಲೆ ಏರಿದ ಖುಷಿಯನ್ನು ಅನುಭವಿಸುವಂತಿಲ್ಲ. ಮಳೆ ಕೊರತೆ ಮತ್ತು ಉಷ್ಣಾಂಶ ಏರಿಕೆಯಿಂದ ಮುಂದಿನ ವರ್ಷದ ಫಸಲಿನ ನಷ್ಟದ ಆತಂಕ ಆರಂಭವಾಗಿದೆ' ಎಂದು ಅಬ್ಬುಗುಡಿಗೆಯೆ ಕಾಫಿ ಬೆಳೆಗಾರ ಸುಧೀರ್ ಹೇಳಿದರು. ಕಾಫಿ ಹೂವು ಅರಳಿರುವ ಕಡೆ, ಅದನ್ನು ಸಂರಕ್ಷಿಸಿಕೊಳ್ಳಲು ಕಾಫಿ ಎಲೆಗಳಿಗೆ ಗೊಬ್ಬರ ಮತ್ತು ಸೂಕ್ಷ್ಮ ಪೋಷಕಾಂಶ ಸಿಂಪಡಿಸುವಂತೆ ಕಾಫಿ ಮಂಡಳಿ ಸಲಹೆ ನೀಡಿದೆ. ಆದರೆ, ಹೆಚ್ಚಿನ ಬೆಳೆಗಾರರು ಈ ಸಲಹೆ ಪಾಲಿಸುತ್ತಿಲ್ಲ.
ತಾಪಮಾನದಲ್ಲಿ ವ್ಯತ್ಯಾಸ
ಉಷ್ಣಾಂಶ ಏರಿಕೆ ರೊಬಸ್ಟ ಕಾಫಿ ಮಿಡಿಗಳಿಗೆ ಹಾನಿ ತರುತ್ತಿದೆ. ಹಗಲು ಮತ್ತು ರಾತ್ರಿ ತಾಪಮಾನದಲ್ಲಿ ತುಂಬಾ ವ್ಯತ್ಯಾಸ ಆಗುವುದು ಕಾಫಿ ಬೆಳೆಗೆ ಒಳ್ಳೆಯದಲ್ಲ ಎಂದು ಅನುಭವಿ ಬೆಳೆಗಾರ ಹೊಸೂರಿನ ವಿಶ್ವನಾಥ ಗೌಡ ಹೇಳಿದರು. ‘ಮಳೆ ಕೊರತೆಯಿಂದಾಗಿ ಈ ಬಾರಿ ಸಣ್ಣ ಹಳ್ಳಗಳೆಲ್ಲ ಬತ್ತಿವೆ. ಇದರಿಂದ ಕಾಫಿ ತೋಟಕ್ಕೆ ನೀರು ಉಣಿಸುವುದು ಸವಾಲಾಗಿದೆ. ಉತ್ತಮ ಧಾರಣೆ ಇದ್ದರೂ, ಬೆಳೆ ಉಳಿಸಿಕೊಳ್ಳಲು ಪರದಾಡುವಂತಾಗಿದೆ’ ಎನ್ನುತ್ತಾರೆ ರೈತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.