ADVERTISEMENT

ಹಲ್ಲೆ ಆರೋಪ; ಪಿಎಸ್‌ಐ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 15:23 IST
Last Updated 23 ಅಕ್ಟೋಬರ್ 2018, 15:23 IST

ಚಿಕ್ಕಮಗಳೂರು: ನಗರ ಪೊಲೀಸ್‌ ಠಾಣೆ ಪಿಎಸ್‌ಐ ರಘು ಅವರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಬಿಜೆಪಿ ಮುಖಂಡ ಶಿವಣ್ಣ ಅರೆಗುಡಿಗೆ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದೆ.

ಶಿವಣ್ಣ ಅವರ ಸಂಬಂಧಿಕರು, ಮುಖಂಡರು ದೂರು ಪ್ರತಿಯನ್ನು ಎಸ್ಪಿ ಅವರಿಗೆ ಮಂಗಳವಾರ ನೀಡಿದ್ದಾರೆ.

‘ಬೆಂಗಳೂರಿಗೆ ಹೋಗಲು ಇದೇ 21ರಂದು ರಾತ್ರಿ 11.55ರ ಹೊತ್ತಿಗೆ ನಗರದ ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆ ಬಂದಿದ್ದಾಗ, ಮಪ್ತಿಯಲ್ಲಿದ್ದ ಪೊಲೀಸ್‌ ಕಾನ್‌ಸ್ಟೆಬಲ್‌ ಮತ್ತು ಅವರ ಸ್ನೇಹಿತರು ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡಿದರು. ಸ್ಥಳಕ್ಕೆ ಬಂದ ಪಿಎಸ್‌ಐ ರಘು ಅವರು ಜೀಪಿನಲ್ಲಿ ಠಾಣೆಗೆ ಒಯ್ದು ಹಿಗ್ಗಾಮುಗ್ಗಾ ಥಳಿಸಿದರು. ಥಳಿತದಿಂದ ಎಡಭಾಗದ ಎಡಗಣ್ಣಿಗೆ ಗಾಯವಾಗಿದೆ, ಬಲಗಣ್ಣಿಗೂ ಪೆಟ್ಟಾಗಿದೆ’ ಎಂದು ಶಿವಣ್ಣ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ನನ್ನ ಬಳಿ ಇದ್ದ ₹ 4,800 ನಗದು, ಕೊರಳಿನಲ್ಲಿದ್ದ ಚಿನ್ನದ ಸರ ಥಳಿತ ಸಂದರ್ಭದಲ್ಲಿ ಕಾಣೆಯಾಗಿದೆ. ಸೆಲ್‌ ಫೋನ್‌ ಅನ್ನು ಕಿತ್ತುಕೊಂಡು ಬಿಸಾಕಿ ಒಡೆದು ಹಾಕಿದ್ದಾರೆ. ಪಿಎಸ್‌ಐ ಮತ್ತು ಕಾನ್‌ಸ್ಟೆಬಲ್‌ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

*ಹಿರಿಯ ಅಧಿಕಾರಿಯೊಬ್ಬರು ಪ್ರಕರಣದ ವಿಚಾರಣೆ ಮಾಡುತ್ತಿದ್ದಾರೆ. ವಿವರಣೆ, ಪುರಾವೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು. ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಾಗುವುದು.

–ಹರೀಶ್‌ ಪಾಂಡೆ,ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.