ADVERTISEMENT

ಜಿಲ್ಲೆಯ ಜನರ ದಿಕ್ಕು ತಪ್ಪಿಸುವ ಕೆಲಸ ಸಲ್ಲದು

ಜೀವರಾಜ್‌ ವಿರುದ್ಧ ಡಾ.ಅಂಶುಮಂತ್‌ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 5:59 IST
Last Updated 23 ನವೆಂಬರ್ 2020, 5:59 IST
ಡಾ.ಕೆ.ಪಿ.ಅಂಶುಮಂತ್
ಡಾ.ಕೆ.ಪಿ.ಅಂಶುಮಂತ್   

ನರಸಿಂಹರಾಜಪುರ: ‘ಭದ್ರಾ ಹುಲಿ ಯೋಜನೆ ಮತ್ತು ಕುದುರೆಮುಖ ಹುಲಿ ಯೋಜನೆಯನ್ನು 2011ರಲ್ಲಿ ಕೈಬಿಡಲಾಗಿದೆ ಎಂದು ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ಸಹಿ ಇರುವ ಪತ್ರದ ಪ್ರತಿ ಹಂಚುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸವನ್ನು ಮಾಜಿ ಶಾಸಕ ಡಿ.ಎನ್.ಜೀವರಾಜ್ ಮಾಡುತ್ತಿದ್ದಾರೆ’ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ
ಡಾ.ಕೆ.ಪಿ.ಅಂಶುಮಂತ್ ಆರೋಪಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಈ 2 ಹುಲಿ ಯೋಜನೆಗಳಿಗೆ ಅನುಮೋದನೆಯಾಗಿರುವ ಬಗ್ಗೆ 2011, ಫೆಬ್ರುವರಿ 12ರ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಈ ರಾಜ್ಯಪತ್ರ ರದ್ದಾಗಿರುವ ಯಾವುದೇ ದಾಖಲೆಗಳಿಲ್ಲ. ಹಾಗಾಗಿ ಜನರು ಗೊಂದಲ್ಲಿದ್ದಾರೆ. ಜನರ ದಿಕ್ಕು ತಪ್ಪಿಸುವ ಕೆಲಸ ಮಾಜಿ ಶಾಸಕರು ಮಾಡಬಾರದು’ ಎಂದರು.

‘ನಾನೇ ಸರ್ಕಾರ ಎಂಬ ರೀತಿಯಲ್ಲಿ ಸಾರ್ವಜನಿಕವಾಗಿ ವರ್ತಿಸುತ್ತಿದ್ದ ಮಾಜಿ ಶಾಸಕರಿಗೆ 2008ರಲ್ಲಿ ಬಫರ್ ಝೋನ್‌ಗೆ ಗ್ರಾಮಗಳನ್ನು ಸೇರ್ಪಡಿಸಿಕೊಳ್ಳಲು ಆಕ್ಷೇಪಣೆಯಿಲ್ಲ ಎಂದು 7 ಗ್ರಾಮ ಪಂಚಾಯಿತಿಯವರು ಒಂದೇ ಬರವಣಿಗೆ ಇರುವ ಪತ್ರ ಬರೆದುಕೊಟ್ಟಿರುವುದು ಗಮನಕ್ಕೆ ಬರದಿರಲು ಸಾಧ್ಯವೇ? ಮಾಹಿತಿ ಇದ್ದರೂ ಯಾರ ಹಿತ ಕಾಪಾಡಲು ಮೌನ ವಹಿಸಿದ್ದರು’ ಎಂದು ಪ್ರಶ್ನಿಸಿದರು.

ADVERTISEMENT

‘ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸುರೇಶ್ ಕುಮಾರ್ ಅವರು ಸಹ ಭದ್ರಾ ಹಾಗೂ ಕುದುರೆಮುಖ ಹುಲಿಯೋಜನೆ ರದ್ದಾಗಿದೆ ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ದಾಖಲೆ ಬಹಿರಂಗಪಡಿಸಲಿ’ ಎಂದು ಆಗ್ರಹಿಸಿದರು.

‘ಪರಿಸರ ಸೂಕ್ಷ್ಮವಲಯ ಕೈಬಿಡುವಂತೆ ಮುಖ್ಯಮಂತ್ರಿಯನ್ನು ಹೋರಾಟ ಸಮಿತಿ ಭೇಟಿ ಮಾಡಿ 1 ತಿಂಗಳೂ ಕಳೆದರೂ ಯಾವುದೇ ಫಲಿತಾಂಶ ಬಂದಿಲ್ಲ. ಸಚಿವ ಸಂಪುಟ ಉಪಸಮಿತಿ ನೇಮಿಸಲಾಗಿದೆ ಎಂದು ಹೇಳಲಾಗಿದೆ. ಯಾವುದಕ್ಕೆ ನೇಮಿಸಲಾಗಿದೆ ಎಂಬ ಸ್ಪಷ್ಟತೆಯೂ ಇಲ್ಲ. ಹಿಂದೆಯೂ ಇಂತಹ ಹಲವು ಸಮಿತಿಗಳು ನೇಮಕವಾಗಿದೆ’ ಎಂದರು.

ಗೋಷ್ಠಿಯಲ್ಲಿ ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಗೇರುಬೈಲು ನಟರಾಜ್, ಮುಖಂಡರಾದ ಉಪೇಂದ್ರ, ಮುಕುಂದ, ಪ್ರಶಾಂತ್ ಶೆಟ್ಟಿ, ಸುನಿಲ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.