ADVERTISEMENT

ಚಿಕ್ಕಮಗಳೂರು: ಬಹುತೇಕ ಚಟುವಟಿಕೆಗಳು ಸ್ತಬ್ಧ

ಕಾಫಿನಾಡು: ವಾರಾಂತ್ಯ ಕರ್ಫ್ಯೂ

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 7:32 IST
Last Updated 9 ಜನವರಿ 2022, 7:32 IST
ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದಲ್ಲಿ ಜನರ ಓಡಾಟ ಕಡಿಮೆ ಇತ್ತು.
ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದಲ್ಲಿ ಜನರ ಓಡಾಟ ಕಡಿಮೆ ಇತ್ತು.   

ಚಿಕ್ಕಮಗಳೂರು: ಕೋವಿಡ್‌–19 ಹರಡದಂತೆ ನಿಯಂತ್ರಣಕ್ಕೆ ವಿಧಿಸಿರುವ ವಾರಾಂತ್ಯ ಕರ್ಫ್ಯೂ ಮೊದಲ ದಿನ ಶನಿವಾರ ಜಿಲ್ಲೆಯಲ್ಲಿ ಅರ್ಧಕ್ಕೂ ಹೆಚ್ಚು ಚಟುವಟಿಕೆಗಳು ಸ್ತಬ್ಧವಾಗಿದ್ದವು. ಜನರು – ವಾಹನಗಳ ಓಡಾಟ ಕಡಿಮೆ ಇತ್ತು.

ಪೆಟ್ರೋಲ್‌ ಬಂಕ್‌, ಹಾಲಿನ ಮಳಿಗೆ, ಹಣ್ಣು– ತರಕಾರಿ– ದಿನಸಿ ಅಂಗಡಿ, ಆಸ್ಪತ್ರೆ, ಕ್ಲಿನಿಕ್‌, ಔಷಧ ಮಳಿಗೆ ಮೊದಲಾದವು ತೆರೆದಿದ್ದವು. ಹೋಟೆಲ್‌, ರೆಸ್ಟೊರೆಂಟ್‌, ಕ್ಯಾಂಟೀನ್‌, ಬೇಕರಿ, ಆಹಾರ ಕೇಂದ್ರಗಳು ತೆರೆದಿದ್ದವು, ಆಹಾರ ಪಾರ್ಸೆಲ್‌ ಒಯ್ಯಲು ಅವಕಾಶ ಕಲ್ಪಿಸಲಾಗಿತ್ತು.

ಎಲೆಕ್ಟ್ರಾನಿಕ್ಸ್‌, ಬಟ್ಟೆ, ಪುಸ್ತಕ, ಲೇಖನ ಸಾಮಗ್ರಿ, ಪ್ರಿಂಟಿಂಗ್‌ ಪ್ರೆಸ್‌, ಹಾರ್ಡ್‌ವೇರ್‌, ಪೀಠೋಪಕರಣ ಮೊದಲಾದ ಅಂಗಡಿಗಳುಮುಚ್ಚಿದ್ದವು. ಕಚೇರಿಗಳು ಮುಚ್ಚಿದ್ದವು.

ADVERTISEMENT

ನಗರದ ಎಂ.ಜಿ ರಸ್ತೆ, ಐ.ಜಿ ರಸ್ತೆ, ಮಾರುಕಟ್ಟೆ ರಸ್ತೆ, ರತ್ನಗಿರಿ ಗಿರಿ ರಸ್ತೆ ಸಹಿತ ವಿವಿಧ ರಸ್ತೆಗಳಲ್ಲಿ ಜನ–ವಾಹನ ಸಂಚಾರ ವಿರಳವಾಗಿತ್ತು. ಪಾದಚಾರಿ ಮಾರ್ಗಗಳಲ್ಲಿ ಕೆಲವೆಡೆ ಬಿಡಾಡಿಗಳು ಪವಡಿಸಿದ್ದು ಕಂಡುಬಂತು.

ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ನಿಲ್ದಾಣದಿಂದ ಕೆಲವು ಬಸ್‌ಗಳು ಸಂಚರಿಸಿದವು. ಆಟೋಗಳು, ಟ್ಯಾಕ್ಸಿಗಳು, ಸರಕು ಸಾಗಣೆ ವಾಹನಗಳ ಓಡಾಟ ಇತ್ತು.

ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗಿತ್ತು. ಪೊಲೀಸರನ್ನು ನಿಯೋಜಿಸಲಾಗಿತ್ತು. ಪೊಲೀಸರು ವಾಹನ, ಜನರನ್ನು ತಡೆದು ಓಡಾಟದ ಕಾರಣ ವಿಚಾರಿಸಿದರು. ಮಾಸ್ಕ್‌ ವಿನಾಕಾರಣ ಓಡಾಟ, ಮಾಸ್ಕ್‌ ಧರಿಸದವರಿಗೆ ದಂಡ ವಿಧಿಸಿದರು. ನಗರದ ವಿವಿಧ ರಸ್ತೆಗಳಲ್ಲಿ ಪೊಲೀಸರು ವಾಹನಗಳಲ್ಲಿ ಗಸ್ತು ತಿರುಗಿದರು.

‘ಕೋವಿಡ್‌ ಬಿಟ್ಟುಬಿಡದೆ ಕಾಡುತ್ತಿದೆ. ಪದೇಪದೇ ನಿರ್ಬಂಧ ವಿಧಿಸುವುದರಿಂದ ಜನರು ಸಂಕಷ್ಟ ಅನುಭವಿಸುವಂತಾಗಿದೆ. ಅವತ್ತಿನ ತುತ್ತಿಗೆ ಅವತ್ತಿನ ದುಡಿಮೆಯನ್ನೇ ಅವಲಂಬಿಸಿರುವ ಕುಟುಂಬಗಳಿಗೆ ಬಹಳ ಕಷ್ಟ ತಂದೊಡ್ಡಿದೆ’ ಎಂದು ಲಕ್ಷ್ಮೀಶನಗರದ ಕಾರ್ಮಿಕ ರಾಮಣ್ಣ ಅಳಲು ತೋಡಿಕೊಂಡರು.

ಆಸ್ಪತ್ರೆ, ಕ್ಲಿನಿಕ್‌, ಪ್ರಯೋಗಾಲಯ, ಅಂಚೆ ಕಚೇರಿ ಸಹಿತ ವಿವಿಧೆಡೆ ಜನರು ಕಡಿಮೆ ಇದ್ದರು. ಹಾಲು, ಹೂವು, ಹಣ್ಣು, ತರಕಾರಿ ವ್ಯಾಪಾರ ಮಾಮೂಲಿಗಿಂತ ಕಡಿಮೆ ಇತ್ತು. ಗಿರಿ ಶ್ರೇಣಿ ಸಹಿತ ವಿವಿಧ ಪ್ರವಾಸಿ ತಾಣಗಳು ಬಿಕೋ ಎನ್ನುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.