ADVERTISEMENT

‘ಪುತ್ರಿ ಅಂತಿಮ ದರ್ಶನಕ್ಕೂ ಅವಕಾಶ ನೀಡಲಿಲ್ಲ...’

ತಪ್ಪು ಮಾಹಿತಿ ನೀಡಿ ಕೋವಿಡ್‌ ಮಾರ್ಗಸೂಚಿಯಂತೆ ಅಂತ್ಯಸಂಸ್ಕಾರ: ಆರೋಪ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 15:48 IST
Last Updated 31 ಜುಲೈ 2020, 15:48 IST

ಚಿಕ್ಕಮಗಳೂರು: ‘ಪುತ್ರಿ ನಫಿಯಾಗೆ (20) ಕೋವಿಡ್‌–19 ಇದೆ ಎಂದು ತಪ್ಪು ಮಾಹಿತಿ ನೀಡಿ, ಕೋವಿಡ್‌ ಮಾರ್ಗಸೂಚಿಯಂತೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ’ ಎಂದು ಗೌರಿ ಕಾಲುವೆಯ ಸೀಮಾ ಆರೋಪಿಸಿದರು.

ಸೀಮಾ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೋವಿಡ್‌ ಪರೀಕ್ಷೆ ವರದಿ ಪಡೆದುಕೊಂಡಿದ್ದೇವೆ. ವರದಿ ನೆಗೆಟಿವ್‌ ಇದೆ. ಕೋವಿಡ್‌ ಇದೆ ಎಂದು ಪುತ್ರಿಯ ಮುಖ ನೋಡಲು ಅವಕಾಶ ನೀಡಿರಲಿಲ್ಲ’ ಎಂದು ಕಣ್ಣೀರಿಟ್ಟರು.

‘ನಫಿಯಾಗೆ ಡೌನ್‌ ಸಿಂಡ್ರೋಮ್‌ ಇತ್ತು. ಕಫ, ಜ್ವರದಿಂದ ಬಳಲುತ್ತಿದ್ದರಿಂದ ಪುತ್ರಿಯನ್ನು ಜುಲೈ 24ರಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ದೆವು. ಆಸ್ಪತ್ರೆಯವರು ಕೋವಿಡ್‌ ಪರೀಕ್ಷೆಗೆ ಸೂಚಿಸಿದ್ದರಿಂದ ಮಧುವನ ಬಡಾವಣೆಯ ಕೋವಿಡ್‌ ಆರೈಕೆ ಕೇಂದ್ರಕ್ಕೆ ಹೋದೆವು. ಅಲ್ಲಿ ಮಾದರಿ ತೆಗೆಯಲಿಲ್ಲ, ಜಿಲ್ಲಾ ಆಸ್ಪತ್ರೆಗೆ ಕಳಿಸಿದರು. ಅಲ್ಲಿ ವೈದ್ಯರು ಸರಿಯಾಗಿ ಸ್ಪಂದಿಸಲಿಲ್ಲ. ಅಲ್ಲಿಗೆ ಒಯ್ದ ಕೆಲ ಹೊತ್ತಿನಲ್ಲಿ ಪುತ್ರಿ ಮೃತಪಟ್ಟಳು’ ಎಂದರು.

ADVERTISEMENT

‘ಪುತ್ರಿಗೆ ಕೋವಿಡ್‌ ಇದೆ ಎಂದು ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ಹೇಳಿದರು. ಮುಖವನ್ನು ನೋಡಲು ಬಿಡಲಿಲ್ಲ. ನಾವು ವಾಸವಿರುವ ಗೌರಿ ಕಾಲುವೆ ಪ್ರದೇಶವನ್ನು ನಿಯಂತ್ರಿತ ವಲಯವಾಗಿ ಘೋಷಿಸಿದ್ದರು. ಸಮಸ್ಯೆ ಮಾಡಿದರು. ತಪ್ಪು ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

‘ಲಕ್ಷಣಗಳಿದಿದ್ದರಿಂದ; ಮಾರ್ಗಸೂಚಿಯಂತೆ ಅಂತ್ಯಕ್ರಿಯೆ’

‘ರ್ಯಾಪಿಡ್‌ ಅಂಟಿಜೆನ್‌ ಪರೀಕ್ಷೆ (ಆರ್‌ಎಟಿ) ಮಾಡಿದಾಗ ಖಚಿತ ಫಲಿತಾಂಶ ಸಿಗಲಿಲ್ಲ. ಯುವತಿಗೆ ತೀವ್ರ ಉಸಿರಾಟ ತೊಂದರೆ (ಎಸ್‌ಎಆರ್‌ಐ) ಲಕ್ಷಣ ಇತ್ತು. ಲಕ್ಷಣಗಳಿದ್ದರಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಕೋವಿಡ್‌ ಮಾರ್ಗಸೂಚಿಯಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು’ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮೋಹನಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಟ್ರೂ–ನಾಟ್‌’ (ಟ್ರೂ–ನ್ಯೂಕ್ಲಿಕ್‌ ಆ್ಯಸಿಡ್‌ ಆ್ಯಂಪ್ಲಿಕೇಷನ್‌ ಟೆಸ್ಟ್‌) ಯಂತ್ರದಲ್ಲಿ ಪರೀಕ್ಷಿಸಿದಾಗ ನೆಗೆಟಿವ್‌ ಬಂದಿದೆ. ಆರ್‌ಟಿಪಿಸಿಆರ್‌ (ರಿವರ್ಸ್‌ ಟ್ರಾನ್ಸ್‌ಸ್ಕ್ರಿಪ್ಶನ್‌ ಪಾಲಿಮರೇಸ್‌ ಚೈನ್‌ ರಿಯಾಕ್ಷನ್‌) ಪರೀಕ್ಷೆ ಮಾಡಿಲ್ಲ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.