ADVERTISEMENT

ಕನಸಾಗಿಯೇ ಉಳಿದ ಕ್ಷೀರಪಥ ಯೋಜನೆ: ಮಲೆನಾಡಿನಲ್ಲಿಲ್ಲ ಹೈನುಗಾರಿಕೆಗೆ ಉತ್ತೇಜನ

​ಪ್ರಜಾವಾಣಿ ವಾರ್ತೆ
Published 18 ಜೂನ್ 2023, 23:34 IST
Last Updated 18 ಜೂನ್ 2023, 23:34 IST
ಮೂಡಿಗೆರೆ ತಾಲ್ಲೂಕಿನಲ್ಲಿ ಹೈನುಗಾರಿಕೆಗೆ ಸೂಕ್ತ ವ್ಯವಸ್ಥೆಯಿಲ್ಲದೆ ಹಾಲು ನೀಡುವ ಹಸುಗಳು ಸಹ ಬೀಡಾಡಿ ದನಗಳಾಗಿವೆ
ಮೂಡಿಗೆರೆ ತಾಲ್ಲೂಕಿನಲ್ಲಿ ಹೈನುಗಾರಿಕೆಗೆ ಸೂಕ್ತ ವ್ಯವಸ್ಥೆಯಿಲ್ಲದೆ ಹಾಲು ನೀಡುವ ಹಸುಗಳು ಸಹ ಬೀಡಾಡಿ ದನಗಳಾಗಿವೆ   

ಮೂಡಿಗೆರೆ: ತಾಲ್ಲೂಕಿನಲ್ಲಿ ಹೈನುಗಾರಿಕೆ ಉತ್ತೇಜನಕ್ಕೆ ಕ್ಷೀರಪಥ ನಿರ್ಮಿಸಬೇಕು ಎಂಬ ಕೂಗು ಎರಡು ದಶಕಗಳಿಂದ ಮೊಳಗುತ್ತಿದ್ದರೂ ಡೇರಿ, ಹಾಲಿನ ಮಾರ್ಗವನ್ನು ರೂಪಿಸದೇ ರೈತರು ಹೈನುಗಾರಿಕೆಯಿಂದ ದೂರ ಉಳಿಯುವಂತಾಗಿದೆ.

ಕೊಲ್ಲಿಬೈಲ್, ಬೀಜುವಳ್ಳಿ, ಕೃಷ್ಣಾಪುರ, ಬಿಳಗುಳ, ಬಿದರಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಇಂದಿಗೂ ಹೈನುಗಾರಿಕೆ ನಡೆಯುತ್ತಿದೆ. ಇಲ್ಲಿನ ನಿವಾಸಿಗಳು ಉತ್ಪಾದಿಸುವ ಹಾಲನ್ನು ಸ್ಥಳೀಯವಾಗಿಯೇ ಮಾರಾಟ ಮಾಡುತ್ತಿದ್ದಾರೆ. ಪಟ್ಟಣದಲ್ಲಿ ಖಾಸಗಿ ಹಾಲು ಮಾರಾಟಗಾರರು ಗ್ರಾಮೀಣ ಭಾಗದ ರೈತರಿಂದ ಹಾಲು ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡುವ ಕೇಂದ್ರಗಳನ್ನು ತೆರೆದಿದ್ದು, ಕ್ಷೀರಪಥವಿಲ್ಲದ ಕಾರಣ ಅನಿವಾರ್ಯವಾಗಿ ರೈತರು ಸ್ಥಳೀಯ ವರ್ತಕರಿಗೆ ಹಾಲು ಮಾರುವಂಥ ಸ್ಥಿತಿ ಇದೆ.

ತಾಲ್ಲೂಕಿನ ಮೇಕನಗದ್ದೆ, ಬೈರಾಪುರ, ಹೊಸ್ಕೆರೆ ಭಾಗದಿಂದ ಕ್ಷೀರಪಥವನ್ನು ಸ್ಥಾಪಿಸಿ ರೈತರು ಉತ್ಪಾದಿಸುವ ಹಾಲನ್ನು ಡೇರಿಗೆ ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸುವಂತೆ ಹಲವು ಹೋರಾಟಗಳನ್ನು ನಡೆಸಿ, ಕ್ಷೀರಪಥ ನಿರ್ಮಿಸಲು ಒತ್ತಾಯಿಸಲಾಗಿತ್ತು. ಸಂಸದರು, ಶಾಸಕರಿಗೆ ಮನವಿಯನ್ನೂ ನೀಡಲಾಗಿತ್ತು. ಆದರೆ, ಇದುವರೆಗೂ ಕ್ಷೀರಪಥದ ಕನಸು ನನಸಾಗಿಲ್ಲ.

ADVERTISEMENT

‘ಮಲೆನಾಡಿನಲ್ಲಿ ಹೈನುಗಾರಿಕೆಗೆ ವಿಪುಲವಾದ ಅವಕಾಶಗಳಿವೆ. ಈಗಾಗಲೇ ನಷ್ಟದ ಬೆಳೆ ಎಂಬ ಕಾರಣಕ್ಕೆ ಭತ್ತದ ಬೆಳೆಯನ್ನು ಬಹುತೇಕ ಕೈ ಬಿಡಲಾಗಿದ್ದು, ಪಾಳು ಬಿದ್ದಿರುವ ಭತ್ತದ ಗದ್ದೆಗಳಲ್ಲಿ ಸಿಗುವ ಹಸಿಹುಲ್ಲನ್ನು ದನಗಳಿಗೆ ಬಳಸಿಕೊಳ್ಳಬಹುದು. ಆದರೆ, ಉತ್ಪಾದಿಸಿದ ಹಾಲನ್ನು ಮಾರಾಟ ಮಾಡಲು ಗ್ರಾಮೀಣ ಭಾಗಗಳಲ್ಲಿ ಗೋಗರೆಯುವ ಪರಿಸ್ಥಿತಿಯಿದೆ. ರೈತರ ಈ ಸ್ಥಿತಿಯನ್ನು ಕಂಡು ಹೋಟೆಲ್‌ಗಳಲ್ಲಿ, ಪಟ್ಟಣದಲ್ಲಿ ಕಡಿಮೆ ಬೆಲೆಗೆ ಹಾಲನ್ನು ಕೇಳುತ್ತಾರೆ. ಹಾಲಿನ ಮಾರ್ಗವನ್ನು ರೂಪಿಸಿ, ಪ್ರತಿ ದಿನವೂ ಡೇರಿ ವಾಹನ ಗ್ರಾಮೀಣ ಭಾಗಕ್ಕೆ ಬಂದರೆ ಸ್ಥಳೀಯ ರೈತರಿಗೆ ವರದಾನವಾಗುತ್ತದೆ’ ಎನ್ನುತ್ತಾರೆ ಹಾಲು ಉತ್ಪಾದಕ ಬೀಜುವಳ್ಳಿ ರಮೇಶ್.

ನಿರುದ್ಯೋಗ ನಿವಾರಣೆಗೆ ಹೈನುಗಾರಿಕೆಯು ಪ್ರಮುಖವಾಗಿದ್ದು, ಮಲೆನಾಡಿನಲ್ಲಿ ಹೈನುಗಾರಿಕೆಯಲ್ಲಿ ಆಸಕ್ತರಿರುವ ಯುವಕರನ್ನು ಸಂಘಟಿಸಿ ಕ್ಷೀರಪಥವನ್ನು ನಿರ್ಮಿಸಿ ಹೈನುಗಾರಿಕೆಯನ್ನು ಲಾಭದಾಯಕವಾಗಿಸಬೇಕು. ಹೈನುಗಾರಿಕೆಯಲ್ಲಿ ತೊಡಗಿರುವ ಕುಟುಂಬಗಳಲ್ಲದೇ ಹೊಸ ಉದ್ಯೋಗ ಸೃಷ್ಟಿಗೂ ಇದು ನೆರವಾಗುತ್ತದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.