ಚಿಕ್ಕಮಗಳೂರು: ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ವಿರುದ್ಧ ದಲಿತ ಮತ್ತು ಪ್ರಗತಿಪರ ಒಕ್ಕೂಟದಿಂದ ನಗರದಲ್ಲಿ ಬುಧವಾರ ಪಶ್ಚಾತ್ತಾಪ ಪ್ರತಿಭಟನೆ ನಡೆಯಿತು.
ದಲಿತ ಸಂಘರ್ಷ ಸಮಿತಿ, ರೈತ ಸಂಘದ ಮುಖಂಡರು ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿನ ಗಾಂಧಿ ಪ್ರತಿಮೆ ಎದುರು ಮೌನ ಧರಣಿ ನಡೆಸಿದರು.
ನಯನಾ ಮೋಟಮ್ಮ ಅವರು ಹಿಂದೂ ಮಹಾಸಭಾದ ಗಣಪತಿ ಲಾಂಛನ ಬಿಡುಗಡೆ ಸಮಾರಂಭದಲ್ಲಿ ಕೇಸರಿ ಶಾಲು ಹೊದ್ದು ಮೆರವಣಿಗೆಯಲ್ಲಿ ಸಾಗಿದ್ದಾರೆ. ಅನ್ಯಧರ್ಮದ ವಿರುದ್ಧ ದ್ವೇಷ ಕಾರುವ ಪ್ರಮೋದ್ ಮುತಾಲಿಕ್ ಜತೆ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
‘ಮೂರು ವರ್ಷದ ಬಳಿಕ ಕಾಂಗ್ರೆಸ್‌ನಲ್ಲಿ ಇರುತ್ತೇನೊ, ಬಿಜೆಪಿ ಸೇರುತ್ತೇನೊ ಗೊತ್ತಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಇಂತವರ ಗೆಲುವಿಗೆ ನಾವು ಶ್ರಮ ಹಾಕಿ ತಪ್ಪು ಮಾಡಿದೆವು ಎನಿಸುತ್ತಿದೆ’ ಎಂದು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ. ರುದ್ರಯ್ಯ ಹೇಳಿದರು.
‘ಹಿಂದೂವಾಗಿ ಹುಟ್ಟಿದ್ದೇನೆ. ಆದರೆ, ಹಿಂದೂವಾಗಿ ಸಾಯಲಾರೆ ಎಂದು ಅಂಬೇಡ್ಕರ್ ಹೇಳಿದ್ದರು. ಇದೇ ಕಾರಣಕ್ಕೆ ಅಂಬೇಡರ್ ಮೇಲೆ 19 ಬಾರಿ ಕೊಲೆ ಯತ್ನ ನಡೆದಿತ್ತು. ಆದರೆ, ನಯನಾ ಮೋಟಮ್ಮ ಅವರು ಸಂವಿಧಾನ, ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿ ನಾನೊಬ್ಬ ಹಿಂದೂ ಮತ್ತು ದಲಿತೆ ಎಂದು ಮಾತನಾಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಬಿಜೆಪಿ ಸರ್ಕಾರ ಆಡಳಿತದಲ್ಲಿ ಇದ್ದಾಗ ರಾಜ್ಯದಲ್ಲಿ ಅಶಾಂತಿಯ ವಾತಾವರಣ ಇತ್ತು. ರಾಜ್ಯವನ್ನು ಸಂಘ ಪರಿವಾರದ ಪ್ರಯೋಗ ಶಾಲೆ ಮಾಡಲು ಬಿಜೆಪಿ ಹೊರಟಿತ್ತು. ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ದಲಿತ, ಪ್ರಗತಿಪರ, ಎಡ ಶಕ್ತಿಗಳು ನಿರ್ಧರಿಸಿ ಹೋರಾಟ ಮಾಡಿದವು. ಕಾಂಗ್ರೆಸ್‌ಗೆ ಬೆಂಬಲ ಕೊಟ್ಟಿದ್ದವು. ಆ ಕಾರಣದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಇದನ್ನೆಲ್ಲಾ ಮರೆತಿರುವ ನಯನಾ ಮೋಟಮ್ಮ ಅವರು ನಾನು ಹಿಂದೂ ಎಂದು ಹೇಳಿರುವುದು ಮತ್ತು ಮುತಾಲಿಕ್ ಜತೆ ವೇದಿಕೆ ಹಂಚಿಕೊಂಡಿರುವುದು ಖಂಡನೀಯ’ ಎಂದರು.
‘ನಯನಾ ಮೋಟಮ್ಮ ಅವರು ತಮ್ಮ ಮನಃಸ್ಥಿತಿ ಬದಲಿಸಿಕೊಳ್ಳಬೇಕು. ಕಾಂಗ್ರೆಸ್ ಕೆಲ ಮುಖಂಡರು ಇದನ್ನು ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿಯ ಹಿಂದೂವಾದಕ್ಕೆ ಸಮ್ಮತಿ ಇದೆ ಎಂಬುದಾದರೆ ಅದನ್ನು ಕಾಂಗ್ರೆಸ್ ಹೇಳಿಬಿಡಲಿ. ಮುಂದಿನ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಲು ಏನು ಮಾಡಬೇಕು ಎಂಬುದನ್ನು ಪ್ರಗತಿಪರ ಒಕ್ಕೂಟ ನಿರ್ಧಾರಿಸಲಿದೆ’ ಎಂದು ಎಚ್ಚರಿಸಿದರು.
ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ರಾಜ್ಯ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯ, ದಲಿತ ಮುಖಂಡ ಕೂದುವಳ್ಳಿ ಮಂಜು, ಮರಗುಂದ ಪ್ರಸನ್ನ, ರೈತ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಗುರುಶಾಂತಪ್ಪ, ಅಧ್ಯಕ್ಷ ಡಿ.ಮಹೇಶ್, ಕಾಂಗ್ರೆಸ್ ಮುಖಂಡ ಎಚ್.ಎಚ್.ದೇವರಾಜ್, ಭರತ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.