ADVERTISEMENT

ಚಿಕ್ಕಮಗಳೂರು | ದಂಟರಮಕ್ಕಿ ರಸ್ತೆಯಲ್ಲಿ ನೂರೆಂಟು ಸಮಸ್ಯೆ

ಗುಂಡಿ ರಸ್ತೆ, ಕೊಳಚೆ ನೀರಿನ ದುರ್ವಾಸನೆ ನಡುವೆ ಜೀವನ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 5:49 IST
Last Updated 11 ಜನವರಿ 2026, 5:49 IST
ದಂಟರಮಕ್ಕಿಯ ಶನೇಶ್ವರಸ್ವಾಮಿ ದೇವಾಲಯ ರಸ್ತೆ ಗುಂಡಿ ಬಿದ್ದಿರುವುದು
ದಂಟರಮಕ್ಕಿಯ ಶನೇಶ್ವರಸ್ವಾಮಿ ದೇವಾಲಯ ರಸ್ತೆ ಗುಂಡಿ ಬಿದ್ದಿರುವುದು   

ಚಿಕ್ಕಮಗಳೂರು: ಗುಂಡಿ ಬಿದ್ದ ರಸ್ತೆಯಲ್ಲೇ ಸಾಗುವ ವಾಹನಗಳು, ಕೊಳಚೆ ನೀರಿನ ದುರ್ವಾಸನೆಯಲ್ಲೇ ಜೀವನ ಸಾಗಿಸೋ ಜನರು, ರಸ್ತೆ ಬದಿಯ ಕಸದ ರಾಶಿಗೆ ಬೆಂಕಿ ಇಟ್ಟ ಹೊಗೆಯಲ್ಲೇ ದಿನ ಕಳೆಯೋ ನಿವಾಸಿಗಳು... ಇಂತಹ ಸ್ಥಿತಿಗೆ ಸಾಕ್ಷಿಯಾಗಿರುವುದು ನಗರದ ದಂಟರಮಕ್ಕಿ ಬಡಾವಣೆ.

ನಗರದ ಬೈಪಾಸ್ ರಸ್ತೆ ಕಡೆಯಿಂದ ದಂಟರಮಕ್ಕಿ ರಸ್ತೆಯಲ್ಲಿ ಸಾಗಿದರೆ ಗುಂಡಿ ಬಿದ್ದ ರಸ್ತೆಯಲ್ಲಿ ಜೀವ ಬಿಗಿ ಹಿಡಿದು ಸಾಗಬೇಕಾಗಿದೆ. ಬೈಪಾಸ್ ರಸ್ತೆಯಿಂದ ದಂಟರಮಕ್ಕಿ ವೃತ್ತದ ತನಕ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಕೆಲವು ಗುಂಡಿಗಳಿಗೆ ನಗರಸಭೆ ಮಣ್ಣು ಸುರಿದು ಮುಚ್ಚಿದೆ.

ಶನೇಶ್ವರಸ್ವಾಮಿ ದೇವಾಲಯದ ಸ್ವಲ್ಪ ದೂರದಲ್ಲೇ ರಸ್ತೆ ಅಲ್ಲಲ್ಲಿ ದೊಡ್ಡ ಗುಂಡಿಗಳು ಬಿದ್ದಿದ್ದು, ಗುಂಡಿಯಲ್ಲಿ ಕೊಳಚೆ ನೀರು ತುಂಬಿಕೊಂಡಿದೆ. ರಾತ್ರಿ ವೇಳೆ ಬೈಕ್ ಸವಾರರು ಈ ಮಾರ್ಗದಲ್ಲಿ ಸಾಗುವಾಗ ಗುಂಡಿ ಕಾಣದೆ ಬಿದ್ದು ಅಪಘಾತವಾದ ಉದಾಹರಣೆಗಳಿವೆ ಎನುತ್ತಾರೆ ಇಲ್ಲಿನ ಸ್ಥಳೀಯರು.

ADVERTISEMENT

ಇದೇ ಮಾರ್ಗದಲ್ಲಿ ದಂಟರಮಕ್ಕಿ ಬಡವಾಣೆಯ ಕೊಳಚೆ ನೀರು ಹರಿಯುತ್ತಿದೆ. ರಸ್ತೆ ಪಕ್ಕದಲ್ಲಿ ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲದೆ ನೀರು ರಸ್ತೆ ಮೇಲೆ ಹರಿದು ದುರ್ವಾಸನೆ ಬೀರುತ್ತಿದೆ. ಕೊಳಚೆ ನೀರಿನ ಜೊತೆಗೆ ಚರಂಡಿ ತುಂಬೆಲ್ಲ ಪ್ಲಾಸ್ಟಿಕ್ ತ್ಯಾಜ್ಯ ತುಂಬಿಕೊಂಡು ನೀರಿನ ಹರಿವು ಇಲ್ಲವಾಗಿದೆ. ಇದರಿಂದ ಜನ ಅನಾರೋಗ್ಯದ ಭೀತಿಯಲ್ಲಿ ಕಾಲ ಕಳೆಯುತ್ತಿದ್ದಾರೆ.

ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಆಗಿರುವುದರಿಂದ ನಿತ್ಯ ಈ ಮಾರ್ಗವಾಗಿ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಜತೆಗೆ ಈ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿರುತ್ತದೆ. ಆದರೆ, ರಸ್ತೆ ಗುಂಡಿಯಿಂದ ಸುಗಮ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.

ಬೈಪಾಸ್ ರಸ್ತೆಯಿಂದ ದಂಟರಮಕ್ಕಿ ರಸ್ತೆಗೆ ಹೊಕ್ಕರೆ ರಸ್ತೆಯ ಎರಡು ಬದಿಯಲ್ಲಿ ರಾಶಿ ರಾಶಿ ಕಸ ಕಣ್ಣಿಗೆ ಬೀಳುತ್ತಿದೆ. ಪ್ಲಾಸ್ಟಿಕ್, ಮದ್ಯದ ಬಾಟಲಿ, ಮನೆ ತ್ಯಾಜ್ಯ, ಹೋಟೆಲ್ ಹಾಗೂ ಮದುವೆ ಚೌಟರಿಗಳ ತ್ಯಾಜ್ಯ ಇಲ್ಲಿ ಸುರಿಯುತ್ತಾರೆ. ಕಸವೆಲ್ಲ ಗಾಳಿಯಿಂದಾಗಿ ರಸ್ತೆ ತುಂಬೆಲ್ಲ ಹರಡಿಕೊಂಡಿವೆ.

ಪ್ರತಿನಿತ್ಯ ರಸ್ತೆ ಬದಿ ಕಸ ತಂದು ಬೀಸಾಡುತ್ತಿದ್ದು, ಈ ಕಸ ವಿಲೇವಾರಿಗೆ ಬೆಂಕಿ ಇಡಲಾಗುತ್ತಿದೆ. ಇದರಿಂದ ರಸ್ತೆ ತುಂಬೆಲ್ಲ ಹೊಗೆ ತುಂಬಿಕೊಂಡು ವಾಹನ ಸವಾರರು ಪರದಾಡುವುದು ಸಾಮಾನ್ಯವಾಗಿದೆ. ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬೆಂಕಿ ಹಾಕುವ ಕಾರಣ ದಿನಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ ಹೊತ್ತಿ ಉರಿಯುತ್ತವೆ. ಇದರಿಂದ ಕೆಟ್ಟ ವಾಸನೆ ಬೀರುತ್ತದೆ.‌ ಈ ಹೊಗೆ, ವಾಸನೆಯಲ್ಲೇ ಇಲ್ಲಿನ ಜನರು ಬದುಕು ಸಾಗಿಸುವಂತಾಗಿದೆ.

ಈ ರಸ್ತೆ ಬದಿಯಲ್ಲಿ ಕಸದ ರಾಶಿ ಇರುವ ಕಾರಣ ಬೀದಿ ನಾಯಿಗಳು ಹಾಗೂ ಬೀಡಾಡಿ ದನಗಳ ವಾಸದ ಸ್ಥಳವಾಗಿ ಮಾರ್ಪಟಿದೆ. ಅನೇಕ ಬಾರಿ ಇಲ್ಲಿ ನಡಿಗೆ ಮಾಡುವವರ ಮೇಲೆ ಬೀದಿ ನಾಯಿಗಳು ಎರಗಿರುವ ಉದಾಹರಣೆಗಳಿವೆ. ಕೂಡಲೇ ನಗರಸಭೆ ಇತ್ತ ಗಮನ ಹರಿಸಿ ರಸ್ತೆಗೆ ಡಾಂಬರೀಕರ ಹಾಗೂ ಸರಾಗವಾಗಿ ನೀರು ಹರಿಯಲು ಚರಂಡಿ ವ್ಯವಸ್ಥೆ, ರಸ್ತೆ ಬದಿ ಕಸ ಹಾಕದಂತೆ ಸೂಚನಾ ಫಲಕ ಅಳವಡಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ರಸ್ತೆ ಬದಿ ಕಸಕ್ಕೆ ಬೆಂಕಿ ಹಾಕಿರುವುದು
ನೀರು ಹರಿಯದಂತೆ ಚರಂಡಿಯಲ್ಲಿ ತುಂಬಿರುವ ಪ್ಲಾಸ್ಟಿಕ್ 

ನಗರಸಭೆ ಸ್ವಚ್ಛತೆ ಬಗ್ಗೆ ಗಮನ ಕೊಡಬೇಕು ರಾತ್ರಿ ವೇಳೆ ಈ ಗುಂಡಿ ರಸ್ತೆಯಲ್ಲಿ ಸಂಚಾರ ಮಾಡಲು ಕಷ್ಟವಾಗುತ್ತಿದೆ‌. ಜೊತೆಗೆ ರಸ್ತೆ ಬದಿಯ ಕಸಕ್ಕೆ ಬೆಂಕಿ ಹಾಕುವುದು ಪರಿಸರ ಮಾಲಿನ್ಯವಾಗುತ್ತದೆ ಎಂಬುದು ವಾಹನ ಸವಾರರ ಆರೋಪ. ಹೊಗೆ ಮತ್ತು ವಾಸನೆ ನಡುವೆ ಓಡಾಡಲು ಹಿಂಸೆಯಾಗುತ್ತಿದೆ. ನಗರಸಭೆ ಕೂಡಲೆ ಸ್ವಚ್ಛತೆ ಕಡೆ ಗಮನ ಕೊಡಬೇಕಾಗಿದೆ. ರಸ್ತೆ ಬದಿ ಕಸ ಹಾಕುವವರ ವಿರುದ್ದ ಕ್ರಮ ಕೈಗೊಳ್ಳುಬೇಕು ಎಂದು ಬೈಕ್ ಸವಾರ ಭರತ್ ಒತ್ತಾಯಿಸಿದರು.