ADVERTISEMENT

ಚಿಕ್ಕಮಗಳೂರು: ದತ್ತ ಜಯಂತಿಗೆ ಸಿದ್ಧತೆ, ಕಟ್ಟೆಚ್ಚರ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 13:36 IST
Last Updated 18 ಡಿಸೆಂಬರ್ 2018, 13:36 IST
ಎಂ.ಕೆ.ಶ್ರೀರಂಗಯ್ಯ – ಹರೀಶ್‌ ಪಾಂಡೆ
ಎಂ.ಕೆ.ಶ್ರೀರಂಗಯ್ಯ – ಹರೀಶ್‌ ಪಾಂಡೆ   

ಚಿಕ್ಕಮಗಳೂರು: ದತ್ತ ಜಯಂತಿ ಆಚರಣೆಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ, ಅಗತ್ಯ ಮೂಲಸೌಕರ್ಯ ಕಲ್ಪಿಸಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಇಲ್ಲಿ ಮಂಗಳವಾರ ತಿಳಿಸಿದರು.

ದತ್ತಭಕ್ತ ಮುಖಂಡರೊಂದಿಗೆ ಸಭೆ ನಡೆಸಲಾಗಿದೆ. ಗಿರಿಯಲ್ಲಿ ಕುಡಿಯುವ ನೀರು, ನೈರ್ಮಲ್ಯ ನಿರ್ವಹಣೆ, ವಾಹನನಿಲುಗಡೆಗೆ ವ್ಯವಸ್ಥೆ ಮೊದಲಾದ ಮೂಲಸೌಕರ್ಯ ಕಲ್ಪಿಸಲಾಗಿದೆ ಎಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

20ರಂದು ಅನಸೂಯಾ ಜಯಂತಿ, 21ರಂದು ಶೋಭಾಯಾತ್ರೆ ಹಾಗೂ 22ರಂದು ದತ್ತ ಜಯಂತಿ ಜರುಗಲಿದೆ. ಅನಸೂಯಾ ಜಯಂತಿಯಂದು ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾದಲ್ಲಿ ಪಾದುಕೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಶೋಭಾಯಾತ್ರೆ ನಗರದಲ್ಲಿ ನಡೆಯುತ್ತದೆ. 22ರಂದು ದತ್ತಪಾದುಕೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಳೆಯ ದಾಖಲೆ ಪರಿಶೀಲಿಸಿ ಈ ವರ್ಷ ಸುಧರ್ಮ ರಥಯಾತ್ರೆಗೆ ಅನುಮತಿ ನೀಡಲಾಗಿದೆ. ಹೊಸ ಆಚರಣೆಗೆ ಅವಕಾಶ ನೀಡಿಲ್ಲ ಎಂದು ತಿಳಿಸಿದರು.

ADVERTISEMENT

ಅಹಿತಕರ ಘಟನೆಗಳಿಗೆ ಎಡೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಾಂತಿ–ಸುವ್ಯವಸ್ಥೆ ಪಾಲನೆ ನಿಟ್ಟಿನಲ್ಲಿ ಜಿಲ್ಲೆಯಲ್ಲಿನ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್‌ಗಳ ಜತೆಗೆ ಹೆಚ್ಚುವರಿಯಾಗಿ 41 ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನು ನಿಯೋಜಿಸಲಾಗುವುದು. ಸಮನ್ವಯಸಭೆ ನಡೆಸಿ ಅಧಿಕಾರಿಗಳಿಗೆ ಸ್ಥಳ ನಿಯೋಜಿಸಿ ಉಸ್ತುವಾರಿ ನಿರ್ವಹಣೆಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಗಿರಿಶ್ರೇಣಿಯಲ್ಲಿ ಟ್ರಾಫಿಕ್‌ ಜಾಮ್‌ ಆಗದಂತೆ ಕ್ರಮವಹಿಸಲಾಗಿದೆ. ರಸ್ತೆಯನ್ನು ಸಜ್ಜುಗೊಳಿಸಲಾಗಿದೆ. ಬೆಳಿಗ್ಗೆ 6 ಗಂಟೆಯಿಂದಲೇ ವಾಹನಗಳು ಗಿರಿಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ದತ್ತಜಯಂತಿಯಂದು ಜಿಲ್ಲಾಡಳಿತದಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಆಹಾರ ಸುರಕ್ಷತಾ ಅಧಿಕಾರಿಗಳು ಪ್ರಸಾದವನ್ನು ಪರಿಶೀಲಿಸುವರು ಎಂದು ಪ್ರತಿಕ್ರಿಯಿಸಿದರು.

ಬಂದೋಬಸ್ತ್‌:3,500 ಪೊಲೀಸ್‌ ನಿಯೋಜನೆ

ಈ ಬಾರಿ ದತ್ತ ಜಯಂತಿ ಬಂದೋಬಸ್ತ್‌ ನಿಟ್ಟಿನಲ್ಲಿ 3,500 ಪೊಲೀಸರನ್ನು ಕಾರ್ಯನಿರ್ವಹಿಸುವರು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ಪಾಂಡೆ ತಿಳಿಸಿದರು.

ಕಳೆದ ವರ್ಷದ ಅಹಿತಕರ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಕಟ್ಟೆಚ್ಚರ ವಹಿಸಲಾಗಿದೆ. ಒಬ್ಬರು ಎಸ್ಪಿ, ಇಬ್ಬರು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ನಾಲ್ವರು ಐಪಿಎಸ್‌ ಅಧಿಕಾರಿಗಳು, 15ಡಿವೈಎಸ್ಪಿ, 30 ಇನ್‌ಸ್ಪೆಕ್ಟರ್‌, 250 ಪಿಎಸ್‌ಐಗಳು ಭದ್ರತೆ ಉಸ್ತುವಾರಿ ನಿರ್ವಹಿಸುವರು ಎಂದರು.

ಗಿರಿ ಶ್ರೇಣಿ ಮಾರ್ಗದಲ್ಲಿ ಆರು ಕಡೆ ‘ಏರ್‌ಪಿನ್‌’, ನಾಲ್ಕು ಕಡೆ ಸಂಕುಚಿತ ತಿರುವುಗಳು ಇವೆ. ಟ್ರಾಫಿಕ್‌ ಜಾಮ್‌ ಆಗದಂತೆ ನಿಗಾ ವಹಿಸಲು ಬೈಕ್‌ ಗಸ್ತು ವ್ಯವಸ್ಥೆ ಮಾಡಲಿದ್ದಾರೆ. ಪ್ರತಿ ಎರಡು ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಈ ಸಿಬ್ಬಂದಿ ಕಾರ್ಯನಿರ್ವಹಿಸುವರು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಈ ಬಾರಿ 35 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಕಳೆದ ವರ್ಷ 31 ಚೆಕ್‌ಪೋಸ್ಟ್‌ ವ್ಯವಸ್ಥೆ ಮಾಡಲಾಗಿತ್ತು, ದಟ್ಟಣೆ ಪರಿಗಣಿಸಿ ಈ ವರ್ಷ ಹೆಚ್ಚುವರಿಯಾಗಿ ನಾಲ್ಕು ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ ಎಂದರು.

ಈ ಬಾರಿ ಸಿ.ಸಿ.ಟಿವಿ, ಹ್ಯಾಂಡಿ ಕ್ಯಾಮೆರಾ ಕಣ್ಗಾವಲನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ. ಒಟ್ಟು 220 ಕ್ಯಾಮೆರಾಗಳನ್ನು ಬಳಸಲಾಗುವುದು. ಡ್ರೋಣ್‌ ಕ್ಯಾಮೆರಾ ಕಣ್ಗಾವಲು ಇರಲಿದೆ. ದತ್ತಪೀಠ ಪ್ರದೇಶ, ಗಿರಿಶ್ರೇಣಿ ಮಾರ್ಗ ಮತ್ತು ನಗರ, ತಾಲ್ಲೂಕು ಕೇಂದ್ರಗಳಲ್ಲಿಯೂ ಕಣ್ಗಾವಲು ನಿಗಾ ಇರುತ್ತದೆ ಎಂದರು.

‘ರಾಜ್ಯ ವಿವಿಧ ಜಿಲ್ಲೆಯ ಸುಮಾರು 731 ಮಂದಿಯಿಂದ ಈ ವರ್ಷ ಇಂಡೆಮ್ನಿಟಿ ಬಾಂಡ್‌ ಪಡೆಯಲಾಗಿದೆ. ಅಹಿತಕರ ಘಟನೆಗಳಿಗೆ ಕುಮ್ಮಕ್ಕು ನೀಡಿದರೆ, ಭಾಗವಹಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ರೌಡಿಶೀಟರ್‌ನಲ್ಲಿರುವವರ ಬಗ್ಗೆಯೂ ಸಮಗ್ರ ಮಾಹಿತಿ ಕಲೆ ಹಾಕಲಾಗಿದೆ’ ಎಂದರು.

‘ಶೋಭಾಯಾತ್ರೆ ಮಾರ್ಗದಲ್ಲಿ ಬದಲಾವಣೆ ಇಲ್ಲ. ಅಂದು ಕೆಲ ರಸ್ತೆಗಳಲ್ಲಿ ವಾಹನನಿಲುಗಡೆ ನಿರ್ಬಂಧಿಸಲಾಗಿದೆ’ ಎಂದು ಪ್ರತಿಕ್ರಿಯಿಸಿದರು.

ಕಳೆದ ವರ್ಷದ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ಒಟ್ಟು10 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೋರ್ಟ್‌ನಲ್ಲಿ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ ಎಂದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.