ADVERTISEMENT

ಚಿಕ್ಕಮಗಳೂರು: ಸಂಕೀರ್ತನಾ ಯಾತ್ರೆ ಸಂಭ್ರಮ

ಅಲಂಕೃತ ವಾಹನದಲ್ಲಿ ಉತ್ಸವ ಮೂರ್ತಿ ಪ್ರತಿಷ್ಠಾಪನೆ, ಅಡ್ಡೆ ಹೊತ್ತು ಸಾಗಿದ ಭಕ್ತರು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 16:46 IST
Last Updated 28 ಡಿಸೆಂಬರ್ 2020, 16:46 IST
ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದಲ್ಲಿ ಸಂಕೀರ್ತನಾ ಯಾತ್ರೆಯಲ್ಲಿ ಮಹಿಳೆಯರ ನೃತ್ಯ ಸಂಪದ. –ಪ್ರಜಾವಾಣಿ ಚಿತ್ರ
ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದಲ್ಲಿ ಸಂಕೀರ್ತನಾ ಯಾತ್ರೆಯಲ್ಲಿ ಮಹಿಳೆಯರ ನೃತ್ಯ ಸಂಪದ. –ಪ್ರಜಾವಾಣಿ ಚಿತ್ರ   

ಚಿಕ್ಕಮಗಳೂರು: ದತ್ತ ಜಯಂತಿ ಅಂಗವಾಗಿ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳದ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಸಂಕೀರ್ತನಾ ಯಾತ್ರೆ ಜರುಗಿತು.

ನಗರದ ರತ್ನಗಿರಿ ರಸ್ತೆಯ ಕಾಮಧೇನು ಮಹಾಶಕ್ತಿ ಗಣಪತಿ ದೇಗುಲದಿಂದ ಮಧ್ಯಾಹ್ನ 4.25ಕ್ಕೆ ಸಂಕೀರ್ತನಾ ಯಾತ್ರೆ ಹೊರಟಿತು. ಅಲಂಕೃತ ವಾಹನದಲ್ಲಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ದತ್ತಾತ್ರೇಯ ಸ್ವಾಮಿ ಉತ್ಸವ ಮೂರ್ತಿಯನ್ನು ಅಡ್ಡೆಯನ್ನು ದತ್ತ ಭಕ್ತರು ಹೊತ್ತು ಸಾಗಿದರು.

ಮಾಲಾಧಾರಿಗಳು, ಭಕ್ತರು ಭಗವಧ್ವಜಗಳನ್ನು ಹಿಡಿದು ಸಾಗಿದರು. ಭಜನೆ ಮೂಲಕ ದತ್ತ ನಾಮಸ್ಮರಣೆ ಮಾಡಿದರು.

ADVERTISEMENT

‘ದತ್ತ ಪೀಠ ನಮ್ಮದು’, ‘ಜೈ ಶ್ರೀರಾಮ್‌’ ‘ಜೈ ಶಿವಾಜಿ’, ಜೈ ಭವಾನಿ’ ಘೋಷಣೆಗಳು ಮೆರವಣಿಗೆಯುದ್ದಕ್ಕೂ ಮೊಳಗಿದವು. ಪೊಲೀಸ್‌ ಕಾವಲಿನಲ್ಲಿ ಯಾತ್ರೆ ಸಾಗಿತು.

ಮೆರವಣಿಗೆಯನ್ನು ನೋಡಲು ಮಾರ್ಗದ ಇಕ್ಕೆಲಗಳಲ್ಲೂ ಜನ ಸೇರಿದ್ದರು. ಕಟ್ಟಡಗಳ ಮಹಡಿಗಳ ಮೇಲೆ ನಿಂತಿದ್ದರು. ಅಲ್ಲಿಂದಲೇ ನಮಿಸಿದರು.

ಹನುಮಂತಪ್ಪ ವೃತ್ತದಲ್ಲಿ ಕೆಲ ನಿಮಿಷ ಯುವಜನರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಆಟೋ ರಿಕ್ಷಾದಲ್ಲಿ ಅಳವಡಿಸಿದ್ದ ಧ್ವನಿವರ್ಧಕದ ಸಂಗೀತಕ್ಕೆ ಹೆಜ್ಜೆ ಹಾಕಿದರು. ಹಲವಾರು ಜನರು ಮೊಬೈಲ್‌ ಕ್ಯಾಮೆರಾ
ಗಳಲ್ಲಿ ಉತ್ಸವದ ಫೋಟೊ ಕ್ಲಿಕ್ಕಿಸಿಕೊಂಡರು. ಮತ್ತೆ ಕೆಲವರು ವಿಡಿಯೊ ಮಾಡಿಕೊಂಡರು. ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ, ಮೂಲಕ ಹಾದು ಆಜಾದ್‌ ಪಾರ್ಕ್‌ ವೃತ್ತದ ಮೂಲಕ ಸಾಗಿ ಸಂಕೀರ್ತನಾ ಯಾತ್ರೆ ಸಂಪನ್ನಗೊಂಡಿತು. ಆಜಾದ್‌ ಪಾರ್ಕ್‌ ವೃತ್ತದಲ್ಲಿ ಪೂಜಾ ಕೈಂಕರ್ಯ ನೆರವೇರಿಸಲಾಯಿತು.

ಅಂತರ ಪಾಲನೆಗೆ ತಿಲಾಂಜಲಿ: ಅಂತರ ಪಾಲನೆ, ಮುಖಗವಸು ಧಾರಣೆ ಮೊದಲಾದ ಮಾರ್ಗಸೂಚಿಗಳಿಗೆ ‘ಎಳ್ಳುನೀರು’ ಬಿಡಲಾಗಿತ್ತು. ಅಂತರ ಪಾಲನೆ ಹಲವರು ಮುಖಗವಸು ಧರಿಸದಿರುವುದು ಕಂಡುಬಂತು.

ಸೂರ್ಯ ನಾರಾಯಣ, ರಘು ಸಕಲೇಶಪುರ, ಯೋಗೀಶರಾಜ್‌ ಅರಸ್‌, ಶಶಾಂಕ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.