ADVERTISEMENT

ನಿಫಾವೈರಾಣು ಹರಡದಂತೆ ಮಂಜಾಗ್ರತೆ ವಹಿಸಿ

ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಗೌತಮ್‌ಬಗಾದಿ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 15:22 IST
Last Updated 6 ಜೂನ್ 2019, 15:22 IST
ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್ ಮಾತನಾಡಿದರು.
ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್ ಮಾತನಾಡಿದರು.   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಿಫಾವೈರಾಣು ಹರಡದಂತೆ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ನಿಫಾ ವೈರಾಣು ಜ್ವರ ತಡೆ ಕುರಿತು ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

1998ರಲ್ಲಿ ಮಲೇಷಿಯಾ, ಸಿಂಗಾಪುರದಲ್ಲಿ ನಿಫಾ ವೈರಾಣು ಪತ್ತೆಯಾಯಿತು. ಕೆಲ ವರ್ಷಗಳಿಂದ ಕೇರಳದಲ್ಲಿ ಈ ವೈರಾಣು ಜ್ವರದಿಂದ ಸಾವನ್ನಪ್ಪುತ್ತಿದ್ದಾರೆ. ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ ಜನರು ಕೇರಳದ ಜತೆ ಹೆಚ್ಚು ಸಂಪರ್ಕ ಹೊಂದಿದ್ದಾರೆ. ವಾರಾಂತ್ಯದಲ್ಲಿ ಕೇರಳದ ಪ್ರವಾಸಿಗರು ಜಿಲ್ಲೆಗ ಭೇಟಿ ನೀಡುತ್ತಿದ್ದಾರೆ. ಅದರಿಂದ ಮುನ್ನೆಚ್ಚರಿಕೆ ವಹಿಸಬೇಕು. ರೋಗ ಲಕ್ಷಣಗಳು, ಹರಡುವಿಕೆ, ಚಿಕಿತ್ಸೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು ಎಂದರು.

ADVERTISEMENT

ನಿಫಾ ವೈರಾಣು ಸೋಂಕಿತ ಬಾವುಲಿಗಳ ನೇರ ಸಂಪರ್ಕದಿಂದ ಅಥವಾ ಬಾವುಲಿಗಳು ತಿಂದು ಬಿಟ್ಟ ಹಣ್ಣು ಹಂಪಲುಗಳನ್ನು ಸೇವಿಸುವುದರಿಂದ, ಸೋಂಕಿತ ಪ್ರಾಣಿಗಳ ಮಲ, ಜೊಲ್ಲು ಹಾಗೂ ರಕ್ತದ ನೇರ ಸಂಪರ್ಕದಿಂದ ಈ ವೈರಾಣು ಮನುಷ್ಯನಿಗೆ ಹರಡುತ್ತವೆ ಎಂದರು.

ಜ್ವರ, ತಲೆನೋವು, ತಲೆ ಸುತ್ತಿವಿಕೆ, ದಿಗ್ಬ್ರಮೆ, ಮಾನಸಿಕ ಗೊಂದಲ, ಜ್ಞಾನತಪ್ಪುವುದು ನಿಫಾ ವೈರಾಣುವಿನ ರೋಗ ಲಕ್ಷಣಗಳಾಗಿವೆ. ಜ್ವರದ ಚಿಕಿತ್ಸೆಗೆ ದಾಖಲಾಗುವ ಪ್ರಕರಣಗಳನ್ನು ನಿರ್ಲಕ್ಷ ವಹಿಸಬಾರದು. ಆ ರೋಗಿಗಳ ಬಗ್ಗೆ ನಿಗಾ ಇಡಬೇಕು ಎಂದರು.

ಜಿಲ್ಲೆಯಲ್ಲಿ ನಿಫಾ ವೈರಾಣು ಸೋಂಕಿತ ರೋಗಿಗಳಿಗೆ ಪ್ರತ್ಯೇಕ ವಾರ್ಡ್‌ಗಳನ್ನು ಮೀಸಲಿಡಬೇಕು. ಚಿಕಿತ್ಸೆ ನೀಡುವ ವೈದ್ಯರು ಮತ್ತು ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಬೇಕು. ಸುರಕ್ಷತಾ ಸಾಧನಗಳನ್ನು ಒದಗಿಸಬೇಕು ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಂಜುನಾಥ್ ಮಾತನಾಡಿ, ಬಾವುಲಿಗಳ ಪ್ರವೇಶ ತಪ್ಪಿಸಲು ತೆರೆದ ಬಾವಿಗಳಿಗೆ ಜಾಲರಿ ಅಳವಡಿಸಬೇಕು. ಬಾವಿಯ ನೀರನ್ನು ಕುದಿಸದೇ ಉಪಯೋಗಿಸಬಾರದು. ಕೈಗಳನ್ನು ಸಂಪೂರ್ಣವಾಗಿ ತೊಳೆದು ಆಹಾರ ಸೇವನೆ ಮಾಡಬೇಕು ಎಂದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಅಶ್ವತ್ ಬಾಬು ಹಾಗೂ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.