ಚಿಕ್ಕಮಗಳೂರು: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರಿಗೆ ಬೆದರಿಕೆ ಹಾಕಿರುವ ಅನಾಮಿಕ ಪತ್ರವೊಂದು ಅವರ ಕಚೇರಿಗೆ ಬಂದಿದೆ.
‘ರವಿ, ಬೆಳಗಾವಿಯಿಂದ ಚಿಕ್ಕಮಗಳೂರಿಗೆ ನಿನ್ನನ್ನು ಹುಡುಕಿಕೊಂಡು ಬಂದೀವಿ. ಚುನೇತಿ (ಸವಾಲು) ಏನೆಂದರೆ 15 ದಿವಸದ ಒಳಗೆ ನಮ್ಮ ಬೆಳಗಾವಿ ಅಭಿನೇತಿ ಅವರ ಕಾಲನ್ನು ಹಿಡಿದು ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿ ನಿನ್ನ ಗತಿ ಏನಾಗುತ್ತೆ ಎಂದರೆ ನಿನ್ನ ಮನೆಗೆ ನುಗ್ಗಿ ನಿನ್ನ ಕೈ ಮತ್ತು ಪಾದ ಮುರಿಯುವುದು ಖಂಡಿತ, ಹುಷಾರ್. ನೀನು ಯಾವ ಪಾತಾಳದಲ್ಲಿ ಇದ್ದರೂ ಬಿಡುವುದಿಲ್ಲ. ಹುಷಾರ್, ಹುಷಾರ್, ಹುಷಾರ್. ನಿನ್ನ ಮಗನ ಜೀವಕ್ಕೂ ಅಪಾಯವಿದೆ’ ಎಂದು ಪತ್ರದಲ್ಲಿ ಬರೆದಿದ್ದಾರೆ.
‘ನನ್ನ ಕಚೇರಿಗೆ ಪತ್ರ ಬಂದಿದೆ. ನಾನು ಊರಿನಲ್ಲಿ ಇರಲಿಲ್ಲ. ಆದ್ದರಿಂದ ಕಚೇರಿ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ’ ಎಂದು ಸಿ.ಟಿ.ರವಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಜತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಪತ್ರ ಎಲ್ಲಿಂದ ಬಂದಿದೆ ಎಂಬುದರ ಕುರಿತು ಸೈಬರ್ ವಿಭಾಗದ ಮೂಲಕ ತನಿಖೆ ನಡೆಸುವುದಾಗಿ ಅವರು ತಿಳಿಸಿದ್ದಾರೆ’ ಎಂದು ಹೇಳಿದರು.
ಈ ಕುರಿತು ಶೃಂಗೇರಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಸಿ.ಟಿ.ರವಿ ಅವರನ್ನು ನಾನು ರಾಷ್ಟ್ರೀಯ ನಾಯಕ ಎಂದು ತಿಳಿದುಕೊಂಡಿದ್ದೆ. ಅದರೆ, ಅವರು ದೊಡ್ಡ ಡ್ರಾಮಾ ಮಾಸ್ಟರ್ ಆಗಿದ್ದಾರೆ’ ಎಂದು ಲೇವಡಿ ಮಾಡಿದರು.
‘ಅವರ ಮಾತು– ವಿಚಾರ ನೋಡಿದರೆ ಈ ಮಟ್ಟಕ್ಕೆ ಇಳಿಯುತ್ತಾರೆ ಎಂದು ಭಾವಿಸಿರಲಿಲ್ಲ. ಬೇರೆ ಯಾರು ಒಪ್ಪುವುದು ಬೇಡ, ಆತ್ಮಸಾಕ್ಷಿ ಹೇಳಿದರೆ ಸಾಕು. ರವಿ ಹೀಗೆ ಮಾತನಾಡಬಾರದಿತ್ತು ಎಂದು ಬಿಜೆಪಿಯ ನೂರು ನಾಯಕರೇ ನನಗೆ ಹೇಳಿದ್ದಾರೆ’ ಎಂದು ತಿಳಿಸಿದರು.
‘ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದರೆ ಮುಗಿದು ಹೋಗುತ್ತಿತ್ತು. ಸುಳ್ಳಿಗೆ ಸುಳ್ಳು, ಸುಳ್ಳಿಗೆ ಸುಳ್ಳು ಹೇಳಿಕೊಂಡು ಹೋಗುತ್ತಿದ್ದರೆ ಕೊನೆ ಇಲ್ಲ. ಅವರ ಬಳಿ ತನಿಖೆ ತಂಡ ಇದೆಯಲ್ಲ, ತನಿಖೆ ಮಾಡಿಸಿಕೊಳ್ಳಲಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.