ಚಿಕ್ಕಮಗಳೂರು: ಸಾಕ್ಷಿ ದೂರುದಾರನನ್ನು ಮುಂದಿಟ್ಟುಕೊಂಡು ಧರ್ಮಸ್ಥಳ ಕ್ಷೇತ್ರಕ್ಕೆ ಕಳಂಕ ತರಲಾಗುತ್ತಿದೆ ಎಂದು ಆರೋಪಿಸಿ ಶ್ರೀಕ್ಷೇತ್ರ ಧರ್ಮಸ್ಥಳ ಅಭಿಮಾನಿಗಳ ವೇದಿಕೆ ನೇತೃತ್ವದಲ್ಲಿ ಸ್ಥಳೀಯರು ಬುಧವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕು ಕಚೇರಿಯಿಂದ ಆಜಾದ್ ಪಾರ್ಕ್ ವೃತ್ತದ ತನಕ ಮೆರವಣಿಗೆ ನಡೆಸಿದರು. ವಿವಿಧೆಡೆಯಿಂದ ಭಿತ್ತಿಪತ್ರ ಹಿಡಿದು ಬಂದಿದ್ದ ಸಾವಿರಾರು ಭಕ್ತರು, ಮೆರವಣಿಗೆಯುದ್ದಕ್ಕೂ ಮಂಜುನಾಥನ ಭಜನೆ ಮಾಡಿದರು. ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಕ್ತರ ತಾಳ್ಮೆಯನ್ನು ಸರ್ಕಾರ ಪರೀಕ್ಷೆ ಮಾಡುತ್ತಿದೆ. ಸತ್ಯ ಮತ್ತು ಧರ್ಮದ ಪರ ನ್ಯಾಯ ನೀಡುವ ಧರ್ಮಸ್ಥಳದ ಬಗ್ಗೆ ಅವಹೇಳನ ನಿಲ್ಲಿಸಬೇಕು. ಅಪಪ್ರಚಾರ ಮಾಡುವವರಿಗೆ ಮಂಜುನಾಥ ಸ್ವಾಮಿ-ಅಣ್ಣಪ್ಪ ಸ್ವಾಮಿಯಿಂದ ಶಿಕ್ಷೆಯಾಗಲಿದೆ ಎಂದರು.
ಭಕ್ತರ ಭಾವನೆ ಜತೆ ಚಲ್ಲಾಟ ನಿಲ್ಲಿಸಬೇಕು. ಭಕ್ತಿ-ನಂಬಿಕೆ-ಆರಾಧನೆಯ ಶಕ್ತಿಪೀಠ ಧರ್ಮಸ್ಥಳ, ಅಪಪ್ರಚಾರ ನಡೆಸುತ್ತಿರುವ ಗುಂಪನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎನ್ನುವ ಘೋಷಣೆಗಳನ್ನು ಕೂಗಿದರು.
ಶ್ರೀಕ್ಷೇತ್ರದ ಬಗ್ಗೆ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ನಿರಂತರ ಅಪಪ್ರಚಾರದಲ್ಲಿ ತೊಡಗಿರುವ ಮಹೇಶ್ ಶೆಟ್ಟಿ ತಿಮರೋಡಿ, ಎಂ.ಡಿ. ಸಮೀರ್, ಕುಡ್ಲ ರಾಂಪೇಜ್, ಅಜೇಯ ಅಂಚನ್, ಗಿರೀಶ್ ಮಟ್ಟಣ್ಣನವರ್, ಟಿ.ಜಯಂತ ವಿರುದ್ಧ ಸೂಕ್ತ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಸುಳ್ಳು ಸುದ್ದಿ ಹಬ್ಬಿಸಿ ಸಮಾಜ ಒಡೆಯುವ ಕೆಲಸವನ್ನು ತಿಮರೋಡಿ ಮತ್ತವರ ಗುಂಪು ಮಾಡುತ್ತಿದೆ. ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತಿದೆ ಎಂದು ದೂರಿದರು.
ಸಾಕ್ಷಿ ದೂರುದಾರ ನೀಡಿದ ದೂರು ಆಧರಿಸಿ ಎಸ್‌ಐಟಿ ತನಿಖೆ ನಡೆಸುತ್ತಿದೆ. ತನಿಖೆ ಧರ್ಮಪರವಾಗಿ ಕೊನೆಯಾಗಬೇಕೆಂದರೆ ಸಾಕ್ಷಿ ದೂರುದಾರನ ಹಿಂದೆ ಇರುವವರ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಈ ಗುಂಪಿಗೆ ಸಹಾಯ ಮಾಡುತ್ತಿರುವರು ಯಾರು, ಪ್ರಚೋದನೆ ನೀಡುತ್ತಿರುವವರು ಯಾರು, ಇದರ ಹಿಂದಿರುವ ಉದ್ದೇಶ ಏನು ಎಂಬುದರ ಕುರಿತು ಸಮಗ್ರವಾಗಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜಶೆಟ್ಟಿ, ವಂದೇ ಮಾತರಂ ಟ್ರಸ್ಟ್ ಚಿಪ್ರಗುತ್ತಿ ಪ್ರಶಾಂತ್, ಬಿಜೆಪಿ ಮುಖಂಡರಾದ ಸೀತಾರಾಮ ಭರಣ್ಯ, ಸಿ.ಎಚ್.ಲೋಕೇಶ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಶ್ರಿಕಾಂತ್ ಪೈ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.