ADVERTISEMENT

ಕಡೂರು | ಇ–ಸ್ವತ್ತು ನೀಡಲು ಕ್ರಮ ಕೈಗೊಳ್ಳಿ: ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2025, 13:01 IST
Last Updated 17 ಏಪ್ರಿಲ್ 2025, 13:01 IST
ಶಾಸಕ ಕೆ.ಎಸ್.ಆನಂದ್ ಅಧ್ಯಕ್ಷತೆಯಲ್ಲಿ ಗ್ರಾಮವಾರು ಪ್ರಗತಿ ಪರಿಶೀಲನಾ ಸಭೆ ನಡೆಯಿತು
ಶಾಸಕ ಕೆ.ಎಸ್.ಆನಂದ್ ಅಧ್ಯಕ್ಷತೆಯಲ್ಲಿ ಗ್ರಾಮವಾರು ಪ್ರಗತಿ ಪರಿಶೀಲನಾ ಸಭೆ ನಡೆಯಿತು   

ಕಡೂರು: ‘ಕಂದಾಯ ಗ್ರಾಮವೆಂದು ಘೋಷಣೆಯಾಗಿ ಹಕ್ಕು ಪತ್ರ ಪಡೆದವರಿಗೆ ಇ–ಸ್ವತ್ತು ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಕೆ.ಎಸ್.ಆನಂದ್ ಸೂಚಿಸಿದರು.

ತಾಲ್ಲೂಕಿನಲ್ಲಿರುವ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮ ಅಥವಾ ಉಪಗ್ರಾಮಗಳನ್ನಾಗಿಸುವ ಅಥವಾ ಗ್ರಾಮ ಠಾಣಾ ವಿಸ್ತರಣೆ ಕುರಿತು ನಡೆದ ಗ್ರಾಮವಾರು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ಹಲವಾರು ಕಂದಾಯ ಗ್ರಾಮ- ಉಪ ಗ್ರಾಮಗಳಾಗಬೇಕಿದ್ದು, ಅಂತಿಮ ಅಧಿಸೂಚನೆ ಹೊರಡಿಸಿ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಬೇಕಿದೆ. ಈ ಕಾರ್ಯವನ್ನು ಆದ್ಯತೆ ಮೇಲೆ ಮಾಡಬೇಕು ಎಂದು ಸೂಚಿಸಿದರು.

ADVERTISEMENT

ಬಿಸಿಲು ಹೆಚ್ಚಾಗತೊಡಗಿದ್ದು, ಕುಡಿಯುವ ನೀರಿನ‌ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿ ಗ್ರಾಮಸ್ಥರುಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುವಂತೆ ಎಲ್ಲ ಪಿಡಿಒಗಳು ಎಚ್ಚರ ವಹಿಸಬೇಕು. ಕಸ ವಿಲೇವಾರಿಗೆ ಜಾಗ ಇಲ್ಲದೆ ಇದ್ದರೆ ಜಾಗ ಮಂಜೂರು ಮಾಡಿಸಿಕೊಳ್ಳಲು ಪ್ರಸ್ತಾವನೆ ಸಲ್ಲಿಸಬೇಕು. ಜಾಗ ಮಂಜೂರಾಗಿದ್ದರೆ ಮೂಲ ಸೌಲಭ್ಯ ಕಲ್ಪಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ನರೇಗಾ ಯೋಜನೆಯಲ್ಲಿ 2024- 25ನೇ ಸಾಲಿನಲ್ಲಿ ನಿಗದಿತ ಗುರಿಗಿಂತ ಹೆಚ್ಚು ಮಾನವ ದಿನಗಳ ಸೃಜಿಸಿ ಸಾಧನೆ ಮಾಡಿರುವ ಹಾಗೂ 2024-25ನೇ ಸಾಲಿನಲ್ಲಿ ತೆರಿಗೆ ವಸೂಲಾತಿಯಲ್ಲಿ ಶೇ 100 ವಸೂಲಾತಿ ಮಾಡಿರುವುದು ಶ್ಲಾಘನೀಯ ಎಂದರು.

ನೂತನ ಕಂದಾಯ ಗ್ರಾಮ- ಉಪಗ್ರಾಮಗಳ ರಚನೆ ಕುರಿತ ಕಾರ್ಯಗಳನ್ನು ತುರ್ತಾಗಿ ಮುಗಿಸಿದರೆ ಕಂದಾಯ ಸಚಿವರ ಉಪಸ್ಥಿತಿಯಲ್ಲಿ ಹಕ್ಕು ಪತ್ರ ವಿತರಿಸಲು ಅನುಕೂಲವಾಗುತ್ತದೆ. ಎಲ್ಲರೂ ಈ ಬಗ್ಗೆ ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದರು.

ತಹಶೀಲ್ದಾರ್ ಸಿ‌.ಎಸ್.ಪೂರ್ಣಿಮಾ ಮಾತನಾಡಿ, ತಾಲ್ಲೂಕಿನಲ್ಲಿ 314 ಕಂದಾಯ ಗ್ರಾಮಗಳಿವೆ. ಹೊಸ ಕಂದಾಯ ಗ್ರಾಮಗಳ ರಚನೆಗಾಗಿ 80 ಗ್ರಾಮಗಳನ್ನು ಗುರುತಿಸಲಾಗಿದೆ. 51 ಗ್ರಾಮಗಳನ್ನು ಸರ್ಕಾರ ಅನುಮೋದಿಸಿ ಅಂತಿಮ ಅಧಿಸೂಚನೆ ಹೊರಡಿಸಿದೆ. 13 ಗ್ರಾಮಗಳಿಗೆ ಸರ್ಕಾರದ ಪ್ರಾಥಮಿಕ ಅಧಿಸೂಚನೆ ದೊರೆಯಬೇಕಿದೆ. 12 ಗ್ರಾಮಗಳ ಅಂತಿಮ ಅಧಿಸೂಚನೆ ಬಾಕಿ ಉಳಿದಿದೆ. 2,500 ಫಲಾನುಭವಿಗಳನ್ನು ಗುರುತಿಸಲಾಗಿದೆ. ಅನುಮೋದನೆ ನೀಡಲು 414 ಅರ್ಜಿಗಳು ಬಾಕಿ ಇವೆ. ನಿರ್ವಾಹಕರ ಲಾಗಿನ್‌ನಲ್ಲಿ 857 ಅರ್ಜಿಗಳು, ಗ್ರಾಮ ಆಡಳಿತಾಧಿಕಾರಿಗಳ ಬಳಿ 176 ಅರ್ಜಿಗಳು ಬಾಕಿ ಇವೆ. ಈಗಾಗಲೇ 1,053 ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ ಎಂದು ವಿವರ ನೀಡಿದರು.

ತಾಲ್ಲೂಕು ಪಂಚಾಯಿತಿ ಇಒ ಸಿ.ಆರ್.ಪ್ರವೀಣ್, ಸರ್ವೆ ಇಲಾಖೆ ಎಡಿಎಲ್ಆರ್ ಶ್ರೀನಿಧಿ, ಕಂದಾಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.