ADVERTISEMENT

ಬಾಬಾ ಬುಡನ್‌ಗಿರಿ | ಸ್ಥಳೀಯರಿಗೆ ಪಾಸ್ ಕಡ್ಡಾಯ ಬೇಡ: ಗೌಸ್‌ಮೊಹಿದ್ದೀನ್

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 5:33 IST
Last Updated 3 ಆಗಸ್ಟ್ 2025, 5:33 IST
ಗೌಸ್‌ ಮೊಹಿಯುದ್ದೀನ್
ಗೌಸ್‌ ಮೊಹಿಯುದ್ದೀನ್   

ಚಿಕ್ಕಮಗಳೂರು: ಗುರು ದತ್ತಾತ್ರೇಯ ಬಾಬಾ ಬುಡನ್‌ಗಿರಿ ಸ್ವಾಮಿ ವ್ಯಾಪ್ತಿಗೆ ಮತ್ತು ಗಿರಿಭಾಗಕ್ಕೆ ತೆರಳುವ ಸ್ಥಳೀಯರಿಗೆ ಯಾವುದೇ ಪಾಸ್ ಕಡ್ಡಾಯ ಮಾಡಬಾರದು. ಹಿಂದಿನಂತೆ ಓಡಾಡಲು ಅವಕಾಶ ನೀಡಬೇಕು ಎಂದು ಎದ್ದೇಳು ಕರ್ನಾಟಕ ರಾಜ್ಯ ಸಮಿತಿ ಸಂಚಾಲಕ ಗೌಸ್‌ಮೊಹಿದ್ದೀನ್ ಒತ್ತಾಯಿಸಿದರು.

‘ಪ್ರವಾಸಿಗರಿಗೆ ಆನ್‌ಲೈನ್ ನೋಂದಣಿಗೆ ಮತ್ತು ಗಿರಿ ಪ್ರದೇಶದಲ್ಲಿ ವಾಸಿಸುತ್ತಿರುವ ಸ್ಥಳೀಯರಿಗೂ ಪಾಸ್ ತೆಗೆದುಕೊಳ್ಳಲು ಜಿಲ್ಲಾ ಆಡಳಿತ ಸೂಚಿಸಿದೆ. ಈ ವಿಚಾರವಾಗಿ ಐ.ಡಿ ಪೀಠ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. 

‘ನೂರಾರು ವರ್ಷಗಳಿಂದ ಈ ಭಾಗದಲ್ಲಿ ವಾಸಿಸುವವರು ಎನ್.ಎಂ.ಡಿ.ಸಿ ಕೈಮರ ಚೆಕ್ ಪೋಸ್ಟ್‌ನಲ್ಲಿ ಸ್ಥಳೀಯ ಪಾಸ್‌ಗಳನ್ನು ತೋರಿಸಿ ನಮ್ಮ ಊರು, ನಮ್ಮ ಮನೆಗೆ ಬರುವದು ನಮ್ಮ ಮೂಲಭೂತ ಹಕ್ಕಿನ ವಿರುದ್ಧವಾಗಿದೆ. ನಮ್ಮ ಊರು ನಮ್ಮ ಮನೆಗೆ ನಿಮ್ಮ ಅನುಮತಿ ಪಡೆದು ಬರುವುದಕ್ಕೆ ನಮಗೆ ಸ್ವತಂತ್ರವೇ ಇಲ್ಲದಂತಾಗುತ್ತದೆ‘ ಎಂದು ಹೇಳಿದರು.

ADVERTISEMENT

ಈ ಭಾಗದಲ್ಲಿ ಹಲವು ಧಾರ್ಮಿಕ ಸ್ಥಳಗಳಿದ್ದು, ಮುಳ್ಳಯ್ಯನಗಿರಿ ಮಠ, ಸೀತಾಳಯ್ಯನ ಮಠ, ಬಿಸಗ್ನಿ ಮಠ, ಇನಾಂ ದತ್ತಾತ್ರೇಯ ಪೀಠ, ಬಾಬಾ ಬುಡನ್ ಗಿರಿ ಸ್ವಾಮಿ ದರ್ಗಾ, ಶ್ರೀ ಭೈರವೇಶ್ವರ ಬೆಟ್ಟ,  ಹೊನ್ನಮ್ಮದೇವಿ ಹಳ್ಳ ಈ ಪವಿತ್ರ ಕ್ಷೇತ್ರಗಳಿಗೆ ಬರುವ ಭಕ್ತಾಧಿಕಾರಿಗಳಿಗೆ ಅದರಲ್ಲೂ ಅನಕ್ಷರಸ್ಥ ಓದಲು, ಬರೆಯಲು ಬರದ ಭಕ್ತಾಧಿಗಳಿಗೆ ಆನ್‌ಲೈನ್ ನೋಂದಣಿ ವ್ಯವಸ್ಥೆ ಬಗ್ಗೆ ತಿಳಿದಿರುವುದಿಲ್ಲ. ಈ ರೀತಿ ಪವಿತ್ರ ಕ್ಷೇತ್ರಗಳಿಗೆ ಬರುವ ಭಕ್ತಾಧಿಕಾರಿಗಳಿಗೆ ಆನ್‌ಲೈನ್ ಬುಕಿಂಗ್ ಮತ್ತು ಲೋಕಲ್ ಪಾಸ್ ವ್ಯವಸ್ಥೆ ಗೊಂದಲ ಉಂಟು ಮಾಡುತ್ತದೆ ಎಂದರು.

ಈ ನಿರ್ಧಾರವನ್ನು ಜಿಲ್ಲಾಡಳಿತ ಆ.13ರ ಒಳಗೆ ಕೈ ಬಿಡದೆ ಇದ್ದಲ್ಲಿ ನಗರದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.  

ಈಗ ಇರುವ ಸಮಿತಿ ರದ್ದು ಮಾಡಿ ಪಾರದರ್ಶಕವಾದ ಸಮಿತಿ ರಚನೆ ಮಾಡಬೇಕು. ಗೊಂದಲಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯೆ ಆಶಾ ಸಂತೋಷ್, ದಿವಾಕರ್, ಪುಟ್ಟಸ್ವಾಮಿ, ರೀತು, ವೀಣಾ, ಗಣೇಶ್, ಚಂದ್ರು ಉಪಸ್ಥಿತರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.