ADVERTISEMENT

ಚುನಾವಣೆಗಳೂ ಇಂದು ಪಾವಿತ್ರ್ಯ ಕಳೆದುಕೊಳ್ಳುತ್ತಿವೆ: ವೈ.ಎಸ್.ವಿ.ದತ್ತ

ಮಾಜಿ ಶಾಸಕ ವೈ.ಎಸ್.ವಿ.ದತ್ತ ವಿಷಾದ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2020, 3:49 IST
Last Updated 23 ಡಿಸೆಂಬರ್ 2020, 3:49 IST
ವೈ.ಎಸ್.ವಿ.ದತ್ತ
ವೈ.ಎಸ್.ವಿ.ದತ್ತ   

ಕಡೂರು: ‘ಜನತಂತ್ರದ ಗಟ್ಟಿಬೇರು ಇರುವುದೇ ಗ್ರಾಮೀಣ ಭಾಗದಲ್ಲಿ’ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ತಿಳಿಸಿದರು.

ತಾಲ್ಲೂಕಿನ ಯಗಟಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕ್ರೀಡಾ ಮನೋಭಾವ ದಿಂದ ನಡೆಯುತ್ತಿದ್ದ ಚುನಾವಣೆಗಳೂ ಇಂದು ಪಾವಿತ್ರ್ಯ ಕಳೆದುಕೊಳ್ಳುತ್ತಿವೆ. ಬಹುತೇಕ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಚುನಾವಣೆಯೆಂಬುದನ್ನು ಸ್ವಅಭಿವೃದ್ಧಿ ಸಾಧನವಾಗಿ ಮಾಡಿಕೊಂಡಿರುವುದು ಈ ಅಪಸವ್ಯಗಳಿಗೆ ಕಾರಣ’ ಎಂದು ವಿಷಾದಿಸಿದರು.

‘ಮೇಲ್ಮನೆಯಲ್ಲಿ ನಡೆದ ಘಟನಾವಳಿಗಳು ಪ್ರಜಾಪ್ರಭುತ್ವಕ್ಕೆ ಕಪ್ಪುಚುಕ್ಕೆ. ಲೋಹಿಯಾ ಕಾಲದ ಪ್ರಬುದ್ಧ ರಾಜಕೀಯ ನೋಟ ಈಗಿಲ್ಲ. ಮೇಲ್ಮಟ್ಟದಲ್ಲಿ ಹಾಳಾಗಿರುವುದಲ್ಲದೆ ‘ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ’ ಎಂಬಂತೆ ಗ್ರಾಮ ಪಂಚಾಯಿತಿಗಳಲ್ಲೂ ಇದೇ ಪರಿಪಾಟ ಆರಂಭವಾಗಿದೆ’ ಎಂದು ಹೇಳಿದರು.

ADVERTISEMENT

‘ಗ್ರಾಮ ಸ್ವರಾಜ್ಯದ ಕಲ್ಪನೆ ಖಂಡಿತ ಇದಲ್ಲ. ಕೋಟಿಗಟ್ಟಲೆ ಅನುದಾನ ಪಡೆಯುವ ಅವಕಾಶ ಗ್ರಾಮ ಪಂಚಾಯಿತಿಗಳಲ್ಲಿದ್ದರೂ ಕರೆಂಟ್ ಬಿಲ್, ನಲ್ಲಿ ನೀರು ಬಿಡುವವನಿಗೆ ಕೊಡಲು ಸಂಬಳವಿಲ್ಲವೆಂಬ ಮಾತು ಆಗಾಗ ಕೇಳಿ ಬರುತ್ತಿರುವುದು ವಿಪರ್ಯಾಸ. ಇದಕ್ಕೆ ಕಾರಣ ರಾಜಕೀಯ ಪಕ್ಷಗಳು ಮತ್ತು ಮುಖಂಡರ ಆಟಾಟೋಪಗಳು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.