
ಕಡತ
(ಸಾಂದರ್ಭಿಕ ಚಿತ್ರ)
ಚಿಕ್ಕಮಗಳೂರು: ಶೃಂಗೇರಿ ತಾಲ್ಲೂಕಿನ ಕೆರೆ ಗ್ರಾಮದ ಸುತ್ತಮುತ್ತಲ ಜನವಸತಿಯನ್ನು ಕುದುರೆಮುಖ ರಾಷ್ಟ್ರೀಯ ಉದ್ಯಾನದಿಂದ ಹೊರ ತಂದು ಪುನರ್ವಸತಿ ಕಲ್ಪಿಸಲು ಸಿದ್ಧತೆ ಮಾಡಿಕೊಂಡಿರುವ ಜಿಲ್ಲಾಡಳಿತ, ಈಗ ಅಗತ್ಯ ಅನುದಾನಕ್ಕಾಗಿ ಸರ್ಕಾರದ ಕಡೆ ಮುಖ ಮಾಡಿದೆ.
ಇತ್ತೀಚೆಗೆ ಕೆರೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಒಂದೇ ದಿನ ಇಬ್ಬರು ಮೃತಪಟ್ಟಿದ್ದರು. ರಾಷ್ಟ್ರೀಯ ಉದ್ಯಾನದಲ್ಲಿ ಉಳಿದರುವ ಕುಟುಂಬಗಳನ್ನು ಸ್ಥಳಾಂತರ ಮಾಡಬೇಕು ಎಂದು ಸ್ಥಳೀಯರು ನಿರಂತರ ಹೋರಾಟ ನಡೆಸುತ್ತಿದ್ದಾರೆ.
ಕೆರೆಕಟ್ಟೆ ವಲಯ ವ್ಯಾಪ್ತಿಯಲ್ಲಿ ಕೆರೆ ಗ್ರಾಮದಲ್ಲಿ ಮೃತಪಟ್ಟ ಇಬ್ಬರ ಕುಟುಂಬ ಸೇರಿ 40ಕ್ಕೂ ಹೆಚ್ಚು ಕುಟುಂಬಗಳನ್ನು ತುರ್ತಾಗಿ ಸ್ಥಳಾಂತರ ಮಾಡಲು ಮುಂದಾಗಿದೆ. ಪ್ರತಿ ಕುಟುಂಬದ ಹೆಸರಿನಲ್ಲಿ ಕಡತಗಳನ್ನು ಸಿದ್ಧಪಡಿಸಿ ಅಗತ್ಯ ಇರುವ ಹಣ ಬಿಡುಗಡೆ ಮಾಡಲು ಸರ್ಕಾರಕ್ಕೆ ಜಿಲ್ಲಾಡಳಿತ ಕೋರಿಕೆ ಸಲ್ಲಿಸಿದೆ.
ತುರ್ತಾಗಿ ಅರಣ್ಯದಿಂದ ಹೊರಕ್ಕೆ ತಂದು ಪುನರ್ಸತಿ ಕಲ್ಪಿಸಲು ಅಗತ್ಯ ಇರುವ ₹22 ಕೋಟಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ವಿಧವರೆಯರು, ತಾಯಂದರನ್ನು ಆದ್ಯತೆಯ ಮೇರೆಗೆ ಕಾಡಿನಿಂದ ಹೊರ ತರಲು ಮುಂದಾಗಿದೆ. ಸರ್ಕಾರದಿಂದ ಹಣ ಬಿಡುಗಡೆಯಾದರೆ ಕೆರೆ ಗ್ರಾಮ ಮತ್ತು ಸುತ್ತಮುತ್ತಲ ಜನವಸತಿಗಳಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ.
ಹಣದ ಕೊರತೆಯಿಂದಲೇ 25 ವರ್ಷಗಳಿಂದ ಕಾಡಿನಿಂದ ಹೊರ ಬರಲು ಸಾಧ್ಯವಾಗದೆ ತೊಂದರೆಗೆ ಸಿಲುಕಿವೆ. ನಿತ್ಯ ಮಾನವ ಹಾಗೂ ಕಾಡು ಪ್ರಾಣಿಗಳ ಸಂಘರ್ಷ ನಡೆಯುತ್ತಲೇ ಇದೆ. 2018ರಿಂದ ಈಚೆಗೆ ಜಿಲ್ಲೆಯಲ್ಲಿ 22 ಜನರು ಆನೆ ದಾಳಿಗೆ ಬಲಿಯಾಗಿದ್ದಾರೆ. ಇತ್ತ ಆನೆಗಳು ಸಹ ಮೃತಪಟ್ಟಿವೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಉಳಿದಿರುವ ಕುಟುಂಬಗಳನ್ನು ಹೊರಕ್ಕೆ ತಾರದ ಹೊರತು ಆ ಭಾಗದ ವನ್ಯಜೀವಿ–ಮಾನವ ಸಂಘರ್ಷ ನಿಲ್ಲುಸುವುದಿಲ್ಲ. ಅಗತ್ಯ ಇರುವ ಅನುದಾನವನ್ನು ಒಂದೇ ಬಾರಿಗೆ ಬಿಡುಗಡೆ ಮಾಡಿ ಅಷ್ಟೂ ಕುಟುಂಬಗಳನ್ನು ಸ್ಥಳಾಂತರ ಮಾಡಿದರೆ ಜೀವಗಳು ಉಳಿಯಲಿವೆ. ಇಲ್ಲದಿದ್ದರೆ ಈ ಸಂಘರ್ಷ ನಿರಂತರವಾಗಲಿದೆ. ಮತ್ತಷ್ಟು ಜನ ಬಲಿಯಾಗಲಿದ್ದಾರೆ. ಈ ವಿಷಯವನ್ನು ಸರ್ಕಾರ ಆದ್ಯತೆಯಾಗಿ ಪರಿಗಣಿಸಬೇಕು ಎಂಬುದು ಸ್ಥಳೀಯರ ಒತ್ತಾಯ.
ಪ್ರಸ್ತುತ ಮೌಲ್ಯದಲ್ಲಿ ಪರಿಹಾರ ಕಲ್ಪಿಸಲು ಆಗ್ರಹ
ಶೃಂಗೇರಿ: ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆ ಜನರಿಗೆ ಪುನರ್ವಸತಿ ಕಲ್ಪಿಸಲು 2025ರ ದರದ ಅನುಗುಣವಾಗಿ ಪರಿಹಾರ ನೀಡಬೇಕು ಎಂದು ಕುದುರೆಮುಖ ರಾಷ್ಟ್ರೀಯ ಉದ್ಯಾನ ಪುನರ್ವಸತಿ ಹೋರಾಟ ಸಮಿತಿಯ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದೆ.
ಈ ಕುರಿತು ಬೆಂಗಳೂರಿನಲ್ಲಿ ಸಚಿವರಿಗೆ ಮನವಿ ಸಲ್ಲಿಸಿದ ಪದಾಧಿಕಾರಿಗಳು, ಕುದುರೆಮುಖ ರಾಷ್ಟ್ರೀಯ ಉದ್ಯಾನದ ಪುನರ್ವಸತಿ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜವಾಬ್ದಾರಿ ಸಮನಾಗಿದ್ದು, ಮಲೆನಾಡಿನಲ್ಲಿ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡಿ ಕುದುರೆಮುಖದ ಮೂಲ ನಿವಾಸಿಗಳಿಗೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.
ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆಯ 2003ರಲ್ಲಿ ಘೋಷಣೆಯಾಗಿದ್ದು, ಇಲ್ಲಿಯ ಮೂಲ ನಿವಾಸಿಗಳಿಗೆ 2008ರ ಒಳಗೆ ಪುನರ್ವಸತಿ ಮತ್ತು ಪರಿಹಾರ ನೀಡಲು ಸರ್ಕಾರ ಆದೇಶ ಮಾಡಲಾಗಿದ್ದು, ಕೆಲವರಿಗೆ ಇದುವರೆಗೂ ಪರಿಹಾರ ನೀಡದೆ, 2025ರಲ್ಲಿ 2005ರ ಮೌಲ್ಯಕ್ಕೆ ಅನುಗುಣವಾಗಿ ಪರಿಹಾರವನ್ನು ನೀಡಲು ಮುಂದಾಗಿದೆ. ಇದರಿಂದ ಅನೇಕ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿಯಿದೆ. ಹಾಗಾಗಿ 2005ರ ಪುನರ್ವಸತಿ ಪ್ಯಾಕೇಜಿನಲ್ಲಿ ಕೊಟ್ಟ ಎಲ್ಲಾ ಮೌಲ್ಯಗಳನ್ನು 2025ರ ಮಾರುಕಟ್ಟೆ ದರಕ್ಕೆ ಹೋಲಿಕೆ ಮಾಡಿ, ಆದೇಶಗಳನ್ನು ಪುನರ್ ಪರಿಶೀಲಿಸಬೇಕು' ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಸಚಿವ ಕುಮಾರಸ್ವಾಮಿ, ಕುದುರೆಮುಖ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಒಳಗಿರುವ ಜನರ ಎಲ್ಲಾ ಸಮಸ್ಯೆಗಳ ಅರಿವಿದೆ. ಈ ಕುರಿತು ಕೇಂದ್ರ ಅರಣ್ಯ ಸಚಿವರು ಮತ್ತು ಕಂದಾಯ ಸಚಿವರ ಬಳಿ ಚರ್ಚಿಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ಸಮಿತಿಯ ಅಧ್ಯಕ್ಷ ಮಾತೋಳ್ಳಿ ಸುನಿಲ್, ಅರುಣ್ ಕುಮಾರ್, ಪ್ರದೀಪ್ ಕೂಳೆಗದ್ದೆ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ, ತಾಲ್ಲೂಕು ಘಟಕದ ಅಧ್ಯಕ್ಷ ಭರತ್ ಗಿಣಿಕಲ್, ನೂತನ್ ಕುಮಾರ್, ದಿನೇಶ್ ಹೆಗ್ಡೆ, ಪ್ರದೀಪ್ ಕೂಳೆಗದ್ದೆ, ಸುಧಾಕರ್, ದೇವೆಂದ್ರ ಹುಲುಗಾರುಮನೆ, ಧರ್ಮ ನಾಯ್ಕ, ಅರುಣ್ ಉಡ್ತಾಳು, ನಾಗರಾಜ್, ರೂಪೇಶ್ , ಸಮಿತಿ ಸದಸ್ಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.